ನಾಲಂದಾ (ಬಿಹಾರ) ಇಲ್ಲಿಯ ಶ್ರೀ ಶೀತಲಾ ಮಾತಾ ದೇವಸ್ಥಾನದಲ್ಲಿ ಕಾಲ್ತುಳಿತ: 9 ಮಂದಿ ಸಾವು, ಹಲವರಿಗೆ ಗಾಯ

ಜನಜಂಗುಳಿಯ ನಿಯಂತ್ರಣಕ್ಕೆ ಪೊಲೀಸ್ ವ್ಯವಸ್ಥೆ ಇರಲಿಲ್ಲ! – ಭಕ್ತರ ಆರೋಪ

ನಾಲಂದಾ (ಬಿಹಾರ) – ಇಲ್ಲಿನ ಶ್ರೀ ಶೀತಲಾಮಾತಾ ದೇವಸ್ಥಾನದಲ್ಲಿ ಮಾರ್ಚ್ 31ರ ಬೆಳಿಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ 9 ಭಕ್ತರು ಸಾವನ್ನಪ್ಪಿದ್ದಾರೆ. ಇದರಲ್ಲಿ 8 ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ. ಶೀತಲಾ ಅಷ್ಟಮಿಯ ಪ್ರಯುಕ್ತ ಅಪಾರ ಸಂಖ್ಯೆಯ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸಿದ್ದರು ಮತ್ತು ಅಲ್ಲಿ ಜಾತ್ರೆಯೂ ನೆರೆದಿತ್ತು. ಆದರೆ ಜನಜಂಗುಳಿಯನ್ನು ನಿಯಂತ್ರಿಸಲು ಸಾಕಷ್ಟು ಪೊಲೀಸ್ ಬಂದೋಬಸ್ತ್ ಇರಲಿಲ್ಲ ಎಂದು ಅಲ್ಲಿ ನೆರೆದಿದ್ದ ಜನರು ತಿಳಿಸಿದ್ದಾರೆ. ದರ್ಶನದ ಅವಸರದಲ್ಲಿ ತಳ್ಳಾಟ ಉಂಟಾಗಿ, ಹಲವರು ಜನಸಂದಣಿಯಲ್ಲಿ ಸಿಲುಕಿ ಕಾಲ್ತುಳಿತಕ್ಕೊಳಗಾದರು. ಘಟನೆಯ ನಂತರ ದೇವಸ್ಥಾನ ಮತ್ತು ಜಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ತನಿಖೆಗೆ ಆದೇಶಿಸಿದ್ದಾರೆ. ಸರಕಾರವು ಮೃತರ ಕುಟುಂಬಕ್ಕೆ 6 ಲಕ್ಷ ರೂಪಾಯಿ ಮತ್ತು ಕೇಂದ್ರ ಸರಕಾರ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

1. ಮಹಿಳಾ ಭಕ್ತರು, “ಇದು ಚೈತ್ರ ಮಾಸದ ಈ ಕೊನೆಯ ಮಂಗಳವಾರವಾಗಿದೆ. ಇಲ್ಲಿ ಜಾತ್ರೆ ನಡೆದಿತ್ತು. ಜನಸಂದಣಿ ತುಂಬಾ ಹೆಚ್ಚಾಗಿತ್ತು. ದೇವಸ್ಥಾನದ ಗರ್ಭಗುಡಿಯೂ ಚಿಕ್ಕದಾಗಿದೆ. ಜನರು ಬೇಗನೆ ದರ್ಶನ ಪಡೆಯಲು ಒಬ್ಬರಿಗಿಂತ ಒಬ್ಬರು ಮುಂದೆ ಹೋಗಲು ಪ್ರಯತ್ನಿಸುತ್ತಿದ್ದರು. ಯಾರೂ ಸರದಿಯಲ್ಲಿ ನಿಂತು ಪೂಜೆ ಮಾಡಲು ಸಿದ್ಧರಿರಲಿಲ್ಲ.”ಎಂದು ಹೇಳಿದರು.

2. ಭಕ್ತರೊಬ್ಬರು , “ಸುರಕ್ಷತೆಯ ಯಾವುದೇ ವ್ಯವಸ್ಥೆ ಇರಲಿಲ್ಲ. ದೇವಸ್ಥಾನದ ಒಳಗೆ ಭಾರಿ ಜನಸಂದಣಿ ಇತ್ತು. ಒಳಗೆ ಯಾವುದೇ ಪೊಲೀಸ್ ಕಾನ್ಸ್ಟೇಬಲ್ ನಿಯೋಜನೆಗೊಂಡಿರಲಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಅಥವಾ ಎರಡು ಸಾಲುಗಳಲ್ಲಿ ವಿಭಜಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. ದೇವಸ್ಥಾನದ ಪೂಜಾರಿಗಳೇ ಬೇಗ ದರ್ಶನ ಮುಗಿಸಿ ಹೊರಬರುವಂತೆ ಹೇಳುತ್ತಿದ್ದರು. ಇದೇ ಸಮಯದಲ್ಲಿ ಮಹಿಳೆಯೊಬ್ಬರು ತಲೆತಿರುಗಿ ಬಿದ್ದರು. ಕೆಲವರು ಅವರನ್ನು ಎಬ್ಬಿಸಲು ಮತ್ತು ಜನಸಂದಣಿಯನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸಿದರು. ಇದೇ ವೇಳೆ ಕಾಲ್ತುಳಿತ ಸಂಭವಿಸಿತು”, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ದೇವಸ್ಥಾನಗಳಲ್ಲಿ ಇಂತಹ ಕಾಲ್ತುಳಿತದ ಘಟನೆಗಳು ನಡೆಯುತ್ತಿದ್ದರೂ, ಅವುಗಳನ್ನು ಶಾಶ್ವತವಾಗಿ ತಡೆಗಟ್ಟಲು ಸರಕಾರ, ಪೊಲೀಸ್, ಆಡಳಿತ ಮಂಡಳಿ ಮತ್ತು ದೇವಸ್ಥಾನದ ವ್ಯವಸ್ಥಾಪಕರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ವಸ್ತುಸ್ಥಿತಿಯಾಗಿದೆ !