ಭಾರತೀಯ ಮಹಿಳೆಯೊಂದಿಗೆ ದುರ್ವರ್ತನೆ ಮಾಡಿದ್ದನ್ನು ನಿರಾಕರಿಸಿದ ಚೀನಾ China Detains Indian Women

ಭಾರತೀಯ ಮಹಿಳೆಯನ್ನು ಚೀನಾದ ಶಾಂಗೈ ವಿಮಾನ ನಿಲ್ದಾಣದಲ್ಲಿ 18 ಗಂಟೆಗಳ ಕಾಲ ತಡೆದ ಪ್ರಕರಣ

ಭಾರತೀಯ ಮಹಿಳೆ ಪೆಮಾ ವಾಂಗ್ ಥಾಂಗ್ಡಾಕ್

ಬೀಜಿಂಗ (ಚೀನಾ) – ಅರುಣಾಚಲ ಪ್ರದೇಶದಲ್ಲಿ ಜನಿಸಿದ ಭಾರತೀಯ ಮಹಿಳೆ ಪೆಮಾ ವಾಂಗ್ ಥೊಂಗಡೊಕ್ ಅವರೊಂದಿಗೆ ಶಾಂಗೈ ವಿಮಾನ ನಿಲ್ದಾಣದಲ್ಲಿ ದುರ್ವರ್ತನೆ ಮಾಡಿರುವ ಎಲ್ಲಾ ಆರೋಪಗಳನ್ನು ಚೀನಾ ತಳ್ಳಿಹಾಕಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ಅವರು ಈ ಬಗ್ಗೆ ಮಾತನಾಡಿ, ಭಾರತೀಯ ಮಹಿಳೆಯೊಂದಿಗೆ ಯಾವುದೇ ರೀತಿಯ ಬಲವಂತ, ವಶಕ್ಕೆ ತೆಗೆದುಕೊಳ್ಳುವಿಕೆ ಅಥವಾ ಕಿರುಕುಳ ನೀಡುವಂತಹ ವರ್ತನೆ ನಡೆದಿಲ್ಲ. ನಾವು ಮಹಿಳೆಗೆ ಆರಾಮ, ನೀರು ಮತ್ತು ಊಟದ ಸೌಲಭ್ಯವನ್ನೂ ಒದಗಿಸಿದ್ದೇವೆ ಎಂದು ಹೇಳಿದ್ದಾರೆ. (ಹಾಗಿದ್ದರೆ, ಭಾರತೀಯ ಮಹಿಳೆಯನ್ನು ವಿಮಾನ ನಿಲ್ದಾಣದಲ್ಲಿ 18 ಗಂಟೆಗಳ ಕಾಲ ಏಕೆ ತಡೆಹಿಡಿಯಲಾಯಿತು ಎಂದು ಚೀನಾವನ್ನು ಪ್ರಶ್ನಿಸಬೇಕು! – ಸಂಪಾದಕರು)

ಚೀನಾದ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು, ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಚೀನಾ ಎಷ್ಟೇ ನಿರಾಕರಿಸಿದರೂ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಪೆಮಾ ಅವರ ಬಂಧನದ ವಿಷಯವನ್ನು ಚೀನಾದ ಮುಂದೆ ಕಠಿಣ ಶಬ್ದಗಳಲ್ಲಿ ಪ್ರಸ್ತಾಪಿಸಿದ್ದೇವೆ. ಮಹಿಳೆಯನ್ನು ಏಕೆ ತಡೆಹಿಡಿಯಲಾಯಿತು ಎಂದು ಚೀನೀ ಅಧಿಕಾರಿಗಳಿಗೆ ಈಗಲೂ ಹೇಳಲು ಸಾಧ್ಯವಾಗಿಲ್ಲ. ಚೀನಾ ಸರ್ಕಾರದ ನಿಯಮಗಳ ಪ್ರಕಾರ 24 ಗಂಟೆಗಳವರೆಗೆ ವೀಸಾ ಇಲ್ಲದೆ (ವೀಸಾ ಇಲ್ಲದೇ ಒಂದು ದೇಶದಲ್ಲಿ ಇರಲು)  ‘ಟ್ರಾನ್ಸಿಟ್’ಗೆ ಅನುಮತಿ ನೀಡಬೇಕು. (‘ಟ್ರಾನ್ಸಿಟ್’ ಎಂದರೆ 24 ಗಂಟೆಗಳವರೆಗೆ ವೀಸಾ ಇಲ್ಲದೆ ಒಂದು ದೇಶದ ವಿಮಾನ ನಿಲ್ದಾಣದಲ್ಲಿ ಇರಲು ನೀಡುವ ಅನುಮತಿ. ಸಾಮಾನ್ಯವಾಗಿ, ಮೂಲ ಸ್ಥಳದಿಂದ ನಿರ್ದಿಷ್ಟ ದೇಶಕ್ಕೆ ಹೋಗುವಾಗ ಮಧ್ಯದ ಒಂದು ದೇಶದಲ್ಲಿ ವಿಮಾನ ಬದಲಾಯಿಸಲು ಇಳಿಯಬೇಕಾಗುತ್ತದೆ. ಈ ಸಮಯವೇ ‘ಟ್ರಾನ್ಸಿಟ್’.)

ಸಂಕ್ಷಿಪ್ತವಾಗಿ ಪ್ರಕರಣವನ್ನು ತಿಳಿದುಕೊಳ್ಳಿ

ಬ್ರಿಟನ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಮಹಿಳೆ ಪೆಮಾ ಅವರು ನವೆಂಬರ್ 21 ರಂದು ಜಪಾನ್ ಗೆ ಹೋಗುತ್ತಿದ್ದಾಗ, ಅವರ ವಿಮಾನವು ಚೀನಾದ ಶಾಂಗೈನಲ್ಲಿ 3 ಗಂಟೆಗಳ ಕಾಲ ನಿಂತಿತ್ತು. ಆ ಸಮಯದಲ್ಲಿ, ಚೀನೀ ಪಾಸ್ಪೋರ್ಟ್ ಅಧಿಕಾರಿಗಳು ಪೆಮಾ ಅವರ ಜನ್ಮಸ್ಥಳ ಅರುಣಾಚಲ ಪ್ರದೇಶ ಎಂದು ನೋಡಿ, ಅವರ ಭಾರತೀಯ ಪಾಸ್ಪೋರ್ಟ್ ಅನ್ನು ಅನಧಿಕೃತ ಎಂದು ಪರಿಗಣಿಸಿ ಅದನ್ನು ವಶಪಡಿಸಿಕೊಂಡರು. `ನನ್ನ ಬಳಿ ಪ್ರಮಾಣೀಕರಿಸಿದ ವೀಸಾ ಇದ್ದರೂ, ನನ್ನನ್ನು ಜಪಾನ್ ವಿಮಾನದಲ್ಲಿ ಕುಳಿತುಕೊಳ್ಳಲು ಬಿಡಲಿಲ್ಲ. ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಅನೇಕ ಪಾಸ್ಪೋರ್ಟ್ ಅಧಿಕಾರಿಗಳು ಮತ್ತು ‘ಚೀನಾ ಈಸ್ಟರ್ನ್ ಏರ್ಲೈನ್ಸ್’ನ ಸಿಬ್ಬಂದಿ ನನ್ನನ್ನು ಗೇಲಿ ಮಾಡಿದರು. 18 ಗಂಟೆಗಳ ಕಾಲ ನನಗೆ ಬಹಳ ತೊಂದರೆಯಾಯಿತು’ ಎಂದು ಪೆಮಾ ಆರೋಪಿಸಿದರು. ಅಂತಿಮವಾಗಿ ಪೆಮಾ ಅವರು ಬ್ರಿಟನ್ ನಲ್ಲಿರುವ ಸ್ನೇಹಿತರ ಮೂಲಕ ಶಾಂಗೈನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು. ನಂತರ ಭಾರತೀಯ ಅಧಿಕಾರಿಗಳು ಅವರಿಗೆ ರಾತ್ರಿಯ ಒಂದು ವಿಮಾನದಲ್ಲಿ ಕುಳಿತುಕೊಳ್ಳಲು ಸಹಾಯ ಮಾಡಿ ಶಾಂಗೈನಿಂದ ಹೊರಬರಲು ನೆರವಾದರು.

ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್’ ಎಂದು ಚೀನಾ ಪರಿಗಣಿಸಿ ಆಧಾರರಹಿತ ಹಕ್ಕನ್ನು ಮಂಡಿಸುತ್ತಾ ಬಂದಿದೆ, ಆದರೆ ಭಾರತವು ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ರಾಜ್ಯವಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಿದೆ.