ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೋಟಿಸ್ ! Kerala CM ED Notice

೨೦೦೦ ಕೋಟಿ ರೂಪಾಯಿ ‘ಮಸಾಲಾ ಬಾಂಡ್’ ಪ್ರಕರಣ; ‘ಇಡಿ’ಯಿಂದ ಕ್ರಮ

(ಇ.ಡಿ. ಎಂದರೆ ಜಾರಿ ನಿರ್ದೇಶನಾಲಯ)

ತಿರುವನಂತಪುರಂ (ಕೇರಳ) – ‘ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ’ಯ  ‘ಮಸಾಲಾ ಬಾಂಡ್’ ವ್ಯವಹಾರಕ್ಕೆ ಸಂಬಂಧಿಸಿದ ‘ಮನಿ ಲಾಂಡರಿಂಗ್’ (ಕಪ್ಪು ಹಣವನ್ನು ಬಿಳುಪುಗೊಳಿಸುವ ಪ್ರಕ್ರಿಯೆ) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (‘ಇ.ಡಿ.’) ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ‘ಕಾರಣ ಕೇಳಿ’  ನೋಟಿಸ್ ಜಾರಿಗೊಳಿಸಿದೆ. ೪೬೮ ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಸಂಬಂಧಿಸಿದ ಈ ನೋಟಿಸ್ ಅನ್ನು ಮುಖ್ಯಮಂತ್ರಿ ವಿಜಯನ್ ಅವರೊಂದಿಗೆ ‘KIIFB’ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಅಬ್ರಹಾಂ ಮತ್ತು ಉಪಾಧ್ಯಕ್ಷ ಹಾಗೂ ಮಾಜಿ ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಅವರಿಗೂ ಜಾರಿಗೊಳಿಸಲಾಗಿದೆ.

೧. ರಾಜ್ಯದ ಪ್ರಗತಿಗಾಗಿ ೫೦,೦೦೦  ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಒಂದು ದೊಡ್ಡ ಯೋಜನೆಯ ಭಾಗವಾಗಿ, ಈ ಹಣವನ್ನು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗಾಗಿ ಉದ್ದೇಶಿಸಲಾಗಿತ್ತು.

೨. ೪೬೬ ಕೋಟಿ ರೂಪಾಯಿಗಳನ್ನು ಭೂಮಿ ಸ್ವಾಧೀನಕ್ಕೆ ಬಳಸಲಾಗಿದೆ ಎಂದು ‘ಇ.ಡಿ.’ ಹೇಳಿದೆ. ಇದು ‘ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ’  ಮತ್ತು ‘ಭಾರತೀಯ ರಿಸರ್ವ್ ಬ್ಯಾಂಕ್’  ನಿಯಮಗಳಿಗೆ ವಿರುದ್ಧವಾಗಿದೆ.

೩. ಬಾಂಡ್‌ಗಳ ಮೊತ್ತಕ್ಕೆ ಸಂಬಂಧಿಸಿದ ನಿಧಿ ವರ್ಗಾವಣೆ ಮತ್ತು ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ಅಕ್ರಮಗಳ ಆರೋಪಗಳಿವೆ ಎಂದು ‘ಇ.ಡಿ.’ ತಿಳಿಸಿದೆ.

೪. ‘ಇ.ಡಿ.’ಯು ೨೦೨೧ ರಲ್ಲಿ ‘ಮಸಾಲಾ ಬಾಂಡ್’ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು ಮತ್ತು ೨೦೨೪ ರಲ್ಲಿ ಐಸಾಕ್ ಅವರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿತ್ತು. ವಿಚಿತ್ರವೆಂದರೆ, ಐಸಾಕ್ ಅವರು ಎರಡು ಸಮನ್ಸ್‌ಗಳನ್ನು ನಿರ್ಲಕ್ಷಿಸಿದ್ದರು. ಈ ಬಗ್ಗೆ ‘ಇ.ಡಿ.’ ಆಕ್ಷೇಪ ವ್ಯಕ್ತಪಡಿಸಿತ್ತು.

