ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ

ಮುರ್ಶಿದಾಬಾದ್ ನಲ್ಲಿ ಅಜ್ಞಾತರಿಂದ ನಾಡಬಾಂಬ್ ಎಸೆತ! : ಅನೇಕರಿಗೆ ಗಾಯ

ಕೋಲಕಾತಾ (ಬಂಗಾಳ) – ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕಾಗಿ ಏಪ್ರಿಲ್ ೨೩ ರಂದು ಮತದಾನ ನಡೆಯಿತು. ಮುರ್ಶಿದಾಬಾದ್‌ ನ ನಾವೋದಾದಲ್ಲಿ ಮತದಾನದ ರಾತ್ರಿ ತಡವಾಗಿ ನಾಡಬಾಂಬ್ ಎಸೆಯಲಾಯಿತು. ಇದರಲ್ಲಿ ಅನೇಕರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಬೆಳಿಗ್ಗೆ ‘ಆಮ್ ಜನತಾ ಉನ್ನಯನ್ ಪಾರ್ಟಿ’ಯ (ಎಜೆಯುಪಿ) ಮುಖ್ಯಸ್ಥ ಹುಮಾಯೂನ್ ಕಬೀರ್ ಘಟನಾ ಸ್ಥಳಕ್ಕೆ ತಲುಪಿದಾಗ, ಅವರಿಗೆ ವಿರೋಧ ವ್ಯಕ್ತವಾಯಿತು. ಈ ಸಮಯದಲ್ಲಿ ಅವರ ಬೆಂಬಲಿಗರು ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಈ ಘಟನೆಯನ್ನು ಪ್ರತಿಭಟಿಸಿ ಹುಮಾಯೂನ್ ಅಲ್ಲಿಯೇ ಆಂದೋಲನ ನಡೆಸುತ್ತಿದ್ದಾರೆ.

ಮಾಲದಾದ ಒಂದು ಮತಗಟ್ಟೆಯಲ್ಲಿ ಮತಯಂತ್ರ (ಇವಿಎಂ) ಕೈಕೊಟ್ಟಿದ್ದರಿಂದ ಗೊಂದಲ ಉಂಟಾಯಿತು. ಜನರು ಚುನಾವಣಾ ಅಧಿಕಾರಿಯನ್ನು ಮುತ್ತಿಗೆ ಹಾಕಿ ಆಂದೋಲನ ನಡೆಸಿದರು. ಮೊದಲ ಹಂತದಲ್ಲಿ ೧೫೨ ಸ್ಥಾನಗಳಿಗೆ ಮತದಾನ ನಡೆದಿದ್ದು, ಉಳಿದ ೧೪೨ ಸ್ಥಾನಗಳಿಗೆ ಏಪ್ರಿಲ್ ೨೯ ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಫಲಿತಾಂಶವು ಮೇ ೪ ರಂದು ಘೋಷಣೆಯಾಗಲಿದೆ.

ಭಾಜಪ ಅಭ್ಯರ್ಥಿಯ ಮೇಲೆ ಹಲ್ಲೆ!

ದಕ್ಷಿಣ ಮಿದ್ನಾಪುರದ ಕುಮಾರಗಂಜ್ ಕ್ಷೇತ್ರದ ಭಾಜಪ ಅಭ್ಯರ್ಥಿ ಸುವೇಂದು ಸರಕಾರ ಅವರ ಮೇಲೆ ದಾಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಸುವೇಂದು ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಓಡುತ್ತಿರುವುದು ಕಂಡುಬಂದಿದೆ. ಅವರೊಂದಿಗೆ ಅವರ ರಕ್ಷಣಾ ಸಿಬ್ಬಂದಿ ಇದ್ದರೂ ಸಹ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ವಿಡಿಯೋದಲ್ಲಿ ಕಂಡುಬಂದವರನ್ನು ತಕ್ಷಣವೇ ಬಂಧಿಸುವಂತೆ ಚುನಾವಣಾ ಆಯೋಗವು ಆದೇಶ ನೀಡಿದೆ.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಿದ್ದರೂ ಸಹ ಇಂತಹ ಘಟನೆ ನಡೆಯುತ್ತಿರುವುದು ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ದಯನೀಯವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ!