ಮಹಾರಾಷ್ಟ್ರದಲ್ಲಿ ‘ಉದ್ಯೋಗ ಖಾತರಿ ಯೋಜನೆ’ಯ ಬಗ್ಗೆ ನಾಗರಿಕರ ನಿರಾಸಕ್ತಿ: ಕೆಲಸದ ಬೇಡಿಕೆಯ ಪ್ರಮಾಣ ಕೇವಲ ೧೯ ಶೇಕಡಾ – Udyog Khatri Yojana

೫ ವರ್ಷಗಳಲ್ಲಿ ೧ ಸಾವಿರದ ೮೪ ಅವ್ಯವಹಾರ ಪ್ರಕರಣಗಳು ಪತ್ತೆ!

ಶ್ರೀ ಪ್ರೀತಮ್ ನಾಚಣಕರ್, ಪ್ರತಿನಿಧಿ, ದೈನಿಕ ‘ಸನಾತನ ಪ್ರಭಾತ’, ಮುಂಬಯಿ

ಮುಂಬಯಿ, ೨೯ ಮಾರ್ಚ್ – ೨೦೧೯ ರಿಂದ ೨೦೨೪ ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಒಟ್ಟು ೫ ಕೋಟಿ ೮೯ ಲಕ್ಷ ೮೮ ಸಾವಿರ ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದವು. ಆದರೆ, ವಾಸ್ತವದಲ್ಲಿ ಇವುಗಳಲ್ಲಿ ಕೇವಲ ೮೨ ಸಾವಿರದ ೫೯ ಕುಟುಂಬಗಳು ಮಾತ್ರ ಕೆಲಸಕ್ಕಾಗಿ ಬೇಡಿಕೆ ಇಟ್ಟಿವೆ. ಕಳೆದ ೫ ವರ್ಷಗಳಲ್ಲಿ ಕೆಲಸದ ಬೇಡಿಕೆಯ ಪ್ರಮಾಣವು ಕೇವಲ ೧೮.೬೧ ಶೇಕಡಾ ಮಾತ್ರ ಇದೆ. ಇದಕ್ಕೆ ವಿರುದ್ಧವಾಗಿ, ೫ ವರ್ಷಗಳಲ್ಲಿ ಈ ಯೋಜನೆಯಲ್ಲಿ ಬರೋಬ್ಬರಿ ೧ ಸಾವಿರದ ೮೪ ಅವ್ಯವಹಾರಗಳು ಪತ್ತೆಯಾಗಿವೆ. ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರ (‘ಸಿಎಜಿ’) ೨೦೨೫ ರ ವರದಿಯಿಂದ ಈ ಗಂಭೀರ ಪರಿಸ್ಥಿತಿ ಬೆಳಕಿಗೆ ಬಂದಿದೆ. ಇದು ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಮುಂದುವರಿಸುವುದು ಕಷ್ಟವಾಗಲಿದೆ.

ಇದರಲ್ಲಿನ ೪೮೦ ಜಾಬ್ ಕಾರ್ಡ್‌ದಾರರ (ಸರಕಾರವು ನೀಡಿದ ಗುರುತಿನ ಚೀಟಿ ಹೊಂದಿರುವವರ) ಸಮೀಕ್ಷೆಯಲ್ಲಿ, ೫೭ ಶೇಕಡಾ ಫಲಾನುಭವಿಗಳು ಕಡಿಮೆ ವೇತನದ ಕಾರಣದಿಂದಾಗಿ ಕೆಲಸದಿಂದ ದೂರ ಉಳಿದಿರುವುದಾಗಿ ಹೇಳಿದ್ದಾರೆ. ಕೆಲಸಕ್ಕಾಗಿ ಬೇಡಿಕೆ ಇಡುವ ಕುಟುಂಬಗಳಿಗೆ ಉದ್ಯೋಗ ಒದಗಿಸುವ ಪ್ರಮಾಣವು ೯೯.೭೭ ಶೇಕಡಾ ಇದೆ. ೨೦೧೯ ರಿಂದ ೨೦೨೪ ರ ಅವಧಿಯಲ್ಲಿ ಒಟ್ಟು ೧ ಕೋಟಿ ೯ ಲಕ್ಷ ೮೩ ಸಾವಿರ ಕುಟುಂಬಗಳು ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದ್ದವು. ಅವುಗಳಲ್ಲಿ ೧ ಕೋಟಿ ೯ ಲಕ್ಷ ೫೭ ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ.