ಭಾರತೀಯ ಸಂತ ಮಹಾಪರಿಷತ್ತಿನ ಸಂತ ಸಮನ್ವಯಕಿ ಸ್ವಾಮಿನಿ ಉನ್ಮೇಷ್ ಭಾರತಿ ಅವರಿಂದ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ!

ಮಹಾಪರಿಷತ್ತಿನ ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ಸಂತ-ಮಹಂತರ ಸಮ್ಮೇಳನಕ್ಕೆ ಸನಾತನ ಸಂಸ್ಥೆಗೆ ಆಮಂತ್ರಣ

ಸ್ವಾಮಿನಿ ಉನ್ಮೇಷ ಭಾರತಿ ಅವರನ್ನು ಸನ್ಮಾನಿಸುತ್ತಿರುವ ಸನಾತನದ ಸಾಧಕಿ ಅಶ್ವಿನಿ ಕುಲಕರ್ಣಿ

ರಾಮನಾಥಿ (ಗೋವಾ) – ಭಾರತೀಯ ಸಂತ ಮಹಾಪರಿಷತ್ತಿನ ಸಂತ ಸಮನ್ವಯಕಿ ಮತ್ತು ಕೈಲಾಸ ಮಠದ ಪ್ರತಿನಿಧಿ ಸ್ವಾಮಿನಿ ಉನ್ಮೇಷ್ ಭಾರತಿ ಅವರು ಏಪ್ರಿಲ್ 24 ರಂದು ಇಲ್ಲಿನ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿದರು. ಅವರು ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ನಿವಾಸಿಯಾಗಿದ್ದಾರೆ. ಅವರೊಂದಿಗೆ ಕೈಲಾಸ ಮಠದ ಅನುಯಾಯಿ ಶ್ರೀಮತಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ಸನಾತನದ ಸಾಧಕ ಶ್ರೀ. ಅಭಿಷೇಕ ಪೈ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮ ಪ್ರಸಾರ ಕಾರ್ಯದ ಬಗ್ಗೆ ಅವರಿಗೆ ಮಾಹಿತಿ ನೀಡಿದರು.

ಪೂ. ಪೃಥ್ವಿರಾಜ್ ಹಜಾರೆ ಅವರನ್ನು ಸನ್ಮಾನಿಸುತ್ತಿರುವ ಸ್ವಾಮಿನಿ ಉನ್ಮೇಷ ಭಾರತಿ

ತರುವಾಯ ನಡೆದ ಸಮಾರಂಭದಲ್ಲಿ ಸನಾತನ ಸಂಸ್ಥೆಯ ಸಾಧಕಿ ಅಶ್ವಿನಿ ಕುಲಕರ್ಣಿ ಅವರು ಸ್ವಾಮಿನಿ ಉನ್ಮೇಷ್ ಭಾರತಿ ಅವರಿಗೆ ಶಾಲು, ತೆಂಗಿನಕಾಯಿ ಮತ್ತು ಹೂವಿನ ಹಾರ ಅರ್ಪಿಸಿ, ಹಾಗೆಯೇ ಸನಾತನದ ಗ್ರಂಥಗಳನ್ನು ಉಡುಗೋರೆಯಾಗಿ ನೀಡಿ ಸನ್ಮಾನಿಸಿದರು. ‘ಆಶ್ರಮಕ್ಕೆ ಬಂದು ನನಗೆ ತುಂಬಾ ಸಂತೋಷವಾಯಿತು. ಆಶ್ರಮವು ತುಂಬಾ ಸುಂದರವಾಗಿದೆ ಮತ್ತು ಅದನ್ನು ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ’ ಎಂದು ಸ್ವಾಮಿನಿ ಉನ್ಮೇಷ್ ಭಾರತಿ ಅವರು ಈ ಮಂಗಳಕರ ಸಂದರ್ಭದಲ್ಲಿ ಪ್ರಶಂಸೆಯ ನುಡಿಗಳನ್ನಾಡಿದರು. ಸನಾತನದ ಸಂತ ಪೂ. ಪೃಥ್ವಿರಾಜ ಹಜಾರೆ ಅವರೊಂದಿಗೆ ಸನಾತನದ ಕೆಲವು ಸಾಧಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎಡಭಾಗದಿಂದ ಶ್ರೀಮತಿ ಜಯಲಕ್ಷ್ಮಿ ಮತ್ತು ಸ್ವಾಮಿನಿ ಉನ್ಮೇಷ ಭಾರತಿ ಅವರಿಗೆ ‘ಸನಾತನ ಪ್ರಭಾತ’ದ ಬಗ್ಗೆ ಮಾಹಿತಿ ನೀಡುತ್ತಿರುವ ಶ್ರೀ ಅಭಿಷೇಕ್ ಪೈ

ಮಹಾಪರಿಷತ್ತಿನ ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ಸಂತ-ಮಹಂತರ ಸಮ್ಮೇಳನಕ್ಕೆ ಸನಾತನ ಸಂಸ್ಥೆಗೆ ಆಮಂತ್ರಣ

ಸ್ವಾಮಿನಿ ಉನ್ಮೇಷ ಭಾರತಿ ಅವರಿಂದ ಸನಾತನ ಸಂಸ್ಥೆಗೆ ನೀಡಲಾದ ಮಹಾಪರಿಷತ್ತಿನ ಆಮಂತ್ರಣವನ್ನು ಸ್ವೀಕರಿಸುತ್ತಿರುವ ಪೂ. ಪೃಥ್ವಿರಾಜ್ ಹಜಾರೆ

ಎಲ್ಲಾ ಸಂತರ ಸಂಘಟನೆಗಾಗಿ ಭಾರತೀಯ ಸಂತ ಮಹಾಪರಿಷತ್ತಿನ ವತಿಯಿಂದ ಬೆಂಗಳೂರಿನಲ್ಲಿ ದೇಶಾದ್ಯಂತದ ಸಂತರು ಮತ್ತು ಮಹಂತರ ಸಮ್ಮೇಳನ ನಡೆದಿತ್ತು. ಅದೇ ರೀತಿಯ ಸಮ್ಮೇಳನವನ್ನು ಮೇ 18 ರಂದು ದೆಹಲಿಯಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದ ಆಮಂತ್ರಣವನ್ನು ಸ್ವಾಮಿನಿ ಉನ್ಮೇಷ್ ಭಾರತಿ ಅವರು ಸನಾತನ ಸಂಸ್ಥೆಗೆ ನೀಡಿದರು. ಸನಾತನದ ಸಂತ ಪೂ. ಪೃಥ್ವಿರಾಜ್ ಹಜಾರೆ ಅವರು ಆಮಂತ್ರಣವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರು ಪೂ. ಹಜಾರೆ ಅವರನ್ನು ಸಹ ಸನ್ಮಾನಿಸಿದರು.

ಗುರುಕೃಪೆ ಸದಾ ಇರಲು ಅವರು ಹೇಳಿದಂತೆ ನಾವು ಆಚರಿಸುತ್ತಿರಬೇಕು! – ಸ್ವಾಮಿನಿ ಉನ್ಮೇಷ ಭಾರತಿ

ಈ ವೇಳೆ ಉಪಸ್ಥಿತರಿದ್ದ ಸಾಧಕರಿಗೆ ಮಾರ್ಗದರ್ಶನ ನೀಡುತ್ತಾ ಸ್ವಾಮಿನಿ ಉನ್ಮೇಷ ಭಾರತಿ ಅವರು, ‘ಯುವಕರಲ್ಲಿ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಕ್ಷಾತ್ರತೇಜ ಇರುತ್ತದೆ, ಆದರೆ ಅವರಲ್ಲಿ ಬ್ರಾಹ್ಮತೇಜ ಕೂಡ ಇರಬೇಕು. ಸಾಧನೆ ಮಾಡುವುದರಿಂದ ಮಾತ್ರ ಅದನ್ನು ಪಡೆಯಲು ಸಾಧ್ಯ. ಈಶ್ವರನ ಸೇವೆ, ಸತ್ಸಂಗ ಮತ್ತು ನಾಮಜಪಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿಯ ಸರ್ವಾಂಗೀಣ ವಿಕಾಸವಾಗುತ್ತದೆ. ಆದ್ದರಿಂದ ನಾವು ಯಾವಾಗಲೂ ಗುರುಗಳ ಚರಣಗಳಲ್ಲಿರಬೇಕು. ನಾವು ಗುರುಗಳ ಚರಣಗಳಿಗೆ ನಮ್ಮ ಶಿರವನ್ನು ಅರ್ಪಿಸಿದರೂ ಅದು ಕಡಿಮೆಯೇ. ನಾವು ಗುರುಗಳಲ್ಲಿ ಯಾವಾಗಲೂ ಸಕಾಮ ವಿಷಯಗಳನ್ನು (ಲೌಕಿಕ ಆಸೆಗಳನ್ನು) ಕೇಳುತ್ತೇವೆ; ಆದರೆ ನಮ್ಮ ದುಃಖವು ನಮ್ಮದೇ ಕರ್ಮದ ಫಲವಾಗಿರುತ್ತದೆ. ಆದ್ದರಿಂದ ಅದನ್ನು ನಾವೇ ಅನುಭವಿಸಬೇಕಾಗುತ್ತದೆ. ಹೀಗಾಗಿ, ನಾವು ಯಾವಾಗಲೂ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಗುರುಗಳಲ್ಲಿ ಬೇಡಬೇಕು. ಅನೇಕ ಜನ್ಮಗಳ ಪುಣ್ಯದಿಂದ ಗುರುಗಳ ಸಹವಾಸ ದೊರೆಯುತ್ತದೆ. ಗುರುಗಳ ಕೃಪೆ ನಮ್ಮ ಮೇಲೆ ಸದಾ ಇರಲು, ಅವರು ಹೇಳಿದಂತೆ ನಾವು ಆಚರಣೆ ಮಾಡಬೇಕು.’