ಜಾತಿ ದ್ವೇಷವನ್ನು ನಿಯಂತ್ರಿಸದಿದ್ದರೆ, ೧೦೦ ರಿಂದ ೧೫೦ ವರ್ಷಗಳಲ್ಲಿ ಹಿಂದೂಗಳ ಅಸ್ತಿತ್ವ ನಾಶವಾಗುತ್ತದೆ ! – MP High Court Statement

ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಅವಲೋಕನ

ಜಬಲ್‌ಪುರ (ಮಧ್ಯಪ್ರದೇಶ) – ಜನರು ತಮ್ಮನ್ನು ತಾವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಕರೆದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ಸ್ವತಂತ್ರ ಅಸ್ತಿತ್ವವನ್ನು ತೋರಿಸುತ್ತಾರೆ. ಈ ಹಂತದಲ್ಲಿ ಇಂತಹ ವಿಷಯಗಳನ್ನು ನಿಯಂತ್ರಿಸದಿದ್ದರೆ, ೧೦೦ ರಿಂದ ೧೫೦ ವರ್ಷಗಳಲ್ಲಿ ತಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳುವ ಜನರ ಅಸ್ತಿತ್ವ ನಾಶವಾಗುತ್ತದೆ, ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಒಂದು ಮೊಕದ್ದಮೆಯ ವಿಚಾರಣೆ ಸಂದರ್ಭದಲ್ಲಿ ಅವಲೋಕನವನ್ನು ದಾಖಲಿಸಿದೆ.

ಜಾತಿಯ ಕಾರಣದಿಂದ ಅವಮಾನ ಮಾಡುವವರ ಮೇಲೆ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ (NSA) ಹೇರುವ ಆದೇಶ

ರಾಜ್ಯದ ದಮೋಹ್ ಜಿಲ್ಲೆಯಲ್ಲಿ ಅಕ್ಟೋಬರ್ ೧೧ ರಂದು ನಡೆದ ಘಟನೆಯನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ಉಚ್ಚ ನ್ಯಾಯಾಲಯವು ಅಕ್ಟೋಬರ್ ೧೪ ರಂದು ಈ ಅವಲೋಕನವನ್ನು ದಾಖಲಿಸಿದೆ. ಈ ಘಟನೆಯಲ್ಲಿ ಇತರ ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಗೆ ಉನ್ನತ ವರ್ಗದ ಗ್ರಾಮಸ್ಥರು ಅಪಮಾನ ಮಾಡಿದ್ದರು. ಅವರು ಸಂತ್ರಸ್ತ ವ್ಯಕ್ತಿಗೆ ಕೃತಕ ಬುದ್ಧಿಮತ್ತೆಯ ಮೂಲಕ (AI) ತಯಾರಿಸಿದ ಟೀಕಾತ್ಮಕ ವಿಡಿಯೋವನ್ನು ಕಳುಹಿಸಿದ್ದ ಆರೋಪದ ಮೇಲೆ ಒಬ್ಬ ಉನ್ನತ ವರ್ಗದ ವ್ಯಕ್ತಿಯ ಕಾಲುಗಳನ್ನು ತೊಳೆಯುವಂತೆ ಒತ್ತಾಯಿಸಿದ್ದರು. ವಿಡಿಯೋದಲ್ಲಿ ಕಾಣುವ ಎಲ್ಲರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (NSA) ಅನ್ವಯಿಸುವಂತೆ ನ್ಯಾಯಾಲಯವು ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

ಪ್ರತಿಯೊಬ್ಬರೂ ತಮ್ಮ ಜಾತಿಯ ಪ್ರದರ್ಶನದ ಕುರಿತು ಅತ್ಯಂತ ಆಕ್ರಮಣಕಾರಿಯಾಗುತ್ತಿದ್ದಾರೆ !

