ಅಜ್ಮೀರ್ ದರ್ಗಾದಲ್ಲಿ ಪ್ರಾಚೀನ ಶಿವ ದೇವಾಲಯವಿದೆ ಎಂದು ದಾವೆ ಮಾಡುವ ಅರ್ಜಿಯನ್ನು ಸಿವಿಲ್ ನ್ಯಾಯಾಲಯದಿಂದ ವಿಚಾರಣೆಗೆ ಸ್ವೀಕಾರ – Petition Claiming Ajmer Dargah

ರಾಜಸ್ಥಾನ ಸರಕಾರ, ಭಾರತೀಯ ಪುರಾತತ್ವ ಇಲಾಖೆ (ASI) ಮತ್ತು ದರ್ಗಾ ಸಮಿತಿಗೆ ನೋಟಿಸ್ ಜಾರಿ

ಅಜ್ಮೀರ್ (ರಾಜಸ್ಥಾನ) – ಇಲ್ಲಿನ ಅಜ್ಮೀರ್ ದರ್ಗಾದ ಒಳಗೆ ಪ್ರಾಚೀನ ಶಿವ ದೇವಾಲಯವಿದೆ ಎಂದು ಮಹಾರಾಣಾ ಪ್ರತಾಪ್ ಸೇನೆ ಸಲ್ಲಿಸಿದ್ದ ಅರ್ಜಿಯನ್ನು ಅಜ್ಮೀರ್ ಸಿವಿಲ್ ನ್ಯಾಯಾಲಯವು ಸ್ವೀಕರಿಸಿದೆ. ಈ ಪ್ರಕರಣದಲ್ಲಿ ರಾಜಸ್ಥಾನ ಸರಕಾರ, ಭಾರತೀಯ ಪುರಾತತ್ವ ಇಲಾಖೆ ಮತ್ತು ದರ್ಗಾ ಸಮಿತಿಯನ್ನು ಪ್ರತಿವಾದಿಗಳನ್ನಾಗಿ ಮಾಡಿ ನ್ಯಾಯಾಲಯವು ನೋಟಿಸ್ ನೀಡಿದೆ. ಈ ವಿವಾದದ ಮುಂದಿನ ವಿಚಾರಣೆಯು ಫೆಬ್ರವರಿ 21 ರಂದು ನಡೆಯಲಿದೆ.

ದರ್ಗಾದಲ್ಲಿ ಉತ್ಖನನ ನಡೆದರೆ ಮಹಾದೇವನೇ ಸಿಗಲಿದ್ದಾನೆ! – ಮಹಾರಾಣಾ ಪ್ರತಾಪ್ ಸೇನೆಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್

ಮಹಾರಾಣಾ ಪ್ರತಾಪ್ ಸೇನೆಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಅವರು, “ಇಂದು ಅಜ್ಮೀರ್ ದರ್ಗಾ ಎಂದು ಕರೆಯಲ್ಪಡುವ ಸ್ಥಳವು ವಾಸ್ತವವಾಗಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಅಜಯಮೇರು ನಗರದ ಭಾಗವಾಗಿದೆ. ಅಜ್ಮೀರ್ ದರ್ಗಾದ ಕೆಳಗೆ ಭಗವಾನ್ ಶಂಕರನ ಪ್ರಾಚೀನ ದೇವಾಲಯವು ಇಂದಿಗೂ ಮುಚ್ಚಿದ ಸ್ಥಿತಿಯಲ್ಲಿದೆ. ಈ ವಿಷಯವು ಕೇವಲ ಕಾಗದಪತ್ರಗಳಿಗೆ ಸೀಮಿತವಾಗಿಲ್ಲ. ಈ ಬೇಡಿಕೆಗಾಗಿ ನಾವು ರಾಜಸ್ಥಾನದಲ್ಲಿ ಸುಮಾರು 7 ಸಾವಿರದ 800 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದೇವೆ. ಈ ಪ್ರಯಾಣದಲ್ಲಿ 1 ಲಕ್ಷದ 25 ಸಾವಿರ ಜನರ ಸಹಿಗಳನ್ನು ಸಂಗ್ರಹಿಸಲಾಗಿದ್ದು, ಅದರ ಅಫಿಡವಿಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದು ಕೋಟ್ಯಂತರ ಹಿಂದೂಗಳ ನಂಬಿಕೆಯ ವಿಷಯವಾಗಿದೆ. ದರ್ಗಾದಲ್ಲಿ ಉತ್ಖನನ ನಡೆದರೆ ಮಹಾದೇವನೇ ಪತ್ತೆಯಾಗಲಿದ್ದಾನೆ,” ಎಂದು ಹೇಳಿದ್ದಾರೆ.

ಸೇನೆಯ ಪರ ವಕೀಲ ಎ.ಪಿ. ಸಿಂಗ್ ಅವರು ನ್ಯಾಯಾಲಯದಲ್ಲಿ ಮಾತನಾಡಿ, ಕಂದಾಯ ಇಲಾಖೆಯ ಹಳೆಯ ನಕ್ಷೆಗಳು ಮತ್ತು ಶಿವಲಿಂಗದ ಹಳೆಯ ಛಾಯಾಚಿತ್ರಗಳು ತಮ್ಮ ಬಳಿ ಇವೆ. ಈ ಸ್ಥಳದಲ್ಲಿ ಹಿಂದೆ ಶತಮಾನಗಳ ಕಾಲ ಪೂಜೆ ನಡೆಯುತ್ತಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ, ಎಂದು ತಿಳಿಸಿದರು.

ರಾಜವರ್ಧನ್ ಸಿಂಗ್ ಅವರೇ ಮುಖ್ಯ ಅರ್ಜಿದಾರರು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ

ಈ ದರ್ಗಾದ ಬಗ್ಗೆ ಈ ಹಿಂದೆಯೂ ಅರ್ಜಿ ಸಲ್ಲಿಕೆಯಾಗಿತ್ತು; ಆದರೆ ನ್ಯಾಯಾಲಯವು ಈ ಪ್ರಕರಣದಲ್ಲಿ ರಾಜವರ್ಧನ್ ಸಿಂಗ್ ಅವರನ್ನು ಮುಖ್ಯ ಅರ್ಜಿದಾರರೆಂದು ಪರಿಗಣಿಸಿದೆ. ಏಕೆಂದರೆ, 2022 ರಲ್ಲಿ ಅವರು ಈ ವಿಷಯದ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದರು. ಈ ವಿಷಯದಲ್ಲಿ ಅವರೇ ಮೊದಲು ಮುಂದಾಳತ್ವ ವಹಿಸಿದ್ದರು ಎಂಬುವುದನ್ನು ನ್ಯಾಯಾಲಯವು ಒಪ್ಪಿಕೊಂಡಿದೆ. ಈಗ ದರ್ಗಾ ಸಮಿತಿ ಮತ್ತು ರಾಜ್ಯ ಸರಕಾರವು ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸಬೇಕಿದೆ.