ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆ

ಹೊಸ ನಿಯಮಗಳ ನಿಬಂಧನೆಗಳು ಅಸ್ಪಷ್ಟವಾಗಿದ್ದು, ಅವುಗಳ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯದ ಅಭಿಪ್ರಾಯ

ನವದೆಹಲಿ – ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ ಯುನಿವರ್ಸಿಟಿ ಗ್ರಾಂಟ್ ಕಮಿಷನ್) ಹೊಸ ನಿಯಮಗಳಲ್ಲಿನ ನಿಬಂಧನೆಗಳು ಅಸ್ಪಷ್ಟವಾಗಿದ್ದು, ಅವುಗಳು ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ಹೇಳುತ್ತಾ ಸುಪ್ರೀಂ ಕೋರ್ಟ್ ಈ ನಿಯಮಗಳಿಗೆ ಮಧ್ಯಂತರ ತಡೆ ನೀಡಿದೆ. ನಿಯಮಗಳ ಕರಡನ್ನು ಮರುಸಿದ್ಧಪಡಿಸುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯು ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಅಲ್ಲಿಯವರೆಗೆ ಈ ತಡೆಯಾಜ್ಞೆ ಜಾರಿಯಲ್ಲಿರಲಿದೆ.

ನಾವು ಹಿಮ್ಮುಖವಾಗಿ ಸಾಗುತ್ತಿದ್ದೇವೆಯೇ?

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಾ, “ನಾವು ಜಾತಿರಹಿತ ಸಮಾಜದತ್ತ ಎಷ್ಟು ಪ್ರಗತಿ ಸಾಧಿಸಿದ್ದೇವೆ? ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಮಾಜವನ್ನು ಜಾತಿಯಿಂದ ಮುಕ್ತಗೊಳಿಸಲು ನಮಗೆ ಸಾಧ್ಯವಾಗಿಲ್ಲ. ಈಗ ಈ ಹೊಸ ಕಾಯ್ದೆಯಿಂದಾಗಿ ನಾವು ಮತ್ತಷ್ಟು ಹಿಂದೆ ಹೋಗುತ್ತಿದ್ದೇವೆಯೇ? ಸಂತ್ರಸ್ತರಿಗೆ ನ್ಯಾಯವನ್ನು ನಿರಾಕರಿಸಲು ಸಾಧ್ಯವಿಲ್ಲ. ನಮಗೆ ಸಾಮಾನ್ಯ ವರ್ಗದ ದೂರುಗಳ ಬಗ್ಗೆ ಯಾವುದೇ ತಕರಾರಿಲ್ಲ, ಆದರೆ ಮೀಸಲಾತಿ ವರ್ಗದ ಸಮುದಾಯಗಳಿಗೆ ಪರಿಹಾರ ವ್ಯವಸ್ಥೆಯು ಜಾರಿಯಲ್ಲಿರಬೇಕು ಎಂಬುದು ನಮ್ಮ ಕಳಕಳಿಯಾಗಿದೆ” ಎಂದು ಹೇಳಿದರು.

ಕಾನೂನು ತಜ್ಞರ ಸಮಿತಿಯು ಈ ಬಗ್ಗೆ ಪರಿಶೀಲಿಸಲಿದೆ! – ಮುಖ್ಯ ನ್ಯಾಯಮೂರ್ತಿಗಳ ಅಭಿಪ್ರಾಯ

ವಿಚಾರಣೆಯ ಸಮಯದಲ್ಲಿ ಅರ್ಜಿದಾರರು ನಿಯಮಗಳನ್ನು ರದ್ದುಗೊಳಿಸುವಂತೆ ಕೋರಿದರು ಮತ್ತು ಕೂಡಲೇ ತಡೆ ಹೇರುವಂತೆ ವಿನಂತಿಸಿದರು. ‘ಅನುಮತಿ ನೀಡಿದರೆ ಇನ್ನೂ ಉತ್ತಮವಾದ ನಿಯಮಗಳನ್ನು ರೂಪಿಸಿ ಕೊಡಬಲ್ಲೆವು’ ಎಂದು ಅರ್ಜಿದಾರರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, “ಕೆಲವು ಕಾನೂನು ತಜ್ಞರ ಸಮಿತಿಯು ಈ ವಿಷಯದ ಬಗ್ಗೆ ಚಿಂತನೆ ನಡೆಸಲಿ ಎಂಬುದು ನಮ್ಮ ಆಶಯವಾಗಿದೆ” ಎಂದರು.

ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಕಿರುಕುಳದ ಭೀತಿ! – ಅರ್ಜಿದಾರರು

ಒಬ್ಬ ಅರ್ಜಿದಾರರ ಪರ ವಕೀಲರು ಮಾತನಾಡಿ, “ನಾನು ಸಾಮಾನ್ಯ ವರ್ಗದ ವಿದ್ಯಾರ್ಥಿಯಾಗಿದ್ದರೆ, ನನ್ನ ಹಿರಿಯ ಅಧಿಕಾರಿಗೆ ನಾನು ಹೊಸಬನೆಂದು ತಿಳಿಯುತ್ತದೆ. ಆಗ ನನಗೆ ಕಿರುಕುಳ ನೀಡಬಹುದು. ಆ ಹಿರಿಯ ಅಧಿಕಾರಿ ಪರಿಶಿಷ್ಟ ಜಾತಿಯವರಾಗಿದ್ದರೆ, ನನ್ನ ಮೇಲೆ ಕ್ರಮ ಕೈಗೊಳ್ಳಲಾಗುವುದು” ಎಂದರು. ಇದಕ್ಕೆ ನ್ಯಾಯಾಲಯವು, “ಈ ನಿಬಂಧನೆಗಳ ಪ್ರಕಾರ ನಿಮ್ಮ ಕಿರುಕುಳದ ದೂರನ್ನು ಪರಿಗಣಿಸಲಾಗುತ್ತದೆಯೇ?” ಎಂದು ಕೇಳಿತು. ವಕೀಲರು ಉತ್ತರಿಸುತ್ತಾ, “ಇಲ್ಲ; ಆದರೆ ನನ್ನ ಬಳಿ ಬೇರೆ ಯಾವುದೇ ಆಯ್ಕೆಯೂ ಇಲ್ಲ. ನಿರೀಕ್ಷಿತ ಜಾಮೀನಿನ ಆಯ್ಕೆಯೂ ಉಳಿದಿಲ್ಲ; ಏಕೆಂದರೆ ಸರಕಾರವು ತಿದ್ದುಪಡಿಗಳನ್ನು ಮಾಡಿದೆ. ಇದರಿಂದ ವಿದ್ಯಾರ್ಥಿಯ ‘ವೃತ್ತಿಜೀವನ’ (Career) ನಾಶವಾಗುತ್ತದೆ. ಕಿರುಕುಳ ಅನುಭವಿಸಿದ ವಿದ್ಯಾರ್ಥಿಗೆ ಸಂಬಂಧಿಸಿದಂತೆ ‘ಕಿರುಕುಳ’ದ ವ್ಯಾಖ್ಯಾನವನ್ನು ನಿಯಮಗಳಿಂದ ಏಕೆ ಕೈಬಿಡಲಾಗಿದೆ? ಈ ನಿಯಮಗಳು ಕೇವಲ ಜಾತಿ ಆಧಾರಿತ ವಿಷಯಗಳಿಗೆ ಮಾತ್ರ ಸೀಮಿತವಾಗಿವೆ. ಅವು ವಾಸ್ತವತೆಯನ್ನು ಪರಿಗಣಿಸುತ್ತಿಲ್ಲ. ಹಿರಿಯ ಮತ್ತು ಕಿರಿಯರ ನಡುವಿನ ಭೇದವನ್ನು ಸೇರಿಸಲಾಗಿಲ್ಲ” .

ಹೊಸ ನಿಯಮಗಳಿಂದ ಸಮಾಜದಲ್ಲಿ ದ್ವೇಷ ಹೆಚ್ಚಾಗಲಿದೆ! – ವಕೀಲ ವಿಷ್ಣು ಶಂಕರ್ ಜೈನ್

ವಿಚಾರಣೆಯ ಸಮಯದಲ್ಲಿ ವಕೀಲ ವಿಷ್ಣು ಶಂಕರ್ ಜೈನ್ ಅವರು ಮಾತನಾಡಿ, “ಯುಜಿಸಿ ನಿಯಮಗಳ ‘ಕಲಂ 3 ಸಿ’ ಅನ್ನು ನಾವು ಪ್ರಶ್ನಿಸುತ್ತಿದ್ದೇವೆ; ಏಕೆಂದರೆ ಅದರಲ್ಲಿ ಜಾತಿ ತಾರತಮ್ಯದ ಉಲ್ಲೇಖವಿದೆ. ನಿಯಮಗಳಲ್ಲಿ ನೀಡಲಾದ ತಾರತಮ್ಯದ ವ್ಯಾಖ್ಯಾನವು ಸಂಪೂರ್ಣವಾಗಿ ಸರಿಯಿಲ್ಲ. ಇದು ಸಂವಿಧಾನದ ಸಮಾನತೆಯ ಭಾವನೆಗೆ ವಿರುದ್ಧವಾಗಿದೆ. ಸಂವಿಧಾನದ ಪ್ರಕಾರ ತಾರತಮ್ಯದ ಪ್ರಶ್ನೆಯು ದೇಶದ ಎಲ್ಲಾ ನಾಗರಿಕರಿಗೆ ಸಂಬಂಧಿಸಿದ್ದಾಗಿದೆ; ಆದರೆ ಯುಜಿಸಿ ಕಾಯ್ದೆಯು ಕೇವಲ ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಇದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ ಆದೇಶಗಳ ಆಶಯಕ್ಕೂ ವಿರುದ್ಧವಾಗಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಹೆಚ್ಚಾಗುತ್ತದೆ ಮತ್ತು ಸಂವಿಧಾನದ ಸಮಾನತೆಯ ತತ್ವಗಳಿಗೆ ಧಕ್ಕೆ ತರುತ್ತದೆ” ಎಂದು ಹೇಳಿದರು.

ನಿಯಮಗಳಿಗೆ ಮುಂದುವರೆದ ವಿರೋಧ !

ದೇಶಾದ್ಯಂತ ಸವರ್ಣೀಯ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರಿಂದ ಹೊಸ ನಿಯಮಗಳಿಗೆ ವಿರೋಧ ಮುಂದುವರಿದಿದೆ. ಜನವರಿ 29 ರಂದು ದೆಹಲಿ ವಿಶ್ವವಿದ್ಯಾಲಯದ ಹೊರಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಉತ್ತರಪ್ರದೇಶದ ಲಖಾನೌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದಲೂ ಕೂಡ ವಿರೋಧ ವ್ಯಕ್ತವಾಗಿದೆ.