ಉತ್ತರ ಪ್ರದೇಶ: ಏಪ್ರಿಲ್ ೧ ರಿಂದ ಮೊಟ್ಟೆಗಳ ಮೇಲೆ ಮುಕ್ತಾಯ ದಿನಾಂಕ ಮುದ್ರಿಸಬೇಕು

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದಲ್ಲಿ ಬರುವ ಏಪ್ರಿಲ್ ೧ ರಿಂದ ಪ್ರತಿಯೊಂದು ಮೊಟ್ಟೆಯ ಮೇಲೆ ಉತ್ಪಾದನಾ ದಿನಾಂಕ ಮತ್ತು ಕಾಲಾವಧಿ ಮುಕ್ತಾಯದ (ಎಕ್ಸಪೈರಿ) ದಿನಾಂಕವನ್ನು ಸ್ಪಷ್ಟವಾಗಿ ಮುದ್ರಿಸುವುದು ಕಡ್ಡಾಯವಾಗಲಿದೆ. ಇದರಿಂದ ಹಳೆಯ ಅಥವಾ ಕೆಟ್ಟ ಮೊಟ್ಟೆಗಳನ್ನು ತಾಜಾ ಎಂದು ಮಾರಾಟ ಮಾಡಲು ಅಂಗಡಿಯವರಿಗೆ ಸಾಧ್ಯವಾಗುವುದಿಲ್ಲ. ಈ ನಿಯಮದಿಂದ ಗ್ರಾಹಕರು ಸ್ವತಃ ದಿನಾಂಕವನ್ನು ನೋಡಿ ‘ಮೊಟ್ಟೆ ಎಷ್ಟು ಹಳೆಯದು ಮತ್ತು ಎಷ್ಟು ದಿನಗಳವರೆಗೆ ಸುರಕ್ಷಿತವಾಗಿದೆ?’ ಎಂಬುದನ್ನು ಗುರುತಿಸಬಹುದು. ಈ ನಿಯಮವನ್ನು ಪಶುಸಂಗೋಪನಾ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆಯ ನಿರ್ದೇಶನದಂತೆ ಜಾರಿಗೊಳಿಸಲಾಗುತ್ತಿದೆ.

ಮುಖ್ಯ ಪಶುವೈದ್ಯಕೀಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, ಮೊಟ್ಟೆಗಳು ನೇರವಾಗಿ ಮಾನವನ ಆರೋಗ್ಯಕ್ಕೆ ಸಂಬಂಧಿಸಿವೆ. ಈ ಹಿಂದೆ ಅನೇಕ ಕಡೆಗಳಲ್ಲಿ ಹಳೆಯ ಮೊಟ್ಟೆಗಳನ್ನು ಮಾರಾಟ ಮಾಡಲಾಗುತ್ತಿತ್ತು ಮತ್ತು ಗ್ರಾಹಕರಿಗೆ ಅದರ ಅರಿವಿರುತ್ತಿರಲಿಲ್ಲ. ಈ ನಿಯಮ ಜಾರಿಗೆ ಬರುವುದರಿಂದ ಪಾರದರ್ಶಕತೆ ಹೆಚ್ಚುತ್ತದೆ ಮತ್ತು ಜನರಿಗೆ ತಾಜಾ ಮೊಟ್ಟೆಗಳು ಸಿಗುತ್ತವೆ. ಯಾವುದೇ ವ್ಯಾಪಾರಿ ಅಥವಾ ಅಂಗಡಿಯವರು ನಿಯಮ ಪಾಲಿಸದಿದ್ದರೆ ಅವರ ಮೊಟ್ಟೆಗಳನ್ನು ಜಪ್ತಿ ಮಾಡಲಾಗುವುದು. ಅಂತಹ ಮೊಟ್ಟೆಗಳನ್ನು ನಾಶಪಡಿಸಬಹುದು ಅಥವಾ ಅವುಗಳ ಮೇಲೆ ಸ್ಪಷ್ಟವಾಗಿ ‘ಮಾನವ ಸೇವನೆಗೆ ಸುರಕ್ಷಿತವಲ್ಲ’ ಎಂದು ಬರೆಯಲಾಗುವುದು ಎಂದು ತಿಳಿಸಿದರು.

ಮೊಟ್ಟೆಗಳು ಎಷ್ಟು ದಿನಗಳವರೆಗೆ ಸುರಕ್ಷಿತವಾಗಿರುತ್ತವೆ?