ಉಚ್ಚ ನ್ಯಾಯಾಲಯವು, ಇದೇ ರಾಜ್ಯದಲ್ಲಿ ಒಬ್ಬ ಉನ್ನತ ವರ್ಗದ ವ್ಯಕ್ತಿ ಆದಿವಾಸಿ ವ್ಯಕ್ತಿಯ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಇದರ ವಿರುದ್ಧದ ಆಕ್ರೋಶ ತಣ್ಣಗಾಗಲು, ಆಗಿನ ಮುಖ್ಯಮಂತ್ರಿಗಳು ಸಂತ್ರಸ್ತ ವ್ಯಕ್ತಿಯ ಕಾಲುಗಳನ್ನು ತೊಳೆದಿದ್ದರು. ಜಾತಿಗಳ ಪ್ರದರ್ಶನ ಹೆಚ್ಚುತ್ತಿದೆ. ಪ್ರತಿಯೊಂದು ಸಮುದಾಯವೂ ಪದೇ ಪದೇ ಮತ್ತು ನಿರ್ಭಯವಾಗಿ ತಮ್ಮ ಜಾತಿಯ ಗುರುತನ್ನು ಪ್ರದರ್ಶಿಸುತ್ತಿದೆ, ಇದು ಇಡೀ ಹಿಂದೂ ಧರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪ್ರತಿಯೊಬ್ಬರೂ ತಮ್ಮ ಜಾತಿಯ ಪ್ರದರ್ಶನದ ಕುರಿತು ಅತ್ಯಂತ ಆಕ್ರಮಣಕಾರಿಯಾಗುತ್ತಿದ್ದಾರೆ ಮತ್ತು ನಿರ್ದಿಷ್ಟ ಜಾತಿಗೆ ಸೇರಿದ ಬಗ್ಗೆ ಹೆಮ್ಮೆ ತೋರಿಸಲು ಯಾವುದೇ ಕೊರತೆಯನ್ನು ಬಿಡುತ್ತಿಲ್ಲ. ಇದರಿಂದ ಜಾತಿ ಹಿಂಸಾಚಾರದ ಅನೇಕ ಘಟನೆಗಳು ಸಂಭವಿಸುತ್ತಿವೆ. ಹೆಚ್ಚಿನ ಪ್ರಕರಣಗಳಲ್ಲಿ ಸಂತ್ರಸ್ತರು ಕನಿಷ್ಠ ಸಾಕ್ಷರರು ಮತ್ತು ಆರ್ಥಿಕವಾಗಿ ಅತ್ಯಂತ ಬಡವರಾಗಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಬೂಟು ಎಸೆದ ಘಟನೆ ಮತ್ತು ಹರಿಯಾಣದಲ್ಲಿ ಹಿರಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ದೇಶದಲ್ಲಿ ಜಾತಿ ಸಂಬಂಧಿತ ವಿಷಯಗಳಿಗೆ ಮಹತ್ವ ದೊರೆತಿರುವುದಕ್ಕೆ ಉದಾಹರಣೆಗಳಾಗಿವೆ.

ಸಂಪಾದಕೀಯ ನಿಲುವು

ಮೂಲತಃ ಹಿಂದೂ ಧರ್ಮದಲ್ಲಿ ಜಾತಿಗಳಿಲ್ಲ, ಬದಲಿಗೆ ವರ್ಣಾಶ್ರಮ ವ್ಯವಸ್ಥೆ ಇದೆ, ಅದು ಈಶ್ವರ ನಿರ್ಮಿತವಾಗಿದೆ. ಆದ್ದರಿಂದ, ಜಾತಿಪದ್ಧತಿಯನ್ನು ತೊಡೆದುಹಾಕುವುದು ಅತ್ಯಂತ ಅವಶ್ಯಕವಾಗಿದೆ. ಇದಕ್ಕಾಗಿ ಶಂಕರಾಚಾರ್ಯರು, ಧರ್ಮಾಚಾರ್ಯರು, ಸಂತರು ಮುಂದಾಳತ್ವ ವಹಿಸಬೇಕು !