ಕಾಂಗ್ರೆಸ್ ಮುಸಲ್ಮಾನರನ್ನು ಕೇವಲ ಭಯೋತ್ಪಾದಕರನ್ನಾಗಿ ಮಾಡಿದೆ! – ಛತ್ತೀಸ್ ಗಢ ವಕ್ಫ್ ಮಂಡಳಿಯ ಅಧ್ಯಕ್ಷ ಸಲೀಂ ರಾಜ್

ರಾಯಪುರ (ಛತ್ತೀಸಗಢ) – ಕಾಂಗ್ರೆಸ್ ಮುಸಲ್ಮಾನರನ್ನು ಕೇವಲ ಭಯೋತ್ಪಾದಕರನ್ನಾಗಿ ಮಾಡುವ ಕೆಲಸ ಮಾಡಿದೆ ಎಂದು ಛತ್ತೀಸಗಢ ವಕ್ಫ್ ಮಂಡಳಿಯ ಅಧ್ಯಕ್ಷ ಸಲೀಂ ರಾಜ್ ಆರೋಪಿಸಿದ್ದಾರೆ. ಸಲೀಂ ರಾಜ್ ಅವರ ಪ್ರಕಾರ, ಕಾಂಗ್ರೆಸ್ ಮುಸಲ್ಮಾನರನ್ನು ದೇಶದ ಏಕತೆಯಿಂದ ದೂರವಿಟ್ಟಿದೆ ಮತ್ತು ಸಂಶಯಾಸ್ಪದ ಕೃತ್ಯಗಳೊಂದಿಗೆ ಜೋಡಿಸಿದೆ. ಕಾಂಗ್ರೆಸ್ ನ ಕೆಲವು ನಾಯಕರು ಭಯೋತ್ಪಾದಕ ವ್ಯಕ್ತಿಗಳ ಬಗ್ಗೆ ಅನುಚಿತ ಸಂಬೋಧನೆಗಳನ್ನು ಬಳಸಿದ್ದರಿಂದ ‘ಪಕ್ಷವು ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ’ ಎಂದು ಹೇಳಲಾಗುತ್ತಿದೆ ಎಂದವರು ನುಡಿದರು. ಸಲೀಂ ರಾಜ್ ಅವರ ಪ್ರಕಾರ ಭಾಜಪ ರಾಷ್ಟ್ರವಾದವನ್ನು ಬೆಂಬಲಿಸುತ್ತದೆ.

ರಾಷ್ಟ್ರೀಯ ಹಬ್ಬಗಳ ನಿಮಿತ್ತ ಮಸೀದಿ ಮತ್ತು ಮದರಸಾಗಳ ಮೇಲೆ ರಾಷ್ಟ್ರ ಧ್ವಜಾರೋಹಣ!

ಆಗಸ್ಟ್ ೧೫ ಮತ್ತು ಜನವರಿ ೨೬ ರ ರಾಷ್ಟ್ರೀಯ ಹಬ್ಬಗಳ ನಿಮಿತ್ತ ರಾಜ್ಯದ ಮಸೀದಿ ಹಾಗೂ ಮದರಸಾಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು ಮತ್ತು ಸಿಹಿ ಹಂಚಲಾಗುವುದು ಎಂದು ಛತ್ತೀಸಗಢ ವಕ್ಫ್ ಮಂಡಳಿ ನಿರ್ಧಾರ ತೆಗೆದುಕೊಂಡಿದೆ ಎಂದು ಸಲೀಂ ರಾಜ್ ಸ್ಪಷ್ಟಪಡಿಸಿದರು. ಈ ಉಪಕ್ರಮವು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುತ್ತದೆ, ಹಾಗೆಯೇ ‘ಮುಸಲ್ಮಾನರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದಿಲ್ಲವೇ?’ ಎಂಬ ಆರೋಪಗಳಿಗೆ ಉತ್ತರ ನೀಡುತ್ತದೆ ಎಂದು ಮಂಡಳಿ ಹೇಳಿದೆ. ಕೆಲವು ಬಡ ಸಂಸ್ಥೆಗಳು ಸಿಹಿ ಹಂಚಲು ಅಸಮರ್ಥತೆ ವ್ಯಕ್ತಪಡಿಸಿದ ನಂತರ, ಮಂಡಳಿಯು ಅವರಿಗೆ ಸಹಾಯ ಮಾಡುವುದಾಗಿ ಘೋಷಿಸಿತು.

ಬಡ ಸಂಸ್ಥೆಗಳಿಗೆ ಆರ್ಥಿಕ ನೆರವು!

