ಫರಿದಾಬಾದ್‌ನಲ್ಲಿ ‘ಲವ್ ಜಿಹಾದ್’ ವಿರುದ್ಧ ಕ್ರಮಕ್ಕಾಗಿ ಶಿಕ್ಷಣ ಇಲಾಖೆ ಸುತ್ತೋಲೆ Love Jihad

ರಾಜಕೀಯ ವಿರೋಧದ ನಂತರ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಿತು!

ಫರಿದಾಬಾದ (ಹರಿಯಾಣ) – ಇಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಅಂಶು ಸಿಂಗ್ಲಾ ಅವರು ಅಕ್ಟೋಬರ್ 29 ರಂದು ಎಲ್ಲ ಶಾಲೆಗಳಿಗೆ ಒಂದು ಸುತ್ತೋಲೆಯನ್ನು ಕಳುಹಿಸಿ, ಅದರಲ್ಲಿ ಕೆಲವು ವಿದ್ಯಾರ್ಥಿಗಳ ಕುರಿತು ಜಿಲ್ಲಾ ಶಿಕ್ಷಣ ಕಚೇರಿಗೆ ದೂರುಗಳು ಬಂದಿವೆ. ಅವರು ತರಗತಿಗಳನ್ನು ಬಿಟ್ಟು ಉದ್ಯಾನವನಗಳಲ್ಲಿ ಅಲೆದಾಡುತ್ತಾರೆ, ಅಶ್ಲೀಲ ಕೃತ್ಯಗಳಲ್ಲಿ ತೊಡಗುತ್ತಾರೆ, ‘ಲವ್ ಜಿಹಾದ್’ನಂತಹ ಕೃತ್ಯಗಳಲ್ಲಿ ಭಾಗವಹಿಸುತ್ತಾರೆ ಮತ್ತು ಸಾರ್ವಜನಿಕ ವಾತಾವರಣವನ್ನು ಹಾಳುಮಾಡುತ್ತಾರೆ ಎಂದು ಹೇಳಲಾಗಿತ್ತು. ಇದರೊಂದಿಗೆ, ವಿದ್ಯಾರ್ಥಿಗಳ ತರಗತಿಯ ಹೊರಗಿನ ವರ್ತನೆಯ ಮೇಲೆ ನಿಗಾ ಇಡಲು ಸೂಚಿಸಲಾಗಿತ್ತು ಮತ್ತು ಇತರ ಸೂಚನೆಗಳ ಜೊತೆಗೆ, ‘ಲವ್ ಜಿಹಾದ್’ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿತ್ತು. ಇದರ ನಂತರ, ಈ ಸುತ್ತೋಲೆಗೆ ಟೀಕೆಗಳು ವ್ಯಕ್ತವಾದ ನಂತರ ಹಿಂಪಡೆಯಲಾಯಿತು. ಮುಖ್ಯಮಂತ್ರಿ ಕಚೇರಿಗೆ ಈ ಸಂಬಂಧ ದೂರು ಬಂದ ನಂತರ ಸಿಂಗ್ಲಾ ಅವರು ಈ ರೀತಿಯ ಸುತ್ತೋಲೆ ಹೊರಡಿಸಿದ್ದರು.

ಪೋಷಕರ ಗುಂಪುಗಳನ್ನು ರಚಿಸಲು ನಿರ್ದೇಶನ ನೀಡಲಾಗಿತ್ತು!

ಎಲ್ಲಾ ಶಾಲೆಗಳಿಗೆ ಪೋಷಕರ ‘ವಾಟ್ಸ ಅಪ್’ ಗುಂಪುಗಳನ್ನು ರಚಿಸಲು ಮತ್ತು ಅವರ ಮಕ್ಕಳ ಹಾಜರಾತಿ ಕುರಿತು ಮಾಹಿತಿ ನೀಡಲು ಆದೇಶಿಸಲಾಗಿತ್ತು. ಇಂತಹ ದೂರುಗಳು ಮತ್ತೆ ಬಂದರೆ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

ಮುಖ್ಯಮಂತ್ರಿ ಕಚೇರಿಯಲ್ಲಿ ದಾಖಲಾದ ದೂರು

ಈ ಪ್ರಕರಣದ ಹಿನ್ನೆಲೆಯಲ್ಲಿ, ‘ಸಿಎಂ ವಿಂಡೋ’ ಎಂಬ ವೆಬ್‌ ಸೈಟ್‌ನಲ್ಲಿ ವಿದ್ಯಾರ್ಥಿಗಳ ವರ್ತನೆ ಬಗ್ಗೆ ದೂರು ದಾಖಲಾಗಿತ್ತು. ಅದರ ಪ್ರಕಾರ, ಶಾಲಾ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಮಾಲ್ ಮತ್ತು ಪಾರ್ಕ್‌ಗಳಲ್ಲಿ ತಿರುಗುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಸುತ್ತೋಲೆ ಕೇವಲ ಆ ದೂರಿಗೆ ಪ್ರತಿಕ್ರಿಯೆಯಾಗಿ ಪ್ರಸಾರ ಮಾಡಲಾದ ಸಾಮಾನ್ಯ ನಿರ್ದೇಶನವಾಗಿತ್ತು; ಆದರೆ ವಿವಾದ ಹೆಚ್ಚಾದ ನಂತರ ಸುತ್ತೋಲೆಯನ್ನು ಹಿಂಪಡೆಯಲಾಯಿತು.

