ಮೀರಾ-ಭಾಯಂದರ್ ನಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಂದ ನಕಲಿ ದಾಖಲೆಗಳ ಮೂಲಕ ರಿಕ್ಷಾ ಪರವಾನಗಿ !

ಎಲ್ಲಾ ಪರವಾನಗಿಗಳ ಮರುಪರಿಶೀಲನೆಗೆ ಸಾರಿಗೆ ಸಚಿವರ ನಿರ್ದೇಶನ!

ಸಾಂದರ್ಭಿಕ ಚಿತ್ರ

ಮುಂಬಯಿ – ನಕಲಿ ದಾಖಲೆಗಳ ಆಧಾರದ ಮೇಲೆ ಮೀರಾ-ಭಾಯಂದರ್ ನಲ್ಲಿ ಕೆಲವು ಬಾಂಗ್ಲಾದೇಶಿ ನುಸುಳುಕೋರರು ರಿಕ್ಷಾ ಪರವಾನಗಿಗಳನ್ನು (ಲೈಸೆನ್ಸ್) ಪಡೆದಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಾರಿಗೆ ಸಚಿವ ಪ್ರತಾಪ ಸರನಾಯಕ್ ಅವರು ಮೀರಾ-ಭಾಯಂದರ್ ಪ್ರದೇಶದ ರಿಕ್ಷಾ ಪರವಾನಗಿಗಳ ಮರುಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ ಮತ್ತು ಮೇ ೧ ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಿಳಿಸಿದ್ದಾರೆ. ವಿಶೇಷವೆಂದರೆ, ಮುಂಬರುವ ದಿನಗಳಲ್ಲಿ ರಾಜ್ಯದ ಪ್ರಾದೇಶಿಕ ಸಾರಿಗೆ ಇಲಾಖೆಯ ಎಲ್ಲಾ ವ್ಯಾಪ್ತಿಗಳಲ್ಲಿ ಇಂತಹ ಮರುಪರಿಶೀಲನಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರತಾಪ ಸರನಾಯಕ್ ಘೋಷಿಸಿದ್ದಾರೆ.

ಭಾಜಪ ಮಾಜಿ ಶಾಸಕ ನರೇಂದ್ರ ಮೆಹ್ತಾ ಅವರ ದೂರಿನ ಮೇರೆಗೆ ಪ್ರತಾಪ ಸರನಾಯಕ್ ಅವರು ಈ ವಿಷಯದ ಬಗ್ಗೆ ಏಪ್ರಿಲ್ ೨ ರಂದು ಬಾಂದ್ರಾದಲ್ಲಿರುವ ಮುಂಬಯಿ ಉಪನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಮೇಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಈ ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಆಯುಕ್ತ ರಾಜೇಶ ನಾರ್ವೇಕರ್, ಹೆಚ್ಚುವರಿ ಆಯುಕ್ತ ಭರತ ಕಳಸ್ಕರ್, ಉಪ ಕಾರ್ಯದರ್ಶಿ ಚೇತನ ನಿಕಮ ಅವರು ಪ್ರತ್ಯಕ್ಷವಾಗಿ ಮತ್ತು ರಾಜ್ಯಾದ್ಯಂತದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಉಪಸ್ಥಿತರಿದ್ದರು.

ಪರವಾನಗಿಗಳ ಆಳವಾದ ಪರಿಶೀಲನೆ ನಡೆಸುತ್ತೇವೆ! – ಪ್ರತಾಪ ಸರನಾಯಕ್, ಸಾರಿಗೆ ಸಚಿವ

ಪರವಾನಗಿ ನೀಡುವ ಪ್ರಕ್ರಿಯೆಯು ಆನ್‌ಲೈನ್ ಆಗಿದ್ದರೂ, ನಕಲಿ ದಾಖಲೆಗಳ ಆಧಾರದ ಮೇಲೆ ಪರವಾನಗಿಗಳನ್ನು ನೀಡಲಾಗಿರುವ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಮೀರಾ-ಭಾಯಂದರ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ವಿದೇಶಿ ನಾಗರಿಕರು ವಾಸಸ್ಥಳದ ಪ್ರಮಾಣಪತ್ರಗಳನ್ನು ಪಡೆದು ರಿಕ್ಷಾ ಮತ್ತು ಟ್ಯಾಕ್ಸಿ ಪರವಾನಗಿಗಳನ್ನು ಪಡೆದಿರುವ ಘಟನೆಯ ಬಗ್ಗೆ ಆಳವಾದ ತನಿಖೆ ನಡೆಸಲಾಗುವುದು. ಒಂದು ತಿಂಗಳ ವಿಶೇಷ ಶಿಬಿರವನ್ನು ಆಯೋಜಿಸಿ ಪ್ರತಿಯೊಂದು ದಾಖಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಅಗತ್ಯಕ್ಕೆ ಅನುಗುಣವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ನಕಲಿ ಪರವಾನಗಿಗಳನ್ನು ನೀಡಲು ಹೇಗೆ ಸಾಧ್ಯವಾಯಿತು? ಇದಕ್ಕೆ ಕಾರಣರಾದವರ ಹೆಸರುಗಳು ಹೊರಬರಬೇಕು ಮತ್ತು ಅವರಿಗೆ ಕಠಿಣ ಶಿಕ್ಷೆಯಾಗಬೇಕು!