‘ನಮಗೆ ಹಿಂದೂಗಳ ಮತಗಳು ಬೇಡ’ ಎಂದು ಕಾಂಗ್ರೆಸ್ ಘೋಷಿಸಲಿ! – ಸಿ.ಟಿ. ರವಿಯವರ ಸವಾಲು

ಕಾಂಗ್ರೆಸ್ ನಾಯಕ ರಮಾನಾಥ ರೈ ಅವರಿಂದ ‘ದೇವಸ್ಥಾನಗಳ ಮೇಲೆ ಭಗವಾ ಧ್ವಜ ಹಾರಿಸಬಾರದು’ ಎಂಬ ಧರ್ಮದ್ರೋಹಿ ಹೇಳಿಕೆ ಪ್ರಕರಣ !

ಬೆಂಗಳೂರು – ಸ್ವತಃ ಹಿಂದೂ ಆಗಿರುವ ಮತ್ತು ದೇವರನ್ನು ಪೂಜಿಸುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ರಮಾನಾಥ ರೈ ಅವರಿಗೆ ಭಗವಾ ಧ್ವಜವು ‘ರಾಜಕೀಯ ಧ್ವಜ’ವಾಗಿ ಕಾಣುತ್ತಿರುವುದು ಒಂದು ದೊಡ್ಡ ವಿರೋಧಾಭಾಸವಾಗಿದೆ. ತ್ಯಾಗ ಮತ್ತು ಶೌರ್ಯದ ಸಂಕೇತವಾಗಿರುವ, ಸಾಧು-ಸಂತರು ಎತ್ತಿ ಹಿಡಿದಿರುವ ಮತ್ತು ದೇಶದ ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಭಗವಾ ಧ್ವಜವು ರಾಜಕೀಯ ಧ್ವಜವಾಗಲು ಹೇಗೆ ಸಾಧ್ಯ? ಎಂದು ಭಾಜಪ ನಾಯಕ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಭಗವಾ ಧ್ವಜವನ್ನು ರಾಜಕೀಯ ಧ್ವಜ ಎಂದು ಕರೆಯುವುದು ತುಷ್ಟೀಕರಣದ ರಾಜಕಾರಣವಲ್ಲದೆ ಬೇರೇನೂ ಅಲ್ಲ. ಕಾಂಗ್ರೆಸ್ ಮೂಲತಃ ಹಿಂದೂ ವಿರೋಧಿ ಪಕ್ಷವಾಗಿದೆ. ಧೈರ್ಯವಿದ್ದರೆ ಕಾಂಗ್ರೆಸ್ ನಾಯಕರು ‘ನಾವು ಭಗವಾ ಧ್ವಜವಿರುವ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಮತ್ತು ನಮಗೆ ಹಿಂದೂಗಳ ಮತಗಳು ಬೇಡ’ ಎಂದು ಘೋಷಿಸಲಿ ಎಂದು ರವಿ ಸವಾಲು ಹಾಕಿದ್ದಾರೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆಯುವ ‘ಪರ್ಯಾಯ’ ಉತ್ಸವದಲ್ಲಿ ಭಗವಾ ಧ್ವಜ ಹಾರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಅದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಮಾನಾಥ ರೈ ಅವರು ‘ದೇವಸ್ಥಾನಗಳ ಮೇಲೆ ಭಗವಾ ಧ್ವಜ ಹಾರಿಸಬಾರದು’ ಎಂಬ ಧರ್ಮದ್ರೋಹಿ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸಿ.ಟಿ. ರವಿ ಮೇಲಿನಂತೆ ಸವಾಲು ಹಾಕಿದ್ದಾರೆ.