ಪ್ರಾಂಶುಪಾಲರ ಪ್ರತಿಕ್ರಿಯೆ

ಒಂದು ಶಾಲೆಯ ಪ್ರಾಂಶುಪಾಲರು, ಶಾಲೆ ಈಗಾಗಲೇ ಶಿಸ್ತು ಮತ್ತು ಸುರಕ್ಷತೆಗಾಗಿ ಪ್ರಯತ್ನಿಸುತ್ತಿದೆ; ಆದರೆ ಅಧಿಕೃತ ಪತ್ರವ್ಯವಹಾರದಲ್ಲಿ ‘ಲವ್ ಜಿಹಾದ್’ನಂತಹ ಪದಗಳನ್ನು ಬಳಸುವುದು ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತದೆ ಮತ್ತು ಶೈಕ್ಷಣಿಕ ಆದ್ಯತೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ ಎಂದು ಹೇಳಿದರು.

ದೂರಿನ ವಿರುದ್ಧ ಕ್ರಮ ಕೈಗೊಳ್ಳಲೇಬೇಕು! – ಭಾಜಪ

ಭಾಜಪ ರಾಜ್ಯ ಮಾಧ್ಯಮ ಮುಖ್ಯಸ್ಥ ಅರವಿಂದ ಸೈನಿ ಅವರು, ಇಂತಹ ದೂರು ಬಂದಾಗ ತನಿಖೆ ನಡೆಯಲೇಬೇಕು. ಸರಕಾರದ ಬಳಿಗೆ ಯಾವುದೇ ದೂರು ಬಂದರೂ, ತಕ್ಷಣ ಕ್ರಮ ಜರುಗಿಸಲಾಗುತ್ತದೆ. ತನಿಖೆಯಲ್ಲಿ ಬರುವ ತೀರ್ಮಾನಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸೈನಿ ಅವರು ಸುತ್ತೋಲೆಯಲ್ಲಿ ‘ಲವ್ ಜಿಹಾದ್’ ಅನ್ನು ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಶಿಕ್ಷಣ ಇಲಾಖೆಯು ಶಿಕ್ಷಣದ ಗುಣಮಟ್ಟ ಸುಧಾರಿಸುವುದರ ಮೇಲೆ ಗಮನ ಹರಿಸಬೇಕು! – ಕಾಂಗ್ರೆಸ್

ಕಾಂಗ್ರೆಸ್ಸಿನ ಹಿರಿಯ ನಾಯಕ ಶಾಸಕ ಆಫ್ತಾಬ್ ಅಹ್ಮದ್ ಅವರು ಈ ಪತ್ರವನ್ನು ‘ಬೇಜವಾಬ್ದಾರಿತನ ಮತ್ತು ಒಡಕುಂಟು ಮಾಡುವಂತದ್ದು’ ಎಂದು ಕರೆದರು. ಶಿಕ್ಷಣ ಇಲಾಖೆಯು ರಾಜಕೀಯ ಅಜೆಂಡಾ ರೂಪಿಸುವ ಬದಲು, ಶಿಕ್ಷಣದ ಗುಣಮಟ್ಟ ಸುಧಾರಿಸುವುದರ ಮೇಲೆ ಗಮನ ಹರಿಸಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಅಧಿಕಾರಿಗಳು ಇಂತಹ ಸುತ್ತೋಲೆ ಹೊರಡಿಸುವಾಗ ಧಾರ್ಮಿಕ ಅಥವಾ ಪ್ರಚೋದನಕಾರಿ ಭಾಷೆಯನ್ನು ಬಳಸದಂತೆ ಜಾಗ್ರತೆ ವಹಿಸಬೇಕು. ಸಂಬಂಧಪಟ್ಟ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಚರ್ಚೆಯ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು! – ಮುಖ್ಯಮಂತ್ರಿ ಕಚೇರಿ

ಮುಖ್ಯಮಂತ್ರಿ ಕಚೇರಿಯ ಮಾಧ್ಯಮ ಕಾರ್ಯದರ್ಶಿ ಪ್ರವೀಣ ಆತ್ರೇಯ ಅವರು, ಯುವಕರ ಶಕ್ತಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ತಿರುಗಿಸುವುದು ಶಾಲೆ, ಶಿಕ್ಷಣ ಇಲಾಖೆ ಮತ್ತು ಪೋಷಕರ ಸಾಮೂಹಿಕ ಜವಾಬ್ದಾರಿಯಾಗಿದೆ. ಆಡಳಿತ, ಶಾಲೆ ಮತ್ತು ಪೋಷಕರ ನಡುವಿನ ಚರ್ಚೆಯ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಆತ್ರೇಯ ಅವರು ಸುತ್ತೋಲೆಯಲ್ಲಿನ ‘ಲವ್ ಜಿಹಾದ್’ ಎಂಬ ಪದದ ಬಗ್ಗೆ ಯಾವುದೇ ಟಿಪ್ಪಣಿ ನೀಡಲಿಲ್ಲ.