ವಿರೋಧ ಪಕ್ಷಗಳಿಂದ ಟೀಕೆ ! 

ರಾಜ್ಯದ ವಿರೋಧ ಪಕ್ಷಗಳು ಎಡ ಪ್ರಜಾಸತ್ತಾತ್ಮಕ ರಂಗದ ಸರಕಾರವು  ಹಣಕಾಸು ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಹೇಳಿವೆ. ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಮುಖ್ಯಮಂತ್ರಿ ವಿಜಯನ್ ಮತ್ತು ‘KIIFB’ ಮುಖ್ಯಸ್ಥರ ಮೇಲೆ ವ್ಯಾಪಕ ಆರ್ಥಿಕ ಅಕ್ರಮಗಳ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಶಾಸಕ ವಿ.ಡಿ. ಸತೀಶನ್ ಕೂಡ ‘KIIFB’ ಸಾಲ ಪಡೆಯುವ ವಿಧಾನಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಏನಿದು ‘ಮಸಾಲಾ ಬಾಂಡ್’ ಪ್ರಕರಣ ?

‘ಮಸಾಲಾ ಬಾಂಡ್’ ಎಂದರೆ ಭಾರತದ ಹೊರಗೆ ಭಾರತೀಯ ರೂಪಾಯಿಗಳಲ್ಲಿ ಸಂಗ್ರಹಿಸಲಾದ ಸಾಲ. (ಬಾಂಡ್ ಎಂದರೆ ಸಾಲದ ಲಿಖಿತ ರಸೀದಿ ಅಥವಾ ಸೆಕ್ಯುರಿಟಿಗಳ ಮೂಲಕ ಸಂಗ್ರಹಿಸಿದ ಸಾಲ.) ಮಸಾಲಾ ಬಾಂಡ್‌ಗೆ ಮಸಾಲೆಗಳೊಂದಿಗೆ ಯಾವುದೇ ಸಂಬಂಧವಿಲ್ಲ, ಆದರೆ ಅದಕ್ಕೆ ಒಂದು ಭಾರತೀಯ ಹೆಸರನ್ನು ನೀಡಲಾಗಿದೆ. ಇದರಲ್ಲಿ ಹಣ ಹೂಡುವವರು ವಿದೇಶಿ ಹೂಡಿಕೆದಾರರಾಗಿರುತ್ತಾರೆ; ಆದರೆ ಹಣವನ್ನು ರೂಪಾಯಿಗಳಲ್ಲೇ ಮರುಪಾವತಿ ಮಾಡಬೇಕಾಗುತ್ತದೆ. ಕೇರಳದ ‘KIIFB’ ಈ ಬಾಂಡ್‌ಗಳನ್ನು ವಿತರಿಸುವಾಗ ಸಾಲದ ಮಿತಿ ಮತ್ತು ಅನುಮತಿಯ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣವನ್ನು ‘ಮಸಾಲಾ ಬಾಂಡ್’ ಪ್ರಕರಣ ಎಂದು ಕರೆಯಲಾಗುತ್ತದೆ.

ಸಂಪಾದಕೀಯ ನಿಲುವು

ಸಾಮ್ಯವಾದಿ ಸರಕಾರಗಳು ಭ್ರಷ್ಟಾಚಾರದ ಕೃತ್ಯಗಳಲ್ಲಿ ಯಾವಾಗಲೂ ಮುಂದಿರುತ್ತವೆ ಎಂಬುದನ್ನು ಸೂಚಿಸುವ ಘಟನೆ! ಇಂತಹ ಸಮಾಜಘಾತಕ ಸರಕಾರವನ್ನು ವಿಸರ್ಜಿಸಿ, ಅಲ್ಲಿ ರಾಷ್ಟ್ರಪತಿ ಆಡಳಿತವನ್ನು  ಜಾರಿಗೊಳಿಸುವುದೇ ದೇಶಹಿತಕ್ಕೆ ಸೂಕ್ತವಾಗಿದೆ !