ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”

  • ರಾಜ್ಯದಲ್ಲಿ ವಿಶೇಷ ಪರಿಶೀಲನಾ ಪ್ರಕ್ರಿಯೆಯಲ್ಲಿ ಬಹಿರಂಗವಾದ ಮಾಹಿತಿ

  • ಒಂದೇ ವ್ಯಕ್ತಿಯ ಹೆಸರು ಬೇರೆ ಬೇರೆ ಮತಕ್ಷೇತ್ರಗಳಲ್ಲಿ ಇರುವ (ದ್ವಿಪ್ರತಿ ಮತದಾರರ) ಅಂಕಿ-ಅಂಶ ಇದಾಗಿದೆ

ಬೆಂಗಳೂರು – ನಗರದಲ್ಲಿ ನಡೆಯುತ್ತಿರುವ ವಿಶೇಷ ಪರಿಶೀಲನಾ ಪ್ರಕ್ರಿಯೆಯಲ್ಲಿ 4 ಲಕ್ಷ ಮತದಾರರು ಅಕ್ರಮವಾಗಿರುವ ಮಾಹಿತಿ ಬಹಿರಂಗವಾಗಿದೆ. ಕೆಲವು ಮತದಾರರು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಗುರುತಿನ ಚೀಟಿ (ದ್ವಿಪ್ರತಿ ಮತದಾರರು) ಹೊಂದಿರುವುದು ಪತ್ತೆಯಾಗಿದೆ. ರಾಜ್ಯ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಹಂತದ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದ್ದು, ರಾಜ್ಯದ ಲಕ್ಷಾಂತರ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.

1. ಪ್ರಕ್ರಿಯೆಯ ವ್ಯಾಪ್ತಿ : ಚುನಾವಣಾ ಅಧಿಕಾರಿಗಳ ಅಂಕಿ-ಅಂಶಗಳ ಪ್ರಕಾರ, ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ಮಹಾನಗರ ಪಾಲಿಕೆಗಳ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 97 ಲಕ್ಷ ಮತದಾರರಿದ್ದಾರೆ.

2. ಇತರ ಜಿಲ್ಲೆಗಳಲ್ಲಿ ಅಥವಾ ರಾಜ್ಯಗಳಲ್ಲಿಯೂ ಹೆಸರುಗಳು : ಇವರಲ್ಲಿ 4 ಲಕ್ಷ ಜನರ ಹೆಸರುಗಳು ರಾಜ್ಯದ ಇತರ ಜಿಲ್ಲೆಗಳ ಅಥವಾ ಇತರ ರಾಜ್ಯಗಳ ಮತದಾರರ ಪಟ್ಟಿಯಲ್ಲಿಯೂ ಇರುವುದು ಕಂಡುಬಂದಿದೆ.

3. ಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ಕಡೆ ಹೆಸರು : ಇದಲ್ಲದೆ ಸುಮಾರು 11 ಸಾವಿರ ಜನರ ಹೆಸರುಗಳು ಒಂದೇ ವಿಧಾನಸಭಾ ಕ್ಷೇತ್ರದ ಬೇರೆ ಬೇರೆ ಮತಗಟ್ಟೆಗಳಲ್ಲಿ ಇರುವುದು ಬೆಳಕಿಗೆ ಬಂದಿದೆ.

ನಿಯಮ ಏನು ಹೇಳುತ್ತದೆ?

ನಿಯಮಗಳ ಪ್ರಕಾರ, ದೇಶದಲ್ಲಿ ಒಬ್ಬ ಮತದಾರನ ಹೆಸರು ಕೇವಲ ಒಂದು ಮತಗಟ್ಟೆಯಲ್ಲಿ ಮಾತ್ರ ಇರಬೇಕು. ಆದ್ದರಿಂದ, ಮತದಾರರು ಕೊನೆಯದಾಗಿ ಮತದಾನ ಮಾಡಿದ ಅಥವಾ ಪ್ರಸ್ತುತ ವಾಸಿಸುತ್ತಿರುವ ಸ್ಥಳದ ಆಧಾರದ ಮೇಲೆ ಒಂದು ಹೆಸರನ್ನು ಉಳಿಸಿಕೊಂಡು, ಉಳಿದ ನಮೂದುಗಳನ್ನು ತೆಗೆದುಹಾಕಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ಚುನಾವಣಾ ಪ್ರಕ್ರಿಯೆಯು ಹೆಚ್ಚು ಪಾರದರ್ಶಕವಾಗಲಿದ್ದು, ನಕಲಿ ಮತ್ತು ದ್ವಿಪ್ರತಿ ಮತದಾನಕ್ಕೆ ತಡೆ ಬೀಳಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಯಶವಂತಪುರದಲ್ಲಿ ಅತಿ ಹೆಚ್ಚು ಪ್ರಕರಣಗಳು!

ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾನದ ಹಕ್ಕು ಹೊಂದಿರುವವರ ಸಂಖ್ಯೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿರುವುದು ಕಂಡುಬಂದಿದೆ. ಇದರೊಂದಿಗೆ ಆರ್.ಆರ್. ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಕೆ.ಆರ್. ಪುರಂ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್ ನಗರ, ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಸೇರಿದಂತೆ ಹಲವು ಕ್ಷೇತ್ರಗಳಲ್ಲೂ ದ್ವಿಪ್ರತಿ ಮತದಾರರ ಹೆಸರುಗಳು ಪತ್ತೆಯಾಗಿವೆ ಎಂದು ಚುನಾವಣಾ ಆಯೋಗದ ಮೂಲಗಳು ಮಾಹಿತಿ ನೀಡಿವೆ.

ವಿಶೇಷ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಆಗಸ್ಟ್‌ನಲ್ಲಿ ‘ಕರಡು ಮತದಾರರ ಪಟ್ಟಿ’ ಪ್ರಕಟಿಸಲಾಗುವುದು. ತದನಂತರ ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ ಅವುಗಳನ್ನು ಪರಿಶೀಲಿಸಲಾಗುವುದು. ಜನವರಿ 2027 ರಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗವು ಯೋಜಿಸಿದೆ.

ಸಂಪಾದಕೀಯ ನಿಲುವು

ಇದರೊಂದಿಗೆ ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಸಹ ದೊಡ್ಡ ಪ್ರಮಾಣದಲ್ಲಿ ವಾಸಿಸುತ್ತಿರುವ ಮಾಹಿತಿ ಕಾಲಕಾಲಕ್ಕೆ ಮುನ್ನಲೆಗೆ ಬಂದಿದೆ. ರಾಜ್ಯದಲ್ಲಿ ನುಸುಳುಕೋರ ಪ್ರೇಮಿಗಳ ಸರಕಾರ ಇರುವುದರಿಂದ ಚುನಾವಣಾ ಆಯೋಗವು ಜಾಗರೂಕರಾಗಿ ನುಸುಳುಕೋರರನ್ನು ನಿಯಂತ್ರಿಸಲು ಪ್ರಯತ್ನಿಸುವುದು ಅಗತ್ಯವಾಗಿದೆ!