ಸಾಮಾನ್ಯ ತಾಪಮಾನದಲ್ಲಿ ಅಂದಾಜು ೩೦ ಡಿಗ್ರಿ ಸೆಲ್ಸಿಯಸ್‌ನಲ್ಲಿ ಮೊಟ್ಟೆಗಳು ಕೇವಲ ಎರಡು ವಾರಗಳವರೆಗೆ ಚೆನ್ನಾಗಿರುತ್ತವೆ. ಅವುಗಳನ್ನು ೨ ರಿಂದ ೮ ಡಿಗ್ರಿ ಸೆಲ್ಸಿಯಸ್ ತಾಪಮಾನದ ತಂಪು ಜಾಗದಲ್ಲಿಟ್ಟರೆ ೫ ವಾರಗಳವರೆಗೆ ಬಳಸಬಹುದು; ಆದರೆ ಅನೇಕ ಅಂಗಡಿಯವರು ಮತ್ತು ವ್ಯಾಪಾರಿಗಳು ಸರಿಯಾದ ವ್ಯವಸ್ಥೆಯನ್ನು ಬಳಸುತ್ತಿರಲಿಲ್ಲ. ಈಗ ಮುದ್ರಿತ ದಿನಾಂಕದಿಂದ ಗ್ರಾಹಕರು ಸುಲಭವಾಗಿ ತಪಾಸಣೆ ಮಾಡಬಹುದು.

ಶೀತಲೀಕರಣ ವ್ಯವಸ್ಥೆಯ ಸ್ಥಿತಿ

ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಪ್ರಸ್ತುತ ಕೇವಲ ಎರಡು ಪ್ರಮುಖ ಶೀತಲೀಕರಣ ಕೇಂದ್ರಗಳಿವೆ, ಒಂದು ಆಗ್ರಾದಲ್ಲಿ ಮತ್ತು ಇನ್ನೊಂದು ಝಾನ್ಸಿಯಲ್ಲಿ. ಆಹಾರ ಸುರಕ್ಷತಾ ನಿಯಮಗಳ ಪ್ರಕಾರ ಮೊಟ್ಟೆಗಳು ಮತ್ತು ತರಕಾರಿಗಳನ್ನು ಒಂದೇ ಶೀತಲೀಕರಣ ಕೇಂದ್ರದಲ್ಲಿ ಇಡುವಂತಿಲ್ಲ; ಏಕೆಂದರೆ ಎರಡಕ್ಕೂ ಅಗತ್ಯವಿರುವ ತಾಪಮಾನ ವಿಭಿನ್ನವಾಗಿರುತ್ತದೆ. ಪ್ರಸ್ತುತ ಈ ವ್ಯವಸ್ಥೆ ಸೀಮಿತವಾಗಿದ್ದರೂ, ಸರಕಾರವು ಯಾವುದೇ ಕಾರಣಗಳನ್ನು ಒಪ್ಪುವುದಿಲ್ಲ ಮತ್ತು ಪ್ರತಿಯೊಬ್ಬರೂ ನಿಯಮ ಪಾಲಿಸಬೇಕೆಂದು ಸ್ಪಷ್ಟಪಡಿಸಿದೆ.

