ಭಾಜಪ ಮತ್ತು ಜನತಾ ದಳ (ಸಂಯುಕ್ತ) ಮೈತ್ರಿಕೂಟಕ್ಕೆ ಭರ್ಜರಿ ಜಯ : Bihar Election Results 2025

ಬಿಹಾರ ವಿಧಾನಸಭೆ ಚುನಾವಣೆ

ಪಾಟಲಿಪುತ್ರ (ಬಿಹಾರ) – ಬಿಹಾರದಲ್ಲಿ ನಡೆದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಭಾಜಪ ಮತ್ತು ಮುಖ್ಯಮಂತ್ರಿ ನಿತೀಶ ಕುಮಾರ ಅವರ ಜನತಾ ದಳ (ಸಂಯುಕ್ತ) ಪಕ್ಷದ ಮೈತ್ರಿಕೂಟಕ್ಕೆ ಭಾರಿ ದೊಡ್ಡ ಜಯ ಲಭಿಸಿದೆ. ಇದರಿಂದಾಗಿ ಮತ್ತೊಮ್ಮೆ ಈ ಮೈತ್ರಿಕೂಟದ ಸರಕಾರವು ರಚನೆಯಾಗಲಿದೆ. ಭಾಜಪ ಅತ್ಯಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಅದರ ನಂತರ ಜನತಾ ದಳ (ಸಂಯುಕ್ತ) ಪಕ್ಷವು ಮುನ್ನಡೆಯಲ್ಲಿದೆ. ಆದ್ದರಿಂದ, ಮುಖ್ಯಮಂತ್ರಿ ಸ್ಥಾನದಲ್ಲಿ ಮತ್ತೆ ನಿತೀಶ ಕುಮಾರ ಇರುತ್ತಾರೆಯೇ ಅಥವಾ ಭಾಜಪ ಮುಖ್ಯಮಂತ್ರಿ ಇರುತ್ತಾರೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಎರಡೂ ಪಕ್ಷಗಳಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ‘ಚುನಾವಣೆಗೆ ಮುನ್ನವೇ ನಿತೀಶ ಕುಮಾರ ಅವರೇ ಮುಖ್ಯಮಂತ್ರಿ ಸ್ಥಾನದ ಮುಖವಾಗಿದ್ದಾರೆ’ ಎಂದು ಘೋಷಿಸಲಾಗಿತ್ತು. ಹಾಗೆಯೇ ಕೇಂದ್ರದಲ್ಲಿನ ಮೋದಿ ಸರಕಾರಕ್ಕೆ ನಿತೀಶ ಕುಮಾರ ಅವರ ಪಕ್ಷದ ಬೆಂಬಲ ಸಿಕ್ಕಿರುವುದರಿಂದ ಅದು ಉಳಿದುಕೊಂಡಿದೆ. ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ ಭಾಜಪಕ್ಕೆ ಹೆಚ್ಚು ಸ್ಥಾನಗಳು ದೊರೆತರೂ, ‘ನಿತೀಶ ಕುಮಾರ ಅವರೇ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಹೇಳಲಾಗುತ್ತಿದೆ.

243 ಸ್ಥಾನಗಳಿಗಾಗಿ ನಡೆದ ಈ ಚುನಾವಣೆಯಲ್ಲಿ ಪ್ರಶಾಂತ ಕಿಶೋರ ಅವರ ಹೊಸದಾಗಿ ಸ್ಥಾಪಿತವಾದ ಜನಸುರಾಜ್ ಪಕ್ಷವು ಖಾತೆ ತೆರೆಯಲು ಸಹ ಸಾಧ್ಯವಾಗಿಲ್ಲ, ಕಾಂಗ್ರೆಸ್ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಚಿರಾಗ ಪಾಸ್ವಾನ ಅವರ ಲೋಕಜನಶಕ್ತಿ ಪಕ್ಷವು 19 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಈ ಪಕ್ಷವು ಭಾಜಪ-ಜನತಾ ದಳ (ಸಂಯುಕ್ತ) ಮೈತ್ರಿಕೂಟಕ್ಕೆ ಬೆಂಬಲ ನೀಡಿದೆ. ಸಂಸದ ಅಸಾದುದ್ದೀನ ಓವೈಸಿ ಅವರ ಎ.ಐ.ಎಮ್.ಐ.ಎಮ್. ಪಕ್ಷ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ – ಅಖಿಲ ಭಾರತ ಮುಸ್ಲಿಂ ಏಕತಾ ಸಂಘ) 6 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಳೆದ ಬಾರಿಯೂ ಈ ಪಕ್ಷಕ್ಕೆ ಇಷ್ಟೇ ಸ್ಥಾನಗಳು ಲಭಿಸಿದ್ದವು. ಅದರ ನಂತರ ಈ ಪೈಕಿ 5 ಜನ ರಾಷ್ಟ್ರೀಯ ಜನತಾ ದಳಕ್ಕೆ ಸೇರ್ಪಡೆಯಾಗಿದ್ದರು.