ರಾಜಸ್ಥಾನ: ಹಿಂದೂಗಳ ಮತಾಂತರ ಮಾಡುತ್ತಿದ್ದ ಜರ್ಮನ್ ದಂಪತಿ ಸೇರಿ ೬ ಕ್ರೈಸ್ತರ ಬಂಧನ !

  • ಬಾಡಿಗೆ ಮನೆಯಲ್ಲಿ ಚರ್ಚ್ ನಡೆಸುತ್ತಿದ್ದರು

  • ವಿಹಿಂಪ ಮತ್ತು ಬಜರಂಗ ದಳದ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕ ಬಳಿಕ ವಿಷಯ ಬಹಿರಂಗ

ಜೈಪುರ (ರಾಜಸ್ಥಾನ) – ರಾಜ್ಯದ ಗಡಿ ಭಾಗದ ಶ್ರೀಕರಣಪುರ ಪ್ರದೇಶದಲ್ಲಿ ಅಕ್ರಮ ಮತಾಂತರದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರದೇಶದಲ್ಲಿ ಶ್ರೀ ಗುರುನಾನಕ್ ದರ್ಬಾರ್ ಗುರುದ್ವಾರದ ಬಳಿ ಹೊಸದಾಗಿ ನಿರ್ಮಿಸಲಾದ ಬಾಡಿಗೆ ಮನೆಯೊಂದರಲ್ಲಿ ಗುಪ್ತವಾಗಿ ಚರ್ಚ್ ನಡೆಸಲಾಗುತ್ತಿತ್ತು. ಇಲ್ಲಿ ಬಡ ಹಿಂದೂಗಳಿಗೆ ಆರ್ಥಿಕ ಮತ್ತು ಇತರ ಆಮಿಷಗಳನ್ನು ತೋರಿಸಿ ಅವರನ್ನು ಕ್ರೈಸ್ತ ಪಂಥಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜರ್ಮನಿಯ ಕ್ರೈಸ್ತ ದಂಪತಿ ಸೇರಿದಂತೆ ೬ ಜನರನ್ನು ಬಂಧಿಸಿದ್ದಾರೆ.

೧. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರಿಗೆ ಈ ಮತಾಂತರದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಧಾವಿಸಿದರು. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಜರ್ಮನಿಯ ಸ್ವಾನ್ ಬಾಜ್ ಬೆಟ್ ಝೆಲ್ಲರ್ ಮತ್ತು ಆತನ ಪತ್ನಿ ಸ್ಯಾಂಡ್ರಾ ಸೇರಿದಂತೆ ಸಂತೋಷ್ ವರ್ಗೀಸ್, ಮ್ಯಾಥ್ಯೂ, ಬಲ್ಜಿಂದರ್ ಸಿಂಗ್ ಖೋಸಾ ಮತ್ತು ರಾಜೇಶ್ ಕಾಂಬೋಜ್ ಉರ್ಫ ಪೋಪಿ ಎಂಬವರನ್ನು ವಶಕ್ಕೆ ಪಡೆದರು.

೨. ಪೊಲೀಸರ ಮಾಹಿತಿಯ ಪ್ರಕಾರ, ಶ್ರೀಕರಣಪುರವು ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಸೂಕ್ಷ್ಮ ಪ್ರದೇಶವಾಗಿದೆ. ಜರ್ಮನ್ ದಂಪತಿಗಳು ಯಾವುದೇ ಅನುಮತಿ ಪಡೆಯದೆ ಈ ಪ್ರದೇಶಕ್ಕೆ ಪ್ರವೇಶಿಸಿ ಗುಪ್ತವಾಗಿ ಮತಾಂತರದ ಕಾರ್ಯವನ್ನು ಆರಂಭಿಸಿದ್ದರು. ಇದರಿಂದ ಆ ಪ್ರದೇಶದಲ್ಲಿ ಧಾರ್ಮಿಕ ಭಾವನೆಗಳು ಕೆರಳುವ ಸಾಧ್ಯತೆ ನಿರ್ಮಾಣವಾಗಿತ್ತು.

೩. ವಿಶ್ವ ಹಿಂದೂ ಪರಿಷತ್ ಅಕ್ರಮ ಮತಾಂತರದ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಈ ಆಂದೋಲನದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಶ್ಯಾಮ್ ಸಿಂಗ್ ರಾಜಪುರೋಹಿತ್, ಚಿರಾಗ್ ಅಶೋಕ್ ಜೋಶಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

೪. ಈ ಜರ್ಮನ್ ದಂಪತಿಗಳು ಜೋಗೇಂದ್ರ ಸಿಂಗ್ ಪೇಟಿವಾಲೆ ಎಂಬವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಈ ಮನೆಯಲ್ಲಿ ಜರ್ಮನ್ ದಂಪತಿಗಳು ಚರ್ಚ್ ಆರಂಭಿಸಿದ್ದರು. ದಂಪತಿಗಳ ಈ ಕೆಲಸದ ಬಗ್ಗೆ ಮನೆಯ ನೆರೆಯವರಿಗೂ ಸುಳಿವಿರಲಿಲ್ಲ. ಕೆಲವು ದಿನಗಳಿಂದ ಈ ಮನೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಹೆಚ್ಚಾಗಿತ್ತು.

೫. ರಾಜಸ್ಥಾನದ ಗಡಿ ಭಾಗದಲ್ಲಿ ಕಳೆದ ೩ ತಿಂಗಳಲ್ಲಿ ಕ್ರೈಸ್ತ ಮತಾಂತರದ ೪ ಪ್ರಕರಣಗಳು ಬೆಳಕಿಗೆ ಬಂದಿವೆ.

೬. ಕ್ರೈಸ್ತ ಮಿಷನರಿ ಸಂಸ್ಥೆಗಳು ಕೆಲವು ಸ್ವಯಂಸೇವಾ ಸಂಸ್ಥೆಗಳ ಮೂಲಕ ವಿದೇಶಿ ಹಣವನ್ನು ಬಳಸಿಕೊಂಡು ಬಡ ಹಿಂದೂಗಳನ್ನು ಮತಾಂತರ ಮಾಡುತ್ತಿರುವುದು ಕಂಡುಬಂದಿದೆ.

೭. ಭವಿಷ್ಯದಲ್ಲಿ ಮತಾಂತರ ಗೊಂಡವರನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಗಡಿ ಭಾಗಗಳನ್ನು ಬಳಸಲಾಗುತ್ತಿದೆ. ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಭಾರತಕ್ಕೆ ಬಂದು ಇಲ್ಲಿನ ಕಾನೂನಿನ ಭಯವಿಲ್ಲದೇ ವಿದೇಶಿ ಕ್ರೈಸ್ತರು ಹಿಂದೂಗಳ ಮತಾಂತರ ಮಾಡುತ್ತಿದ್ದರೆ, ಅವರಿಗೆ ಕಠಿಣ ಶಿಕ್ಷೆಯಾಗುವುದು ಅತ್ಯಾವಶ್ಯಕವಾಗಿದೆ.
  • ಎಲ್ಲಾ ವ್ಯವಸ್ಥೆಗಳು ಕೈಯಲ್ಲಿದ್ದರೂ ಪೊಲೀಸರಿಗೆ ಹಿಂದೂಗಳ ಮೇಲಿನ ಇಂತಹ ಆಘಾತಗಳ ಮಾಹಿತಿ ಯಾಕೆ ಸಿಗುವುದಿಲ್ಲ?