ವಿದೇಶಗಳಲ್ಲಿ ದಿನಾಂಕ ಬರೆಯುವ ಕಾನೂನು

ಯುರೋಪಿನ ದೇಶಗಳಲ್ಲಿ ಮೊಟ್ಟೆಗಳ ಮೇಲೆ ದಿನಾಂಕ ಮುದ್ರಿಸುವುದು ಕಾನೂನುಬದ್ಧವಾಗಿದೆ. ಅಲ್ಲಿ ಪ್ರತಿಯೊಂದು ಮೊಟ್ಟೆಯ ಮೇಲೆ ಒಂದು ಸಾಂಕೇತಿಕ ಸಂಖ್ಯೆ (ಕೋಡ)ಇರುತ್ತದೆ. ಈ ಸಂಖ್ಯೆಯನ್ನು ಸ್ಕ್ಯಾನ್ ಮಾಡಿದರೆ ಆ ಮೊಟ್ಟೆ ಯಾವ ದೇಶದ್ದು, ಯಾವ ಫಾರ್ಮ್‌ನಿಂದ ಬಂದಿದೆ ಎಂಬೆಲ್ಲಾ ಮಾಹಿತಿ ತಿಳಿಯುತ್ತದೆ.
ಅಮೆರಿಕದಲ್ಲಿ ಮೊಟ್ಟೆಗಳ ಕಾರ್ಟನ್‌ಗಳ (ಪೆಟ್ಟಿಗೆಗಳ) ಮೇಲೆ ‘ಪ್ಯಾಕ್ ಡೇಟ್’ ಮತ್ತು ‘ಎಕ್ಸಪೈರಿ ಡೇಟ್’ ಇರುವುದು ಕಡ್ಡಾಯವಾಗಿದೆ. ಬ್ರಿಟನ್‌ನಲ್ಲಿ ಮೊಟ್ಟೆಗಳ ಮೇಲೆ ‘ಲಯನ್ ಮಾರ್ಕ್’ ಇರುತ್ತದೆ. ಇದರ ಅರ್ಥವೆಂದರೆ, ಯಾವ ಕೋಳಿ ಈ ಮೊಟ್ಟೆಯನ್ನು ಇಟ್ಟಿದೆಯೋ, ಅದಕ್ಕೆ ಎಲ್ಲಾ ಅಗತ್ಯ ಲಸಿಕೆಗಳನ್ನು ಹಾಕಲಾಗಿದೆ ಮತ್ತು ಆ ಮೊಟ್ಟೆ ಸಂಪೂರ್ಣ ಸುರಕ್ಷಿತವಾಗಿದೆ ಎಂದರ್ಥ.

ಪಂಜರಮುಕ್ತ ಕೋಳಿಗಳು

ಭಾರತದಲ್ಲಿ ಅನೇಕ ಕಡೆಗಳಲ್ಲಿ ಕೋಳಿಗಳನ್ನು ಅತ್ಯಂತ ಸಣ್ಣ ಪಂಜರಗಳಲ್ಲಿ ಇಡಲಾಗುತ್ತದೆ, ಅಲ್ಲಿ ಅವುಗಳಿಗೆ ಚಲಿಸಲು ಕೂಡ ಜಾಗವಿರುವುದಿಲ್ಲ. ಇದರಿಂದ ಕೋಳಿಗಳು ಒತ್ತಡಕ್ಕೆ ಒಳಗಾಗುತ್ತವೆ. ಒತ್ತಡದಲ್ಲಿರುವ ಕೋಳಿಗಳು ಬೇಗನೆ ಕಾಯಿಲೆಗೆ ತುತ್ತಾಗುತ್ತವೆ. ಅವುಗಳನ್ನು ಬದುಕಿಸಲು ಪೌಲ್ಟ್ರಿ ಮಾಲೀಕರು ಹೆಚ್ಚೆಚ್ಚು ಪ್ರತಿಜೀವಕಗಳನ್ನು ನೀಡುತ್ತಾರೆ. ಈ ಔಷಧಗಳು ಮೊಟ್ಟೆಯ ಮೂಲಕ ಮಾನವನ ದೇಹವನ್ನು ಸೇರುತ್ತವೆ, ಇದು ಆರೋಗ್ಯಕ್ಕೆ ಘಾತಕವಾಗಿದೆ. ಯುರೋಪ್ ಮತ್ತು ಅಮೆರಿಕದಂತಹ ದೇಶಗಳಲ್ಲಿ ಈಗ ಪಂಜರಮುಕ್ತ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಅಲ್ಲಿ ಕೋಳಿಗಳಿಗೆ ಮುಕ್ತವಾಗಿ ತಿರುಗಾಡುವ ಸ್ವಾತಂತ್ರ್ಯವಿರುತ್ತದೆ. ಕೋಳಿ ಸಂತೋಷವಾಗಿ ಮತ್ತು ಒತ್ತಡಮುಕ್ತವಾಗಿದ್ದಾಗ, ಅದು ನೀಡುವ ಮೊಟ್ಟೆ ಹೆಚ್ಚು ಪೌಷ್ಟಿಕವಾಗಿರುತ್ತದೆ ಎಂದು ವೈಜ್ಞಾನಿಕ ದೃಷ್ಟಿಕೋನದಿಂದ ನಂಬಲಾಗಿದೆ.

ಸಂಪಾದಕೀಯ ನಿಲುವು

ಇಡೀ ದೇಶದಲ್ಲೇ ಇಂತಹ ಕಾನೂನು ಜಾರಿಗೆ ತರುವುದು ಅವಶ್ಯಕವಾಗಿದೆ