ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರಚನೆ ಹಳೆಯದಾಗಿದೆ; ಪುನರ್ರಚನೆ ಅತ್ಯಗತ್ಯ!

  • ವಿಶ್ವ ಸಂಸ್ಥೆಯ (UN) ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಟೀಕೆ

  • ಭವಿಷ್ಯದಲ್ಲಿ ಈ ಪರಿಸ್ಥಿತಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯ ವ್ಯಕ್ತ

ಬೈರೂತ್ (ಲೆಬನಾನ್) – ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿಯ (UNSC) ರಚನೆಯು ಕಾಲಹರಣವಾಗಿದ್ದು, ಅದರ ಪುನರ್ರಚನೆ ಅತ್ಯಗತ್ಯವಾಗಿದೆ. ಇದು ಇಂದಿಗೂ 1945ರ ಪರಿಸ್ಥಿತಿಯಲ್ಲೇ ಸಿಲುಕಿಕೊಂಡಿದೆ ಮತ್ತು ಇಂದಿನ ವಾಸ್ತವದ ಅರಿವು ಅದಕ್ಕಿಲ್ಲ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಮಂಡಳಿಯ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಬೈರೂತ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

1. 15 ಸದಸ್ಯರಿರುವ ಈ ಮಂಡಳಿಯಲ್ಲಿ 5 ಖಾಯಂ ಸದಸ್ಯರಿದ್ದಾರೆ. ಅದರಲ್ಲಿ 3 ದೇಶಗಳು ಯುರೋಪ್‌ನವು, ಒಂದು ಏಷ್ಯಾದ್ದು ಮತ್ತು ಒಂದು ಅಮೆರಿಕ. ಆಶ್ಚರ್ಯದ ವಿಷಯವೆಂದರೆ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಂತಹ ದೊಡ್ಡ ಪ್ರದೇಶಗಳ ಯಾವುದೇ ದೇಶಕ್ಕೆ ಖಾಯಂ ಸದಸ್ಯತ್ವವಿಲ್ಲ. ಏಷ್ಯಾದ ಜನಸಂಖ್ಯೆ ಮತ್ತು ಆರ್ಥಿಕ ಸಾಮರ್ಥ್ಯ ಜಗತ್ತಿನಲ್ಲೇ ಅತಿದೊಡ್ಡದಾಗಿದ್ದರೂ, ಈ ಪ್ರದೇಶದಿಂದ ಕೇವಲ ಚೀನಾ ಮಾತ್ರ ಖಾಯಂ ಸದಸ್ಯ ರಾಷ್ಟ್ರವಾಗಿದೆ.

2. ‘ವೀಟೋ’ (Veto) ಅಧಿಕಾರದಿಂದಾಗಿ ಮಂಡಳಿಗೆ ಸೂಕ್ತ ಸಮಯದಲ್ಲಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವುದೇ ಯುದ್ಧವನ್ನು ನಿಲ್ಲಿಸುವ ಅಗತ್ಯವಿರುವಾಗ, ಯಾವುದಾದರೂ ಒಂದು ಖಾಯಂ ಸದಸ್ಯ ರಾಷ್ಟ್ರವು ತನ್ನ ‘ವೀಟೋ’ ಅಧಿಕಾರವನ್ನು ಬಳಸುತ್ತದೆ, ಇದರಿಂದ ಶಾಂತಿಯ ಪ್ರಯತ್ನಗಳು ಅರ್ಧಕ್ಕೆ ನಿಲ್ಲುತ್ತವೆ. ಭವಿಷ್ಯದಲ್ಲಿ ಈ ಪರಿಸ್ಥಿತಿ ಬದಲಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಅವರು ಹೇಳಿದರು.

ಭದ್ರತಾ ಮಂಡಳಿಯ ರಚನೆ

ಭದ್ರತಾ ಮಂಡಳಿಯ ರಚನೆಯ ಪ್ರಕಾರ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ಈ 5 ದೇಶಗಳಿಗೆ ‘ವೀಟೋ’ ಅಧಿಕಾರವಿದೆ. ಉಳಿದ 10 ತಾತ್ಕಾಲಿಕ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ, ಆದರೆ ಅವರಿಗೆ ವೀಟೋ ಅಧಿಕಾರವಿರುವುದಿಲ್ಲ. (ಚೀನಾಕ್ಕೆ ವಿಶೇಷ ಅಧಿಕಾರ ಸಿಕ್ಕಿರುವುದರಿಂದ, ಅದು ಭಯೋತ್ಪಾದಕರನ್ನು ಬೆಂಬಲಿಸಲು ಬಹಿರಂಗವಾಗಿ ಆ ಅಧಿಕಾರವನ್ನು ಬಳಸುತ್ತಿದೆ. ಆದ್ದರಿಂದ ಚೀನಾದ ಈ ಅಧಿಕಾರವನ್ನು ಕಿತ್ತುಕೊಳ್ಳುವ ಅವಶ್ಯಕತೆಯಿದೆ. ಎಲ್ಲಾ ದೇಶಗಳು ಒಗ್ಗೂಡಿ ಭದ್ರತಾ ಮಂಡಳಿಯನ್ನು ಪುನರ್ರಚಿಸಬೇಕು ಮತ್ತು ಇದಕ್ಕಾಗಿ ಭಾರತವು ಇನ್ನು ಹೆಚ್ಚಿನ ಒತ್ತಡ ಹೇರಬೇಕಿದೆ! – ಸಂಪಾದಕರು)

ಪ್ರಸ್ತುತ ಭದ್ರತಾ ಮಂಡಳಿಯು ಜಾಗತಿಕ ಶಾಂತಿ ಕಾಪಾಡುವಲ್ಲಿ ವಿಫಲವಾಗುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ಈಗ ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್ ನಡುವಿನ ಯುದ್ಧದಂತಹ ಪ್ರಮುಖ ವಿಷಯಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿವೆ.

ಖಾಯಂ ಸದಸ್ಯತ್ವಕ್ಕಾಗಿ ಭಾರತದ ಬೇಡಿಕೆ

ಭಾರತವು ದಶಕಗಳಿಂದ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಬೇಕೆಂದು ಒತ್ತಾಯಿಸುತ್ತಿದೆ. 1945ರಲ್ಲಿ ಸಿದ್ಧವಾದ ಈ ವ್ಯವಸ್ಥೆಯು 21ನೇ ಶತಮಾನದ ವಾಸ್ತವ ಮತ್ತು ಅಂತರರಾಷ್ಟ್ರೀಯ ರಾಜಕೀಯಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದು ಭಾರತದ ನಿಲುವು. ಭಾರತವು ತಾನು ಖಾಯಂ ಸದಸ್ಯತ್ವಕ್ಕೆ ಅರ್ಹ ಎಂದು ಪದೇ ಪದೇ ಹೇಳಿದೆ ಮತ್ತು ಅನೇಕ ದೇಶಗಳು ಭಾರತದ ಈ ಬೇಡಿಕೆಯನ್ನು ಬೆಂಬಲಿಸಿವೆ. 2021 ಮತ್ತು 2022ರ ಅವಧಿಯಲ್ಲಿ ಭಾರತವು ಕೊನೆಯ ಬಾರಿಗೆ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಮಂಡಳಿಯಲ್ಲಿ ಭಾಗವಹಿಸಿತ್ತು.

ಸಂಪಾದಕೀಯ ನಿಲುವು

ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿಯ ದಯನೀಯ ಸ್ಥಿತಿ ಎಲ್ಲರಿಗೂ ತಿಳಿದಿದೆ; ಆದರೆ ಅದರ ಪುನರ್ರಚನೆ ಮಾಡಲು ಮಹಾಶಕ್ತಿಗಳೆಂದು ಕರೆಸಿಕೊಳ್ಳುವ ದೇಶಗಳಿಗೆ ಇಷ್ಟವಿಲ್ಲ. ಏಕೆಂದರೆ ಈ ದೇಶಗಳಿಗೆ ಜಗತ್ತಿನ ಹಿತಕ್ಕಿಂತ ತಮ್ಮ ಸ್ವಂತ ಲಾಭವೇ ಮುಖ್ಯವಾಗಿದೆ!