‘ಸುರಸಾಮ್ರಾಜ್ಞಿ’ ಆಶಾ ಭೋಸಲೆ ಅವರ ಪಾರ್ಥಿವ ಶರೀರಕ್ಕೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ!

ಮುಂಬಯಿ – ‘ಸುರಸಾಮ್ರಾಜ್ಞಿ’ ಆಶಾ ಭೋಸಲೆ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಏಪ್ರಿಲ್ 13 ರಂದು ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿರುವ ದಿವಂಗತ ಭಾಗೋಜಿ ಕೀರ್ ಹಿಂದೂ ಸ್ಮಶಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಸಂಜೆ 5.15ಕ್ಕೆ ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಪೊಲೀಸರು 21 ಸುತ್ತು ತೋಪು ಸಿಡಿಸುವ ಮೂಲಕ ಆಶಾ ಭೋಸಲೆ ಅವರ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು. ಈ ವೇಳೆ ಗಾಯಕ ಸುದೇಶ್ ಭೋಸಲೆ ಹಾಗೂ ಗಾಯಕ ಅನೂಪ್ ಜಲೋಟಾ ಅವರು ಸ್ವರಾಂಜಲಿ ಅರ್ಪಿಸುವ ಮೂಲಕ ಆಶಾ ಭೋಸಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆಶಾ ಭೋಸಲೆ ಅವರ ಪಾರ್ಥಿವ ಶರೀರವನ್ನು ಲೋವರ್ ಪರೇಲ್‌ನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಆನಂತರ ಹೂವುಗಳಿಂದ ಅಲಂಕರಿಸಲ್ಪಟ್ಟ ವಾಹನದಲ್ಲಿ ಅವರ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ತರಲಾಯಿತು. ಮಾರ್ಗಮಧ್ಯೆ ಹಾಗೂ ಸ್ಮಶಾನದ ಆವರಣದಲ್ಲಿ ಅಂತ್ಯಯಾತ್ರೆಯನ್ನು ವೀಕ್ಷಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮೇಯರ್ ಸೌ. ರಿತು ತಾವಡೆ, ಸಚಿವ ಸಂಪುಟದ ಹಲವು ಸಚಿವರು, ರಾಜಕೀಯ ನಾಯಕರು ಹಾಗೂ ಸಂಗೀತ, ಚಲನಚಿತ್ರ, ಕ್ರೀಡೆ ಮುಂತಾದ ಎಲ್ಲಾ ಕ್ಷೇತ್ರಗಳ ಗಣ್ಯರು ಸ್ಮಶಾನದಲ್ಲಿ ಉಪಸ್ಥಿತರಿದ್ದು, ಆಶಾ ಭೋಸಲೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.