ಮಹಾರಾಷ್ಟ್ರದ ಸಾವಿರಾರು ದೇವಸ್ಥಾನಗಳ ಆಡಳಿತದಲ್ಲಿ ಬದಲಾವಣೆ ತರುವ ‘ಸಾರ್ವಜನಿಕ ಧರ್ಮದರ್ಶಿ ವ್ಯವಸ್ಥೆ ಸುಧಾರಣೆ’ ವಿಧೇಯಕ ಅಂಗೀಕಾರ! Maharashtra Public Trust Bill Passed

ವಿಧಾನಸಭೆಯಿಂದ…

ಮಹಾರಾಷ್ಟ್ರದ ಮಾಹಿತಿ ತಂತ್ರಜ್ಞಾನ ಸಚಿವ ಆಶಿಶ್ ಶೆಲಾರ್

ನಾಗ್ಪುರ, ಡಿಸೆಂಬರ್ ೧೧ (ವಾರ್ತೆ) – ಮಹಾರಾಷ್ಟ್ರದ ಸಾವಿರಾರು ದೇವಸ್ಥಾನಗಳ ಆಡಳಿತದಲ್ಲಿ ಪ್ರಮುಖ ಬದಲಾವಣೆ ತರುವ ‘ಸಾರ್ವಜನಿಕ ಧರ್ಮದರ್ಶಿ ವ್ಯವಸ್ಥೆ ಸುಧಾರಣೆ ವಿಧೇಯಕ’ವನ್ನು ಡಿಸೆಂಬರ್ ೧೧ ರಂದು ಎರಡೂ ಸದನಗಳಲ್ಲಿ ಅಂಗೀಕರಿಸಲಾಯಿತು. ಈ ವಿಧೇಯಕದಲ್ಲಿ ದೇವಸ್ಥಾನಗಳೊಂದಿಗೆ ಶತಮಾನಗಳಿಂದ ಸಂಪರ್ಕ ಹೊಂದಿರುವ ಗುರವ್, ಅರ್ಚಕರು ಮತ್ತು ಸೇವಾದಾರರು, ಹಾಗೂ ದೇವಸ್ಥಾನಗಳ ಭೂಮಿ ಮತ್ತು ಇತರ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ.

ಈ ಹಿಂದೆ ಅನೇಕ ದೇವಸ್ಥಾನಗಳ ಇನಾಮ್ ಭೂಮಿ ಮಾರಾಟದ ಪ್ರಕರಣಗಳಲ್ಲಿ ಧರ್ಮದರ್ಶಿ ಮಂಡಳಿ ಮತ್ತು ವಹಿವಾಟುದಾರರು, ಗುರವ್, ಅರ್ಚಕರು ಇವರ ನಡುವೆ ವಿವಾದಗಳು ಉಂಟಾಗಿವೆ. ಹೊಸ ತಿದ್ದುಪಡಿಯ ಮೂಲಕ ಈ ಭೂಮಿಗಳನ್ನು ‘ದೇವಸ್ಥಾನ ಇನಾಮ್’ ಎಂದು ನೋಂದಾಯಿಸಲಾಗುತ್ತದೆ ಮತ್ತು ಅವುಗಳನ್ನು ಮಾರಾಟ ಮಾಡುವಾಗ ಧರ್ಮದಾಯ ಆಯುಕ್ತರು ಮತ್ತು ರಾಜ್ಯ ಸರಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯಕ ಎಂದು ಸ್ಪಷ್ಟಪಡಿಸಲಾಗಿದೆ. ವಿಧೇಯಕದಲ್ಲಿ ಅಖಂಡ ಅಥವಾ ಖಾಯಂ ಧರ್ಮದರ್ಶಿ ಮತ್ತು ಸಾವಧಿ (ನಿಶ್ಚಿತ ಅವಧಿಯ) ಧರ್ಮದರ್ಶಿಗಳ ನೇಮಕಾತಿ ವಿಧಾನ ಮತ್ತು ಅಧಿಕಾರಾವಧಿಗೆ ಸಂಬಂಧಿಸಿದಂತೆ ಸಹ ಸ್ಪಷ್ಟವಾದ ನಿಬಂಧನೆಗಳಿವೆ.