‘ಗೋವಾ ಕ್ರಾನಿಕಲ್’ ವೆಬ್‌ಸೈಟ್‌ನ ಪ್ರಧಾನ ಸಂಪಾದಕ ಸಾವಿಯೊ ರಾಡ್ರಿಗಸ್ ಅವರಿಂದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಲ್ಲಿ ಬೇಡಿಕೆ Goa Museum Demand

ಗೋವಾದಲ್ಲಿ ಪೋರ್ಚುಗೀಸ್ ವಸಾಹತುಶಾಹಿಯ ನಿಜವಾದ ಇತಿಹಾಸವನ್ನು ಪ್ರಸ್ತುತಪಡಿಸಲು ವಸ್ತುಸಂಗ್ರಹಾಲಯ ಸ್ಥಾಪಿಸಿ!

ಪಣಜಿ, ಡಿಸೆಂಬರ್ 2 (ವಾರ್ತೆ) – ಗೋವಾದಲ್ಲಿ ಪೋರ್ಚುಗೀಸ್ ವಸಾಹತುಶಾಹಿಯ ನಿಜವಾದ ಇತಿಹಾಸವನ್ನು ಪ್ರಸ್ತುತಪಡಿಸಲು ಒಂದು ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ‘ಗೋವಾ ಕ್ರಾನಿಕಲ್ ಡಾಟ್ ಕಾಮ್’ ನ ಪ್ರಧಾನ ಸಂಪಾದಕ ಸಾವಿಯೊ ರಾಡ್ರಿಗಸ್ ಅವರು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ಮುಂದೆ ಮಂಡಿಸಿದ್ದಾರೆ.

ಈ ಕುರಿತು ಮಾತನಾಡಿದ ಪ್ರಧಾನ ಸಂಪಾದಕ ಸಾವಿಯೊ ರಾಡ್ರಿಗಸ್, “ಪೋರ್ಚುಗೀಸ್ ವಸಾಹತುಶಾಹಿಯು ಗೋವಾದ ಇತಿಹಾಸವಾಗಿದೆ ಮತ್ತು ಇದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಇತಿಹಾಸದ ಈ ಸತ್ಯವನ್ನು ಒಪ್ಪಿಕೊಂಡರೆ ಮಾತ್ರ ನಾವು ಉಜ್ವಲ ಭವಿಷ್ಯವನ್ನು ನಿರ್ಮಿಸಬಹುದು. ಹಾಗೆಯೇ, ನಮ್ಮ ಪೂರ್ವಜರು ಮಾಡಿದ ತ್ಯಾಗದ ಬಗ್ಗೆ ಭವಿಷ್ಯದ ಪೀಳಿಗೆಗೆ ತಿಳಿಯುವುದು ಅತ್ಯಗತ್ಯವಾಗಿದೆ. ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು, ‘ನಾನು ಪ್ರಸ್ತಾವನೆಯನ್ನು ಅಧ್ಯಯನ ಮಾಡಿ, ಅದರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ, ನಂತರ ಅಗತ್ಯ ಕ್ರಮ ಕೈಗೊಳ್ಳುತ್ತೇನೆ,’ ಎಂದು ನನಗೆ ಭರವಸೆ ನೀಡಿದ್ದಾರೆ,” ಎಂದರು.

ಪ್ರಧಾನ ಸಂಪಾದಕ ಸಾವಿಯೊ ರಾಡ್ರಿಗಸ್ ಅವರು ಮುಖ್ಯಮಂತ್ರಿಗೆ ಕಳುಹಿಸಿದ ಪ್ರಸ್ತಾವನೆಯಲ್ಲಿ ಈ ಕೆಳಗಿನ ಅಂಶಗಳನ್ನು ಮಂಡಿಸಿದ್ದಾರೆ. ಈ ಉಪಕ್ರಮದ ಪರಿಕಲ್ಪನೆ, ಸಂಶೋಧನೆ, ದಾಖಲಾತಿ ಮತ್ತು ಜಾಗೃತಿ ಪ್ರಕ್ರಿಯೆಯಲ್ಲಿ ಸರಕಾರಕ್ಕೆ ಸಹಕರಿಸಲು ತಾವು ಸಿದ್ಧರಿರುವುದಾಗಿ ರಾಡ್ರಿಗಸ್ ಹೇಳಿದ್ದಾರೆ.

ವಸ್ತುಸಂಗ್ರಹಾಲಯದ ಅಗತ್ಯ ಏಕೆ ಇದೆ?

ಪೋರ್ಚುಗೀಸ್ ಆಳ್ವಿಕೆಯ ಸಮಯದಲ್ಲಿ ಗೋವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗಳಾದವು. ಪೋರ್ಚುಗೀಸ್ ಆಳ್ವಿಕೆಯಲ್ಲಿ, ಪೋರ್ಚುಗೀಸರು ಗೋವಾ ಜನರಿಗೆ ಧಾರ್ಮಿಕ ಕಿರುಕುಳ ಮಾಡಿದರು, ಗೋವಾ ಜನರ ಸಂಪ್ರದಾಯಗಳನ್ನು ದಮನ ಮಾಡಿದರು, ಗೋವಾ ಜನರ ಸಾಂಸ್ಕೃತಿಕ ಮರೆವಿಗೆ ಕಾರಣರಾದರು ಮತ್ತು ಗೋವಾ ಜನರ ಭೂಮಿಯನ್ನು ವಶಪಡಿಸಿಕೊಂಡರು. ಗೋವಾ ಜನರು ಪೋರ್ಚುಗೀಸರನ್ನು ಪ್ರತಿರೋಧಿಸಿದರು; ಆದರೆ ಈ ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಎಲ್ಲರ ಮುಂದೆ ತಂದಿಲ್ಲ. ಇದಕ್ಕಾಗಿ, ಐತಿಹಾಸಿಕ ಸತ್ಯವನ್ನು ಮುನ್ನೆಲೆಗೆ ತರುವ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಉಪಯುಕ್ತವಾಗುವಂತಹ ಒಂದು ವಸ್ತುಸಂಗ್ರಹಾಲಯದ ಅಗತ್ಯವಿದೆ.

ವಸ್ತುಸಂಗ್ರಹಾಲಯ ನಿರ್ಮಾಣದ ಪ್ರಕ್ರಿಯೆ ಹೀಗಿರಲಿದೆ!

1. ಪೋರ್ಚುಗೀಸ್ ವಸಾಹತುಶಾಹಿಯ ಸತ್ಯಾಂಶ ಆಧಾರಿತ ದಾಖಲಾತಿ ಮಾಡುವುದು.

2. ಐತಿಹಾಸಿಕ ಪುರಾವೆಗಳು, ಸಾಹಿತ್ಯ, ಮೌಖಿಕ ಇತಿಹಾಸ ಮತ್ತು ಸ್ಥಳೀಯ ಸಾಕ್ಷಿಗಳ ಅನುಭವಗಳನ್ನು ದಾಖಲಿಸುವುದು.

3. ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ಗೋವಾ ಜನರು ಪೋರ್ಚುಗೀಸರ ವಿರುದ್ಧ ಮಾಡಿದ ಪ್ರತಿರೋಧವನ್ನು ಎತ್ತಿ ತೋರಿಸುವುದು.

4. ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗಾಗಿ ಒಂದು ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರವನ್ನು ನಿರ್ಮಿಸುವುದು.

5. ಮಲ್ಟಿಮೀಡಿಯಾ, ಕಿರುಚಿತ್ರಗಳು ಮುಂತಾದ ಆಧುನಿಕ ತಂತ್ರಜ್ಞಾನಗಳ ಮೂಲಕ ಇತಿಹಾಸವನ್ನು ಜೀವಂತವಾಗಿ ಪ್ರಸ್ತುತಪಡಿಸುವುದು.

6. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿದ್ವಾಂಸರು ಈ ವಿಷಯದ ಕುರಿತು ಒಟ್ಟಾಗಿ ಕೆಲಸ ಮಾಡಲು ಒಂದು ವೇದಿಕೆಯನ್ನು ಒದಗಿಸುವುದು.

ಆಧುನಿಕ ತಂತ್ರಜ್ಞಾನದ ಸಹಾಯದಿಂದ ಗೋವಾದ ಇತಿಹಾಸದ ಒಂದು ಜಾಗತಿಕ ಮಟ್ಟದ ಡಿಜಿಟಲ್ ಸಂಗ್ರಹವನ್ನು ನಿರ್ಮಿಸಬಹುದು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಮೊದಲಿಗೆ ಇತಿಹಾಸಕಾರರು, ಸಂಶೋಧಕರು, ಸಾಂಸ್ಕೃತಿಕ ತಜ್ಞರು, ಗೋವಾ ನಾಗರಿಕರು, ಮತ್ತು ರಾಜ್ಯ ದಾಖಲೆಗಳು ಹಾಗೂ ಪುರಾತತ್ವ ನಿರ್ದೇಶನಾಲಯದವರ ಸಮಿತಿಯನ್ನು ರಚಿಸಬೇಕು. ವಸ್ತುಸಂಗ್ರಹಾಲಯದ ಸ್ಥಾಪನೆಗಾಗಿ ಗೋವಾ ರಾಜ್ಯ ವಸ್ತುಸಂಗ್ರಹಾಲಯ, ಭಾರತೀಯ ಐತಿಹಾಸಿಕ ಸಂಶೋಧನಾ ಸಂಸ್ಥೆ ಮತ್ತು ಇತರ ಸಾಂಸ್ಕೃತಿಕ ಸಂಸ್ಥೆಗಳ ಸಹಕಾರ ಪಡೆಯಬೇಕು.