ಫಿಜಿ: ಒಂದೇ ದಿನ ಒಂಬತ್ತು ಹನುಮಾನ್ ಮೂರ್ತಿಗಳ ಕಳವು!

ಸುವಾ (ಫಿಜಿ) – ಆಗಸ್ಟ್ 22 ರಂದು ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರವಾದ ಫಿಜಿಯ ನಾದಿ ಮತ್ತು ಕೊರೋಸಿರಿ ಪ್ರದೇಶಗಳಲ್ಲಿ ಶ್ರೀ ಹನುಮಂತ ದೇವರ ಒಂಬತ್ತು ಮೂರ್ತಿಗಳು ಕಳ್ಳತನವಾಗಿವೆ. ಕೆಲವು ಮೂರ್ತಿಗಳನ್ನು ಮನೆಗಳಿಂದ ಮತ್ತು ಕೆಲವು ದೇವಸ್ಥಾನಗಳಿಂದ ಕಳ್ಳತನ ಮಾಡಲಾಗಿದೆ. ಪೊಲೀಸರು ಈ ಎಲ್ಲ ಘಟನೆಗಳನ್ನು ದೃಢಪಡಿಸಿದ್ದು, ಶಂಕಿತರ ಪತ್ತೆಗಾಗಿ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಇತ್ತೀಚೆಗೆ ಹಿಂದೂ ದೇವಸ್ಥಾನಗಳು ಮತ್ತು ಧಾರ್ಮಿಕ ಚಿಹ್ನೆಗಳ ಮೇಲೆ ಅನೇಕ ದಾಳಿಗಳು ನಡೆದಿವೆ. ಈ ಘಟನೆಗಳಿಂದಾಗಿ ಫಿಜಿಯಲ್ಲಿನ ಹಿಂದೂಗಳಲ್ಲಿ ಆಕ್ರೋಶ ಹೆಚ್ಚಾಗಿದೆ. ಫಿಜಿಯ ಪ್ರಧಾನ ಮಂತ್ರಿಗಳು ಭಾರತಕ್ಕೆ ಭೇಟಿ ನೀಡಿದ್ದು, ‘ವರ್ಲ್ಡ್ ಹಿಂದೂ ಫೆಡರೇಶನ್ (ಪೆಸಿಫಿಕ್)’ ಸಂಸ್ಥೆಯು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಈ ವಿಷಯವನ್ನು ಫಿಜಿಯ ಪ್ರಧಾನ ಮಂತ್ರಿಯವರೊಂದಿಗೆ ಪ್ರಸ್ತಾಪಿಸಬೇಕೆಂದು ಮನವಿ ಮಾಡಿದೆ.

ಸಂಸ್ಥೆಯ ಅಧ್ಯಕ್ಷ ಡಾ. ಸುನೀಲ್ ಕುಮಾರ್ ಅವರು ಮಾತನಾಡಿ, ದೇವಸ್ಥಾನಗಳು ಮತ್ತು ಮನೆಗಳಿಂದ ಶಿವಲಿಂಗ ಮತ್ತು ದೇವರ ಮೂರ್ತಿಗಳ ಕಳ್ಳತನ ಹಾಗೂ ಹಿಂದೂಗಳ ಮೇಲಿನ ಹೆಚ್ಚುತ್ತಿರುವ ದಾಳಿಗಳು ಆತಂಕಕಾರಿಯಾಗಿದೆ. ನಿರಂತರ ಪ್ರತಿಭಟನೆಗಳ ಹೊರತಾಗಿಯೂ ಇಂತಹ ಘಟನೆಗಳ ಪ್ರಮಾಣ ಹೆಚ್ಚುತ್ತಿದೆ. ಪ್ರಧಾನ ಮಂತ್ರಿ ರಬುಕಾ ಅವರು ಹಿಂದೂ ಅಲ್ಪಸಂಖ್ಯಾತರ ರಕ್ಷಣೆಯ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಎಲ್ಲಾ ಧಾರ್ಮಿಕ ಸಮುದಾಯಗಳ ರಕ್ಷಣೆಗಾಗಿ ಮತ್ತು ಶಾಂತಿ, ಪರಸ್ಪರ ಗೌರವ ಹಾಗೂ ಬಹುಸಂಸ್ಕೃತಿಯ ಗೌರವವನ್ನು ಎತ್ತಿಹಿಡಿಯಲು ತಕ್ಷಣವೇ ದೃಢ ಹೆಜ್ಜೆಗಳನ್ನಿಡಬೇಕು ಎಂದು ಹೇಳಿದ್ದಾರೆ.

ಉಪ ಪ್ರಧಾನ ಮಂತ್ರಿಯಿಂದ ಎಚ್ಚರಿಕೆ

ಫಿಜಿಯ ಉಪ ಪ್ರಧಾನ ಮಂತ್ರಿ ಮನೋವಾ ಕಮಿಕಾಮಿಕ ಅವರು ಹಿಂದೂ ಏಕ್ತಾ ಸಭೆಯಲ್ಲಿ ದೇಶಾದ್ಯಂತ ಧಾರ್ಮಿಕ ಸ್ಥಳಗಳ ಅಪವಿತ್ರತೆಯನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೆ, ಸರಕಾರವು ಎಲ್ಲಾ ನಾಗರಿಕರನ್ನು ಒಗ್ಗೂಡಿಸಲು ಮತ್ತು ಅವರ ಪೂಜಾ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದು ಹಿಂದೂ ಸಮುದಾಯಕ್ಕೆ ಭರವಸೆ ನೀಡಿದರು.

ಸಂಪಾದಕೀಯ ನಿಲುವು

ಕೇವಲ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಹಿಂದೂಗಳು ಮತ್ತು ಅವರ ಆರಾಧನಾ ಸ್ಥಳಗಳ ಮೇಲಿನ ಹೆಚ್ಚುತ್ತಿರುವ ದಾಳಿಗಳನ್ನು ತಡೆಗಟ್ಟಲು ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿ ಹಿಂದೂ ಸಂಘಟನೆ ಆವಶ್ಯಕ!