Supreme Court Order : ಉಚ್ಚ ನ್ಯಾಯಾಲಯಗಳು ಶೌಚಾಲಯಗಳ ದುಃಸ್ಥಿತಿಯ ಬಗ್ಗೆ ವರದಿ ಸಲ್ಲಿಸಲು ಮೀನಾಮೇಶ; ಸರ್ವೋಚ್ಚ ನ್ಯಾಯಾಲಯ ಕೆಂಡಾಮಂಡಲ

8 ವಾರಗಳಲ್ಲಿ ವರದಿ ನೀಡಿ, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುವುದು!

ನವದೆಹಲಿ – ದೇಶದ 25 ಉಚ್ಚ ನ್ಯಾಯಾಲಯಗಳಲ್ಲಿ 20 ಉಚ್ಚ ನ್ಯಾಯಾಲಯಗಳು ತಮ್ಮ ಶೌಚಾಲಯ ಸೌಲಭ್ಯಗಳನ್ನು ಸುಧಾರಿಸಲು ಕೈಗೊಂಡ ಕ್ರಮಗಳ ಕುರಿತು ಇನ್ನೂ ಮಾಹಿತಿ ನೀಡದಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “8 ವಾರಗಳಲ್ಲಿ ವರದಿ ಸಲ್ಲಿಸಿ, ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಸರ್ವೋಚ್ಚ ನ್ಯಾಯಾಲಯ ಎಚ್ಚರಿಕೆ ನೀಡಿದೆ.

1. ಸರ್ವೋಚ್ಚ ನ್ಯಾಯಾಲಯವು ಜನವರಿ 15, 2025 ರಂದು ಎಲ್ಲಾ ಉಚ್ಚ ನ್ಯಾಯಾಲಯಗಳು, ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿ, ಪ್ರತಿ ನ್ಯಾಯಾಲಯದಲ್ಲಿ ಪುರುಷರು, ಮಹಿಳೆಯರು, ದಿವ್ಯಾಂಗರಿಗೆ ಮತ್ತು ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯಗಳು ಇರಬೇಕು ಎಂದು ಹೇಳಿತ್ತು. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ‘ಸರಿಯಾದ ನೈರ್ಮಲ್ಯ ಸೌಲಭ್ಯಗಳನ್ನು ಪಡೆಯುವುದು’ ನಾಗರಿಕರ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಪ್ರತಿಯೊಂದು ಉಚ್ಚ ನ್ಯಾಯಾಲಯದಲ್ಲಿ ವಿಶೇಷ ಸಮಿತಿಯನ್ನು ರಚಿಸಬೇಕು. ಅದರ ಅಧ್ಯಕ್ಷತೆಯನ್ನು ಒಬ್ಬ ಹಿರಿಯ ನ್ಯಾಯಾಧೀಶರು ವಹಿಸಬೇಕು. ಇದರಲ್ಲಿ ಸರಕಾರಿ ಅಧಿಕಾರಿಗಳು, ‘ಬಾರ್ ಅಸೋಸಿಯೇಷನ್’ ಸದಸ್ಯರು ಮತ್ತು ಅಗತ್ಯ ಸಿಬ್ಬಂದಿಗಳು ಇರಬೇಕು. ಶೌಚಾಲಯಗಳ ಸಂಖ್ಯೆಯನ್ನು ಅಗತ್ಯಕ್ಕೆ ಅನುಗುಣವಾಗಿ ನಿರ್ಧರಿಸಬೇಕು. ಶೌಚಾಲಯಗಳನ್ನು ನಿರ್ಮಿಸಲು ಮತ್ತು ಅವುಗಳ ಶುಚಿತ್ವ ಹಾಗೂ ನಿರ್ವಹಣೆಯನ್ನು ಸರಿಯಾಗಿ ಮಾಡಲು ರಾಜ್ಯ ಸರಕಾರಗಳು ಹಣ ನೀಡುತ್ತವೆ.

2. ಇದಕ್ಕಾಗಿ, ಸರ್ವೋಚ್ಚ ನ್ಯಾಯಾಲಯವು ಎಲ್ಲಾ ಉಚ್ಚ ನ್ಯಾಯಾಲಯಗಳಿಗೆ ವರದಿ ಸಲ್ಲಿಸಲು 8 ವಾರಗಳ ಕಾಲಾವಕಾಶ ನೀಡಿತ್ತು; ಆದರೆ ಜಾರ್ಖಂಡ್, ಮಧ್ಯಪ್ರದೇಶ, ಕೋಲಕಾತಾ, ದೆಹಲಿ ಮತ್ತು ಪಾಟ್ನಾ ಉಚ್ಚ ನ್ಯಾಯಾಲಯಗಳು ಮಾತ್ರ ವರದಿ ಸಲ್ಲಿಸಿವೆ. ಇದಕ್ಕೆ ಸರ್ವೋಚ್ಚ ನ್ಯಾಯಾಲಯವು “ಈ ಬಾರಿ ವರದಿ ಸಲ್ಲಿಸದಿದ್ದರೆ, ಉಚ್ಚ ನ್ಯಾಯಾಲಯದ ‘ರಿಜಿಸ್ಟ್ರಾರ್ ಜನರಲ್’ ಸ್ವತಃ ಸರ್ವೋಚ್ಚ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿತು.

3. ನ್ಯಾಯವಾದಿ ರಾಜೀವ ಕಲಿತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನ್ಯಾಯಾಲಯಗಳಲ್ಲಿನ ಶೌಚಾಲಯಗಳ ದುಃಸ್ಥಿತಿಯ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯಗಳಿಗೆ ಸಾಕಷ್ಟು ಶೌಚಾಲಯಗಳನ್ನು ನಿರ್ಮಿಸಲು ನಿರ್ದೇಶನ ನೀಡಿತ್ತು.

ಸಂಪಾದಕೀಯ ನಿಲುವು

ಉಚ್ಚ ನ್ಯಾಯಾಲಯದ ಆಡಳಿತ ವ್ಯವಸ್ಥೆಯೇ ಇಷ್ಟು ನಿಷ್ಕ್ರಿಯವಾಗಿದ್ದರೆ, ದೇಶದ ಇತರ ವ್ಯವಸ್ಥೆ ಹೇಗಿರಬಹುದು ಎಂದು ಊಹಿಸಬಹುದು!