Qawwali Controversy : ಭಜನಾ ಕಾರ್ಯಕ್ರಮದಲ್ಲಿ ಜಾನ್ ಅಜ್ಮೇರಿ ಅವರಿಂದ ಕವ್ವಾಲಿ ಗಾಯನ : ಹಿಂದೂಗಳಿಂದ ವಿರೋಧ Bhajan Jan Ansari Hindus Oppose

ಜಾನ್ ಅಜ್ಮೇರಿ ಅವರಿಂದ ಕವ್ವಾಲಿ ಗಾಯನ

ಅಜ್ಮೇರ್ (ರಾಜಸ್ಥಾನ) – ಇಲ್ಲಿನ ಶಾಸ್ತ್ರೀನಗರ ಪರಿಸರದಲ್ಲಿ ಚೈತ್ರ ನವರಾತ್ರಿ ನಿಮಿತ್ತ ಆಯೋಜಿಸಲಾಗಿದ್ದ ‘ಭಜನ ಸಂಧ್ಯಾ’ ಕಾರ್ಯಕ್ರಮದಲ್ಲಿ ಭಜನಾ ಗಾಯಕ ಜಾನ್ ಅಜ್ಮೇರಿ ಅವರು ಹಠಾತ್ತನೆ ಕವ್ವಾಲಿ ಹಾಡಿದರು. ಇದರಿಂದ ಉಪಸ್ಥಿತರಿದ್ದ ಹಿಂದೂಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಆ ನಂತರ ಎರಡನೇ ಕಾರ್ಯಕ್ರಮದಲ್ಲೂ ಅವರು ವಿರೋಧವನ್ನು ಎದುರಿಸಬೇಕಾಯಿತು ಮತ್ತು ಅಂತಿಮವಾಗಿ ಅವರು ಕಾರ್ಯಕ್ರಮವನ್ನು ಅರ್ಧಕ್ಕೇ ಬಿಟ್ಟು ಹೋಗಬೇಕಾಯಿತು.

1. ಮಾರ್ಚ್ 21 ರಂದು ಅಲ್ವರ್ ಗೇಟ್ ಪರಿಸರದ ನಗರ ಭಾಗದಲ್ಲಿ ಆಯೋಜಿಸಲಾಗಿದ್ದ ದೇವಿಯ ಜಾಗರಣೆಯಲ್ಲಿ ಜಾನ್ ಅಜ್ಮೇರಿ ಭಜನೆ ಹಾಡುತ್ತಿದ್ದಾಗ, ಖ್ವಾಜಾ ಗರೀಬ್ ನವಾಜ್ ಅವರಿಗೆ ಸಂಬಂಧಿಸಿದ ‘ದೂಲ್ಹಾ ಬನಾ ಹೈ ಮೇರಾ ಖ್ವಾಜಾ ಅಜ್ಮೇರ್ ಕಿ ನಗರಿ’ ಎಂಬ ಕವ್ವಾಲಿಯನ್ನು ಹಾಡಲಾರಂಭಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿಂದೂಗಳು ಇದು ಧಾರ್ಮಿಕ ಪರಂಪರೆಗೆ ಅನುಗುಣವಾಗಿಲ್ಲ ಎಂದು ಹೇಳಿ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ ಹೆಚ್ಚಾದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಮಧ್ಯಸ್ಥಿಕೆ ವಹಿಸಲಾಯಿತು ಮತ್ತು ಕಾರ್ಯಕ್ರಮವನ್ನು ಹೇಗೋ ಮುಂದುವರಿಸಲಾಯಿತು. ಈ ಘಟನೆಯ ಮಾಹಿತಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ತಲುಪಿತು.

2. ಮಾರ್ಚ್‌ 22 ರಂದು ಶಾಸ್ತ್ರೀ ನಗರದ ಗಣೇಶಗಡ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಭಜನ ಸಂಧ್ಯೆಗೆ ಜಾನ್ ಅಜ್ಮೇರಿ ಬಂದಾಗ ಬಜರಂಗದಳದ ಕಾರ್ಯಕರ್ತರು ಅಲ್ಲಿಗೆ ತಲುಪಿ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧದ ಹಿನ್ನೆಲೆಯಲ್ಲಿ ವಾತಾವರಣ ಉದ್ವಿಗ್ನಗೊಂಡಿತು ಮತ್ತು ಅಜ್ಮೇರಿ ಅವರು ವೇದಿಕೆಯನ್ನು ಬಿಟ್ಟು ಹೋಗಬೇಕಾಯಿತು. ಅವರು ನಿರ್ಗಮಿಸಿದ ನಂತರ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸಲಾಯಿತು.

3. ವಿಹಿಂಪ ಪದಾಧಿಕಾರಿ ಕಿಶನ್ ಗುರ್ಜರ್ ಮಾತನಾಡಿ, ಇಂತಹ ಪ್ರದರ್ಶನಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳ ಪರಂಪರೆಯನ್ನು ಗೌರವಿಸಬೇಕು. ಮೊದಲು ಇಂತಹದ್ದೇ ಘಟನೆ ನಡೆದಿದ್ದರೂ ಮತ್ತೆ ಅದೇ ರೀತಿಯ ಪ್ರದರ್ಶನ ನೀಡಲು ಪ್ರಯತ್ನಿಸಲಾಗಿದೆ. ಅದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಕವ್ವಾಲಿ ಹಾಡುವ ಧೈರ್ಯ ಬರುತ್ತದೆ ಎಂದರೆ, ಇಂತಹವರನ್ನು ಭಜನೆಗಾಗಿ ಆಹ್ವಾನಿಸುವ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ!