ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಂದ ಕಾಶಿಯಲ್ಲಿ ಘೋಷಣೆ

  • ೨ ಲಕ್ಷ ೨೫ ಸಾವಿರ ಸೈನಿಕರ ‘ಚತುರಂಗಿಣಿ ಸೇನೆ’ ಸ್ಥಾಪನೆ

  • ಪ್ರತಿಯೊಬ್ಬರ ಕೈಯಲ್ಲೂ ಇರಲಿದೆ ಪರಶು!

  • ಮುಂದಿನ ೧೦ ತಿಂಗಳುಗಳಲ್ಲಿ ಸೇನೆ ಸನ್ನದ್ಧ

  • ಗೋಮಾತೆ, ಧರ್ಮ, ಶಾಸ್ತ್ರ ಮತ್ತು ಮಂದಿರಗಳ ರಕ್ಷಣೆಗಾಗಿ ಕಾರ್ಯ

ವಾರಾಣಸಿ (ಉತ್ತರಪ್ರದೇಶ) – ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಇಲ್ಲಿ ‘ಚತುರಂಗಿಣಿ ಸೇನೆ’ಯ ಸ್ಥಾಪನೆಯನ್ನು ಘೋಷಿಸಿದ್ದಾರೆ. ಈ ಸೇನೆಯಲ್ಲಿ ಒಟ್ಟು ೨ ಲಕ್ಷದ ೧೮ ಸಾವಿರದ ೭೦೦ ಸದಸ್ಯರನ್ನು ಸೇರಿಸುವ ಗುರಿಯನ್ನು ಹೊಂದಲಾಗಿದ್ದು, ದೇಶಾದ್ಯಂತ ಜನರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ‘ಈ ಸೇನೆಯು ಗೋರಕ್ಷಣೆ, ಧರ್ಮರಕ್ಷಣೆ, ಶಾಸ್ತ್ರರಕ್ಷಣೆ ಮತ್ತು ಮಂದಿರಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸಲಿದೆ’ ಎಂದು ಅವರು ತಿಳಿಸಿದರು. ಈ ಸೇನೆಗಾಗಿ ೨೭ ಸದಸ್ಯರ ಪದಾಧಿಕಾರಿಗಳ ಸಮಿತಿಯನ್ನು ಘೋಷಿಸಲಾಗಿದೆ. ಸ್ವತಃ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿಯವರೇ ಈ ಸೇನೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ತಡೆಯಿರಿ, ನಿಲ್ಲಿಸಿ ಮತ್ತು ದಂಡಿಸಿ

ಸೇನೆಯ ಕಾರ್ಯಪದ್ಧತಿಯ ಬಗ್ಗೆ ಶಂಕರಾಚಾರ್ಯರು ವಿವರಿಸುತ್ತಾ, ಮೊದಲು ಸೂಚನೆಯನ್ನು ನೀಡಲಾಗುವುದು ಮತ್ತು ತಪ್ಪು ನಡೆಯುತ್ತಿರುವುದನ್ನು ಮನವರಿಕೆ ಮಾಡಿಕೊಡಲಾಗುವುದು. ಅದಾದ ನಂತರವೂ ಕೇಳದಿದ್ದರೆ, ಅಡ್ಡಿಪಡಿಸಲಾಗುವುದು. ಅಷ್ಟಕ್ಕೂ ಪ್ರತಿಕ್ರಿಯೆ ಬಾರದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ‘ದಂಡಿಸುವುದು’ ಎಂದರೆ ನೇರ ಆಕ್ರಮಣವಲ್ಲ, ಬದಲಿಗೆ ನ್ಯಾಯಾಲಯದ ಮೂಲಕ ಕಾನೂನು ಕ್ರಮ ಜರುಗಿಸುವುದು, ದೂರು ದಾಖಲಿಸುವುದು ಅಥವಾ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಪ್ರಕ್ರಿಯೆಯನ್ನು ಜಾರಿಗೆ ತರುವುದು ಎಂದರ್ಥ ಎಂದು ಅವರು ಸ್ಪಷ್ಟಪಡಿಸಿದರು. ಇದೆಲ್ಲವನ್ನೂ ಸಾಂವಿಧಾನಿಕ ಮಾರ್ಗದಲ್ಲೇ ಮಾಡಲಾಗುವುದು ಎಂದು ಅವರು ನಮೂದಿಸಿದರು.

