ಕೇರಳದಲ್ಲಿ ಛತ್ತೀಸ್‌ಗಢದ ಹಿಂದೂ ಕಾರ್ಮಿಕನನ್ನು ಬಾಂಗ್ಲಾದೇಶಿ ಎಂದು ತಿಳಿದು ಹತ್ಯೆ ! Chhattisgarh Hindu Labour Killed

ಪಾಲಕ್ಕಾಡ್ (ಕೇರಳ) – ಇಲ್ಲಿ ಛತ್ತೀಸ್‌ಗಢ ಮೂಲದ ವಲಸೆ ಕಾರ್ಮಿಕ ರಾಮ ನಾರಾಯಣ ಬಘೇಲ್ (31) ನನ್ನು ಡಿಸೆಂಬರ್ 17 ರಂದು ಒಂದು ಗುಂಪು ಬಾಂಗ್ಲಾದೇಶಿ ಎಂದು ತಪ್ಪಾಗಿ ಭಾವಿಸಿ ಥಳಿಸಿ ಹತ್ಯೆ ಮಾಡಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವನ ದೇಹದ ಮೇಲೆ 80ಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿವೆ. ರಾಮ ನಾರಾಯಣ ಬಘೇಲ್ ಛತ್ತೀಸ್‌ಗಢದ ಸಕ್ತಿ ಜಿಲ್ಲೆಯ ಕರ್ಹಿ ಗ್ರಾಮದ ನಿವಾಸಿಯಾಗಿದ್ದನು. ಅವನು ಒಂದು ವಾರದ ಹಿಂದೆ ಕೆಲಸಕ್ಕಾಗಿ ಪಾಲಕ್ಕಾಡ್ ಜಿಲ್ಲೆಗೆ ಬಂದಿದ್ದನು.

ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ಮುರಳಿ, ಪ್ರಸಾದ, ಅನು, ಬಿಪಿನ್ ಮತ್ತು ಆನಂದನ ಸೇರಿದ್ದಾರೆ. ಇವರೆಲ್ಲರೂ ಅಟ್ಟಪ್ಪಲ್ಲಂ ಗ್ರಾಮದ ನಿವಾಸಿಗಳು. ರಾಮ ನಾರಾಯಣ್‌ಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯರು ಅಟ್ಟಪ್ಪಲ್ಲಂ ಪ್ರದೇಶದಲ್ಲಿ ರಾಮ ನಾರಾಯಣ್‌ರನ್ನು ಕಳ್ಳತನದ ಶಂಕೆಯ ಮೇಲೆ ಹಿಡಿದು, ಅವರನ್ನು ಅಮಾನವೀಯವಾಗಿ ಥಳಿಸಿದ್ದಾರೆ. ಪೊಲೀಸರ ಪ್ರಕಾರ, ರಾಮ ನಾರಾಯಣ್ ಅಮಲಿನಲ್ಲಿದ್ದನು; ಆದರೆ ಅವನ ಬಳಿ ಕಳ್ಳತನದ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎನ್ನಲಾಗಿದೆ.