ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಶಿಖರದ ಮೇಲೆ ಸುವರ್ಣ ಕಳಸ ವಿರಾಜಮಾನ !

ಕೊಲ್ಲಾಪುರ – ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪಸಿಂಹ ರಾಣೆ ಅವರು ದಾನ ಮಾಡಿದ ಒಂದೂವರೆ ಕೇಜಿ ಚಿನ್ನದಿಂದ ಸಿದ್ಧಪಡಿಸಲಾದ ಸುವರ್ಣ ಕಳಸವನ್ನು ಶ್ರೀ ಮಹಾಲಕ್ಷ್ಮಿ ದೇವಿಯ ದೇವಸ್ಥಾನದ ಶಿಖರದ ಮೇಲೆ ವಿರಾಜಮಾನಗೊಳಿಸಲಾಯಿತು. ಜೂನ್ 12ರ ಮುಂಜಾನೆ 4 ಗಂಟೆಗೆ ಈ ಪ್ರಕ್ರಿಯೆ ಪೂರ್ಣಗೊಂಡಿತು. ಪ್ರಸ್ತುತ ದೇವಸ್ಥಾನದಲ್ಲಿ ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಆದ್ದರಿಂದ ಕೆಲಸ ಪೂರ್ಣಗೊಂಡ ನಂತರ ಯೋಗ್ಯ ಮುಹೂರ್ತವನ್ನು ನೋಡಿ ಅದನ್ನು ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗುವುದು ಎಂದು ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಶಿವರಾಜ ನಾಯಿಕವಾಡೆ ತಿಳಿಸಿದ್ದಾರೆ.

ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪಸಿಂಹ ರಾಣೆ

1. ಮೂರೂವರೆ ಶಕ್ತಿಪೀಠಗಳಲ್ಲಿ ಒಂದಾದ ಕರವೀರ ನಿವಾಸಿನಿ ಶ್ರೀ ಮಹಾಲಕ್ಷ್ಮಿ ದೇವಿಯ ಶಿಖರದ ಮೇಲೆ ಮಳೆ ನೀರು ಸೋರುತ್ತಿದ್ದರಿಂದ ಕಲ್ಲಿನ ಭಾಗದ ಮೇಲೆ ಪೊದೆಗಳು ಮತ್ತು ಹುಲ್ಲು ಬೆಳೆಯಲಾರಂಭಿಸಿದ್ದವು. ಶತಮಾನಗಳ ಇತಿಹಾಸವನ್ನು ಜತನದಿಂದ ಕಾಯ್ದುಕೊಂಡಿರುವ ಈ ಪ್ರಾಚೀನ ಶಿಖರವನ್ನು ಹೇಗೆ ಸಂರಕ್ಷಿಸುವುದು? ಎಂಬ ಬಗ್ಗೆ ಚರ್ಚೆ ಆರಂಭವಾಯಿತು. ಅದರಿಂದ ಶಿಖರದ ಆಕಾರದ ತಾಮ್ರದ ರಕ್ಷಣಾತ್ಮಕ ಕವಚವನ್ನು ಅಳವಡಿಸುವ ಪರಿಕಲ್ಪನೆ ಮುನ್ನೆಲೆಗೆ ಬಂದಿತು. ಶಿಖರದ ಅಳತೆಗಳನ್ನು ತೆಗೆದುಕೊಂಡು ನಕ್ಷೆಗಳನ್ನು ಸಿದ್ಧಪಡಿಸಲಾಯಿತು. ಇದೇ ಅವಧಿಯಲ್ಲಿ ಗೋವಾದ ಪ್ರತಾಪಸಿಂಹ ರಾಣೆ ಅವರು ಕೊಲ್ಲಾಪುರಕ್ಕೆ ಬಂದಿದ್ದಾಗ, ಮುಖ್ಯ ಕಳಸದ ಮೇಲೆ ಸುವರ್ಣ ಕಳಸವನ್ನು ಅಳವಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅದರಂತೆ ರಾಣೆ ಅವರು ಈ ಕಳಸವನ್ನು ಸಿದ್ಧಪಡಿಸಿ ದೇವಿಗೆ ಅರ್ಪಿಸಿದರು.

2. ದೇವಿಯ ದೇವಸ್ಥಾನದ ಮೂಲ ಶಿಖರವು 6 ಅಡಿ ಎತ್ತರವಿದ್ದು, ಅದರ ಮೇಲಿನ ಗೋಲಾಕಾರದ ಗುಮ್ಮಟವು ಏಳೂವರೆ ಅಡಿ ವ್ಯಾಸವನ್ನು ಹೊಂದಿದೆ. ಕಪ್ಪು ಕಲ್ಲಿನ ಈ ಶಿಖರವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅದಕ್ಕೆ ಒಪ್ಪುವಂತಹ ಕಳಸವನ್ನು ಸಿದ್ಧಪಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಯಿತು. ಪ್ರಾಚೀನ ವಾಸ್ತುವಿನ ಮೂಲ ಸೌಂದರ್ಯಕ್ಕೆ ಧಕ್ಕೆ ತರದೇ ಅದರ ವೈಭವವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಕಳಸ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯದ ಮಂಗಳೂರಿನ ನುರಿತ ಕುಶಲಕರ್ಮಿಗಳಿಗೆ ವಹಿಸಲಾಗಿತ್ತು. ದೇವಸ್ಥಾನದ ವಾಸ್ತುಶಿಲ್ಪದ ಸಾಂಪ್ರದಾಯಿಕ ಶೈಲಿ ಮತ್ತು ಆಧುನಿಕ ತಾಂತ್ರಿಕ ನಿಖರತೆಯ ಸಂಗಮದೊಂದಿಗೆ ಒಂದೂವರೆ ಕೇಜಿ ಚಿನ್ನದ ಕಳಸವನ್ನು ರೂಪಿಸಲಾಗಿದೆ.

3. ಶಿಖರದ ಆಕಾರ, ಎತ್ತರ, ಗಾಳಿಯ ಒತ್ತಡ ಮತ್ತು ಹವಾಮಾನದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಈ ಕಳಸವನ್ನು ಸಿದ್ಧಪಡಿಸಲಾಗಿದೆ. ಕ್ರೇನ್ ಸಹಾಯದಿಂದ 200 ಕೇಜಿ ತೂಕದ ತಾಮ್ರದ ಕವಚ ಮತ್ತು ಇತರ ಸಾಮಗ್ರಿಗಳನ್ನು ಶಿಖರದವರೆಗೆ ತಲುಪಿಸಲಾಯಿತು.

4. ಮಳೆ ನೀರು ಸೋರದಂತೆ ತಡೆಯಲು, ಕಳಸದ ಸುತ್ತಲಿನ ಗೋಲಾಕಾರದ ಗುಮ್ಮಟಕ್ಕೆ 200 ಕೇಜಿ ತೂಕದ ತಾಮ್ರದ ಕವಚವನ್ನು ತಯಾರಿಸಲಾಗಿದೆ. ಕಾಸವ ಮಂಟಪದ ಮೇಲಿನ ಕಳಸಕ್ಕೆ ಮೊದಲ ಕವಚವನ್ನು ಅಳವಡಿಸಲಾಯಿತು, ಇದರ ನಂತರ ದೇವಸ್ಥಾನದ ಮುಖ್ಯ ಶಿಖರದ ಮೇಲಿನ ಕಳಸದ ಕೆಲಸವನ್ನು ಪೂರ್ಣಗೊಳಿಸಲಾಯಿತು.