ರಶಿಯಾದ ತೈಲ ನೌಕೆ ಜಪ್ತಿ ಮಾಡಿದ ಅಮೆರಿಕಾ! – America Seizes Russian Oil Ships

ನೌಕೆಯನ್ನು ರಕ್ಷಿಸಲು ವಿಫಲವಾದ ರಶಿಯಾ ನೌಕಾಪಡೆ !

ವಾಷಿಂಗ್ಟನ್ (ಅಮೆರಿಕಾ) – ವೆನೆಜುವೆಲಾ ವಿವಾದದ ನಡುವೆ ಈಗ ಅಮೆರಿಕಾ ಮತ್ತು ರಶಿಯಾ ಮಧ್ಯೆ ನೇರ ಸಂಘರ್ಷ ಆರಂಭವಾಗಿದೆ. ವೆನೆಜುವೆಲಾದಿಂದ ತೈಲವನ್ನು ಖರೀದಿಸುತ್ತಿದ್ದ ಎರಡು ತೈಲ ನೌಕೆಗಳನ್ನು ಅಮೆರಿಕಾ ವಶಪಡಿಸಿಕೊಂಡಿದೆ. ಒಂದು ನೌಕೆ ರಶಿಯಾಕ್ಕೆ ಸೇರಿದ್ದು, ಮತ್ತೊಂದು ನೌಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ‘ಮ್ಯಾರಿನೆರಾ’ ಎಂಬ ರಶಿಯಾದ ನೌಕೆಯ ಮೇಲೆ ರಶಿಯಾದ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಈ ನೌಕೆಯನ್ನು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ವಶಪಡಿಸಿಕೊಳ್ಳಲಾಯಿತು. ಇನ್ನೊಂದು ನೌಕೆಯನ್ನು ಕೆರಿಬಿಯನ್ ಸಮುದ್ರದಲ್ಲಿ ಹಿಡಿಯಲಾಗಿದೆ. ಅಮೆರಿಕಾ ಕಳೆದ ಎರಡು ವಾರಗಳಿಂದ ಈ ಎರಡೂ ನೌಕೆಗಳನ್ನು ಬೆನ್ನಟ್ಟುತ್ತಿತ್ತು. ಈ ನೌಕೆಗಳು ವೆನೆಜುವೆಲಾದಿಂದ ತೈಲವನ್ನು ಪಡೆದು ಚೀನಾ ಅಥವಾ ಇತರ ದೇಶಗಳಿಗೆ ತಲುಪಿಸುತ್ತಿದ್ದವು ಎಂದು ಹೇಳಲಾಗುತ್ತಿದೆ. ವಿಚಿತ್ರವೆಂದರೆ, ಈ ನೌಕೆಯ ರಕ್ಷಣೆಗಾಗಿ ಜಲಾಂತರ್ಗಾಮಿ ಮತ್ತು ಯುದ್ಧನೌಕೆಗಳನ್ನು ರಶಿಯಾ ಕಳುಹಿಸಿತ್ತು; ಆದರೆ ಅವುಗಳಿಗೆ ಈ ನೌಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

‘ಮ್ಯಾರಿನೆರಾ’ದ ಹಳೆಯ ಹೆಸರು ‘ಬೆಲ್ಲಾ-1’. ಅಮೆರಿಕಾ ಇದನ್ನು ನಿರ್ಬಂಧಿತ ನೌಕೆಗಳ ಪಟ್ಟಿಯಲ್ಲಿ ಸೇರಿಸಿತ್ತು. ನಂತರ ಅಮೆರಿಕಾದಿಂದ ಬಚಾವಾಗಲು ಕಳೆದ ತಿಂಗಳು ಇದರ ಹೆಸರನ್ನು ಬದಲಾಯಿಸಲಾಗಿತ್ತು. ಡಿಸೆಂಬರ್ 2025 ರಲ್ಲಿ ಈ ನೌಕೆ ವೆನೆಜುವೆಲಾದತ್ತ ಹೋಗುತ್ತಿತ್ತು. ಆಗ ಅಮೆರಿಕಾದ ಕರಾವಳಿ ರಕ್ಷಣಾ ಪಡೆಯು ಇದನ್ನು ತಡೆಯಲು ಪ್ರಯತ್ನಿಸಿತ್ತು. ಆಗ ಸಿಬ್ಬಂದಿಯ ಜಾಣ್ಮೆಯಿಂದಾಗಿ ಈ ನೌಕೆ ಪಾರಾಗಿತ್ತು.

ಅಮೆರಿಕಾದ ಮೇಲೆ ಅಣುಬಾಂಬ್ ಹಾಕಿ! – ರಷ್ಯಾದ ಅಧಿಕಾರಿಗಳ ಪ್ರತಿಕ್ರಿಯೆ

ಅಮೆರಿಕಾದ ಈ ಕ್ರಮದಿಂದಾಗಿ ಮಾಸ್ಕೋದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ರಶಿಯಾದ ಉನ್ನತ ಅಧಿಕಾರಿಗಳು ಈ ಬಗ್ಗೆ ಕಟುವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ರಶಿಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತ ಬೆಂಬಲಿಗ ಅಲೆಕ್ಸಿ ಜುರಾವ್ಲೆವ್ ಮಾತನಾಡಿ, ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ನಂತರ ಅಮೆರಿಕಾ ಮತ್ತಷ್ಟು ಆಕ್ರಮಣಕಾರಿಯಾಗಿದೆ ಮತ್ತು ರಶಿಯಾ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಅಗತ್ಯವಿದೆ. ಕ್ಷಿಪಣಿಗಳ ಮೂಲಕ ದಾಳಿ ಮಾಡುವುದು ಅಥವಾ ಕೆಲವು ಅಮೆರಿಕನ್ ನೌಕೆಗಳನ್ನು ಮುಳುಗಿಸುವುದು ಪರ್ಯಾಯ ಆಯ್ಕೆಯಾಗಿವೆ. ರಶಿಯಾದ ಮಿಲಿಟರಿ ಸಿದ್ಧಾಂತದ ಪ್ರಕಾರ ಇಂತಹ ದಾಳಿಗಳಿಗೆ ಪ್ರತಿಯಾಗಿ ಅಣ್ವಸ್ತ್ರಗಳನ್ನು ಬಳಸುವ ಅವಕಾಶವೂ ಇದೆ ಎಂದು ಜುರಾವ್ಲೆವ್ ಹೇಳಿದ್ದಾರೆ.