ಆರ್ಥಿಕವಾಗಿ ಹಿಂದುಳಿದ ಸಂಸ್ಥೆಗಳಿಗೆ ೫೦೦೦-೭೦೦೦ ರೂಪಾಯಿಗಳ ಅನುದಾನ ನೀಡಲಾಗುವುದು ಎಂದು ಸಲೀಂ ರಾಜ್ ತಿಳಿಸಿದರು. ಈ ಮೊತ್ತವನ್ನು ಧ್ವಜಾರೋಹಣ, ಸಿಹಿ ವಿತರಣೆ ಮತ್ತು ಕಿರು ಸಮ್ಮೇಳನವನ್ನು ಆಯೋಜಿಸಲು ಬಳಸಲಾಗುವುದು. ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಮತ್ತು ಸಮಾಜದ ಘಟಕಗಳ ನಡುವೆ ಆಗಸ್ಟ್ ೧೫ ಮತ್ತು ಜನವರಿ ೨೬ ರ ಮಹತ್ವದ ಬಗ್ಗೆ ಚರ್ಚೆ ನಡೆಯಲಿದೆ.

ಸಲೀಂ ರಾಜ್ ಅವರ ಹೇಳಿಕೆ ಆಕ್ಷೇಪಾರ್ಹ! – ಟಿ.ಎಸ್. ಸಿಂಗ್ ದೇವ್

ಕಾಂಗ್ರೆಸ್ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಟಿ.ಎಸ್. ಸಿಂಗ್ ದೇವ್ ಅವರು ಸಲೀಂ ರಾಜ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ, ಮದರಸಾಗಳಲ್ಲಿ ಆಗಸ್ಟ್ ೧೫ ಮತ್ತು ಜನವರಿ ೨೬ ರಂದು ಧ್ವಜಾರೋಹಣ ಮೊದಲಿನಿಂದಲೂ ನಡೆಯುತ್ತಿದೆ ಎಂದು ಹೇಳಿದರು. ಸಿಹಿ ವಿತರಣೆಗೆ ಯಾವುದೇ ಆಕ್ಷೇಪವಿಲ್ಲ; ಆದರೆ ಕಾಂಗ್ರೆಸ್ ಮೇಲೆ ಮಾಡಲಾದ ಆರೋಪಗಳು ದುರದೃಷ್ಟಕರ ಮತ್ತು ಆಕ್ಷೇಪಾರ್ಹವಾಗಿವೆ. ಭಯೋತ್ಪಾದನೆಯು ಯಾವುದೇ ಒಂದು ಪಕ್ಷ ಅಥವಾ ಸರಕಾರಕ್ಕೆ ಸಂಬಂಧಿಸಿದ್ದಲ್ಲ. ಅದು ಕೆಲವು ಜನರ ವಿಕೃತ ಮಾನಸಿಕತೆಯ ಫಲಿತಾಂಶವಾಗಿದೆ ಮತ್ತು ರಾಜಕೀಯ ಲಾಭಕ್ಕಾಗಿ ಅದನ್ನು ಜೋಡಿಸುವುದು ಸರಿಯಲ್ಲ ಎಂದವರು ಹೇಳಿದರು.

ಧಾರ್ಮಿಕ ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂಪ್ರದಾಯವಿಲ್ಲ!

ಟಿ.ಎಸ್. ಸಿಂಗ್ ದೇವ್ ಅವರು ದೇವಸ್ಥಾನ, ಮಸೀದಿ, ಗುರುದ್ವಾರ, ಚರ್ಚ್ ಅಂತಹ ಧಾರ್ಮಿಕ ಸ್ಥಳಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸುವ ಸಂಪ್ರದಾಯವಿಲ್ಲ ಎಂದು ಹೇಳಿದರು; (ಹೀಗಿದ್ದರೂ, ಮಸೀದಿ ಮತ್ತು ಮದರಸಾಗಳಿಂದ ದೇಶದ್ರೋಹಿ ಜಿಹಾದಿ ಭಯೋತ್ಪಾದನೆ ಮಾಡಲಾಗುತ್ತಿರುವುದನ್ನು ಸಿಂಗ್ ದೇವ್ ಅವರು ಒಪ್ಪುತ್ತಾರೆಯೇ? ಕಾಂಗ್ರೆಸ್ ಇದುವರೆಗೆ ಅದನ್ನು ಬಹಿರಂಗವಾಗಿ ಏಕೆ ವಿರೋಧಿಸಲಿಲ್ಲ? ಇದಕ್ಕೆ ಅವರು ಉತ್ತರಿಸಬೇಕು! – ಸಂಪಾದಕರು). ಆದರೆ ಶಾಲೆ ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರೀಯ ಹಬ್ಬಗಳ ನಿಮಿತ್ತ ಧ್ವಜಾರೋಹಣ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಲೀಂ ರಾಜ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಗೆ ಜೋಡಿಸುವುದು ಮತ್ತು ಅದನ್ನು ಮುಸಲ್ಮಾನ್ ಭಯೋತ್ಪಾದನೆಯ ಚರ್ಚೆಯೊಂದಿಗೆ ಸೇರಿಸುವುದು ಅನುಚಿತವಾಗಿದೆ ಎಂದವರು ಹೇಳಿದರು.