ದೇವಾಲಯಗಳ ಮೇಲೆ ಕೇಸರಿ ಧ್ವಜ ಹಾರಿಸಬಾರದಂತೆ ! – Ramanath Rai

  • ಕಾಂಗ್ರೆಸ್ ನಾಯಕ ರಮಾನಾಥ ರೈ ಅವರ ಧರ್ಮದ್ರೋಹಿ ಹೇಳಿಕೆ

  • ಕೇಸರಿ ಧ್ವಜವನ್ನು ರಾಜಕೀಯ ಪಕ್ಷದೊಂದಿಗೆ ಜೋಡಿಸುವ ಪ್ರಯತ್ನ!

ಉಡುಪಿ – ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆಯುವ ‘ಪರ್ಯಾಯ’ ಉತ್ಸವದಲ್ಲಿ ಕೇಸರಿ ಧ್ವಜ ಹಾರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಉಡುಪಿ ಕಾಂಗ್ರೆಸ್ ಘಟಕವು, ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಈಗ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ರಮಾನಾಥ ರೈ ಅವರು ‘ದೇವಾಲಯಗಳ ಮೇಲೆ ಕೇಸರಿ ಧ್ವಜ ಹಾರಿಸಬಾರದು’ ಎಂದು ಧರ್ಮದ್ರೋಹಿ ಹೇಳಿಕೆ ನೀಡಿದ್ದಾರೆ. ರಮಾನಾಥ ರೈ ಮಾತನಾಡಿ, ‘ದೇವಾಲಯಗಳಲ್ಲಿ ಕೇಸರಿ ಧ್ವಜ ಸೇರಿದಂತೆ ಯಾವುದೇ ಧ್ವಜವನ್ನು ಹಾರಿಸಬೇಡಿ; ಅದು ಕಾಂಗ್ರೆಸ್ ಧ್ವಜವಿರಲಿ ಅಥವಾ ಕೇಸರಿ ಧ್ವಜವಿರಲಿ. ಯಾವುದೇ ರಾಜಕೀಯ ಪ್ರೇರಿತ ಧ್ವಜವನ್ನು ಧಿಕ್ಕರಿಸಬೇಕು’ ಎಂದು ಹೇಳಿದರು. ಅವರ ಈ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಬ್ರಿಜೇಶ್ ಚೌಟ ಅವರು ‘ಎಕ್ಸ್’ (ಟ್ವಿಟರ್) ನಲ್ಲಿ ಪೋಸ್ಟ್ ಮಾಡುವ ಮೂಲಕ ಟೀಕಿಸಿದ್ದಾರೆ. ಅವರು, ‘ಎಸ್‌ಡಿಪಿಐ ಬೆನ್ನಿಗೆ ನಿಲ್ಲುವ ಕಾಂಗ್ರೆಸ್ಸಿಗರಿಗೆ ಹಿಂದೂಗಳು ಏನು ಮಾಡಬೇಕು? ಮತ್ತು ಏನು ಮಾಡಬಾರದು? ಎಂದು ಹೇಳುವ ಅಧಿಕಾರವಿಲ್ಲ. ನಿಮ್ಮ ಸಲಹೆ ಹಿಂದೂಗಳಿಗೆ ಬೇಡ. ನಮ್ಮ ಹಬ್ಬ ಮತ್ತು ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕೆಂದು ನಿಮ್ಮಿಂದ ಕಲಿಯುವ ಅಗತ್ಯ ನಮಗಿಲ್ಲ’ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ರಮಾನಾಥ ರೈ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ‘ಕಾಂಗ್ರೆಸ್‌ಗೆ ಕೇಸರಿ ಧ್ವಜದ ಮೇಲೆ ಇಷ್ಟೊಂದು ದ್ವೇಷವೇಕೆ? ‘ಪಾಕಿಸ್ತಾನ್ ಜಿಂದಾಬಾದ್’ ಎನ್ನುವವರನ್ನು ಸುಮ್ಮನೆ ಬಿಡಲಾಗುತ್ತದೆ; ಆದರೆ ಹಿಂದೂಗಳು ದೇವಾಲಯದ ಉತ್ಸವಗಳಲ್ಲಿ ಕೇಸರಿ ಧ್ವಜ ಹಾರಿಸಬಾರದು ಎಂದು ಹೇಳಲಾಗುತ್ತದೆ. ನಾವು ನಿಜವಾಗಿಯೂ ಯಾವ ದೇಶದಲ್ಲಿದ್ದೇವೆ?’ ಎಂದು ಅನೇಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರ್ಯಾಯ ಉತ್ಸವ ಎಂದರೇನು?

‘ಪರ್ಯಾಯ’ ಇದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಚರಿಸಲಾಗುವ ಅತ್ಯಂತ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವಾಗಿದೆ. ಉಡುಪಿಯ ಪ್ರಮುಖ ಅಷ್ಟಮಠಗಳಲ್ಲಿ ಶ್ರೀಕೃಷ್ಣನ ಪೂಜೆಯ ಅಧಿಕಾರ ಮತ್ತು ಮಠದ ಆಡಳಿತಾತ್ಮಕ ಜವಾಬ್ದಾರಿಗಳನ್ನು ಹಸ್ತಾಂತರಿಸುವ ಉತ್ಸವವನ್ನು ‘ಪರ್ಯಾಯ ಉತ್ಸವ’ ಎಂದು ಕರೆಯಲಾಗುತ್ತದೆ.

ಸಂಪಾದಕೀಯ ನಿಲುವು

  • ಮುಂದೊಂದು ದಿನ ಕಾಂಗ್ರೆಸ್ಸಿಗರು ‘ದೇವಾಲಯಗಳೇ ಬೇಡ’ ಎಂದು ಹೇಳಲು ಹಿಂಜರಿಯುವುದಿಲ್ಲ. ಹೀಗಾಗಬಾರದು ಎಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯೇ ಏಕೈಕ ಪರ್ಯಾಯ!
  • ಕೇಸರಿ ಧ್ವಜವು ಹಿಂದೂ ಧರ್ಮದ ಧ್ವಜವಾಗಿದ್ದು, ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ಅಂತಹ ಕೇಸರಿ ಧ್ವಜವನ್ನು ರಾಜಕೀಯ ಪಕ್ಷಕ್ಕೆ ಜೋಡಿಸುವ ಕಾಂಗ್ರೆಸ್ ನಾಯಕನ ಧರ್ಮದ ಬಗೆಗಿನ ಅಜ್ಞಾನವು ಬಯಲಾಗಿದೆ. ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣದ ಸುದೀರ್ಘ ಇತಿಹಾಸವನ್ನು ನೋಡಿದರೆ, ರೈ ಅವರು ಮುಸ್ಲಿಮರ ಓಲೈಕೆಗಾಗಿ ಈ ಹೇಳಿಕೆ ನೀಡಿರಬಹುದು ಎಂಬ ಸಂಶಯ ಮೂಡುತ್ತದೆ.