೧೦ ತಿಂಗಳಲ್ಲಿ ಸೇನೆ ಸನ್ನದ್ಧ

ಈ ಚತುರಂಗಿಣಿ ಸೇನೆಯು ಮುಂದಿನ ಮಾಘ ಮೇಳದ ವೇಳೆಗೆ ಸಂಪೂರ್ಣವಾಗಿ ಸಜ್ಜುಗೊಂಡು ಕಾರ್ಯಪ್ರವೃತ್ತವಾಗಲಿದೆ ಎಂದು ಶಂಕರಾಚಾರ್ಯರು ತಿಳಿಸಿದರು. ಇದಕ್ಕಾಗಿ ಘೋಷವಾಕ್ಯವನ್ನೂ ಪ್ರಕಟಿಸಲಾಗಿದ್ದು, ‘ಗೋರಕ್ಷಣೆ’ಯೇ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಹೀಗಿರಲಿದೆ ಸೇನೆ !

೧. ಒಂದು ತಂಡದಲ್ಲಿ ೧೦ ಸದಸ್ಯರಿರುತ್ತಾರೆ, ಅಂತಹ ೨೧ ಸಾವಿರದ ೮೭೦ ತಂಡಗಳು ನಿರ್ಮಾಣವಾದರೆ ಸೇನೆ ಪೂರ್ಣಗೊಳ್ಳುತ್ತದೆ.
೨. ಭಾರತದಲ್ಲಿ ಸುಮಾರು ೮೦೦ ಜಿಲ್ಲೆಗಳಿದ್ದು, ಪ್ರತಿ ಜಿಲ್ಲೆಯಲ್ಲಿ ೨೭ ತಂಡಗಳು, ಅಂದರೆ ೨೭೦ ಸದಸ್ಯರು ಸಿದ್ಧರಾದರೆ ೨ ಲಕ್ಷದ ೧೬ ಸಾವಿರ ಸದಸ್ಯರು ಸಜ್ಜಾದಂತಾಗುತ್ತದೆ.
೩. ಈ ಸೇನೆಯು ಹಳದಿ ವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸೇನೆಯ ಪ್ರತಿಯೊಬ್ಬರ ಕೈಯಲ್ಲಿ ಪರಶು ಇರಲಿದೆ.

ಚತುರಂಗಿಣಿ ಸೇನೆಯ ಅರ್ಥ

ಚತುರಂಗಿಣಿ ಸೇನೆ ಎಂದರೆ ೪ ಘಟಕಗಳಿಂದ ಕೂಡಿದ ಸೇನೆ. ಇದರಲ್ಲಿ ಪದಾತಿ (ಕಾಲಾಳುಪಡೆ), ಅಶ್ವಪಡೆ, ರಥಪಡೆ ಮತ್ತು ಗಜಪಡೆಗಳಿರುತ್ತವೆ. ಪ್ರಾಚೀನ ಭಾರತದಲ್ಲಿ ಈ ಸೇನೆಯು ಅತ್ಯಂತ ಮಹತ್ವದ್ದೆಂದು ಪರಿಗಣಿಸಲ್ಪಟ್ಟಿತ್ತು. ಮಹಾಭಾರತ ಮತ್ತು ರಾಮಾಯಣದಂತಹ ಗ್ರಂಥಗಳಲ್ಲಿ ಇದರ ಉಲ್ಲೇಖವಿದ್ದು, ದೊಡ್ಡ ಯುದ್ಧಗಳಲ್ಲಿ ಈ ನಾಲ್ಕೂ ಘಟಕಗಳನ್ನು ಸಂಘಟಿತವಾಗಿ ಬಳಸಲಾದ ವರ್ಣನೆ ಇದೆ. ಈ ಪದ್ಧತಿಯು ವೈದಿಕ ಕಾಲದಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದ್ದು, ಮುಂದೆ ಇದು ಮತ್ತಷ್ಟು ವಿಕಸನಗೊಂಡಿತು. ಇದು ಕೇವಲ ಯುದ್ಧಕೌಶಲದ ಸಂಕೇತವಾಗಿರದೆ, ಪ್ರಾಚೀನ ಭಾರತೀಯ ಸೈನಿಕ ಸಂಘಟನೆ ಮತ್ತು ಕಾರ್ಯತಂತ್ರದ ಸುಧಾರಿತ ಪರಿಕಲ್ಪನೆಯನ್ನು ತೋರಿಸುತ್ತದೆ.