ಸೈಬರ್ ಕ್ರೈಮ್‌ನ ಹೊಸ ವಿಧಾನ ಬಹಿರಂಗ; 22 ಲಕ್ಷ ಕಳೆದುಕೊಂಡ ವೃದ್ಧೆ

ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ಮಾಡಿದ ಆರೋಪ ಮಾಡಿ ವೃದ್ಧೆಯೊಬ್ಬರಿಂದ 22 ಲಕ್ಷ ರೂಪಾಯಿ ವಂಚನೆ!

ಮುಂಬಯಿ – ಇಲ್ಲಿ 64 ವರ್ಷದ ವೃದ್ಧೆಯೊಬ್ಬರಿಂದ ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ 22 ಲಕ್ಷ 40 ಸಾವಿರ ರೂಪಾಯಿ ವಂಚನೆ ಮಾಡಲಾಗಿದೆ. ಈ ಮಹಿಳೆ ಗಿರ್ಗಾವ್‌ನಲ್ಲಿ ವಾಸಿಸುತ್ತಿದ್ದು, ವಂಚನೆಯಾಗಿರುವುದು ಅರಿವಿಗೆ ಬಂದ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಾಗ, ಮಾತನಾಡಿದ ವ್ಯಕ್ತಿ ತಾನು ದೆಹಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಪ್ರೇಮ್ ಕುಮಾರ್ ಗುಪ್ತಾ ಎಂದು ಹೇಳಿಕೊಂಡಿದ್ದಾನೆ. ಜಮ್ಮು-ಕಾಶ್ಮೀರ ಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. “ನಿಮ್ಮ ವಿರುದ್ಧ ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ನಡೆಸಿದ ಮತ್ತು ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಬಗ್ಗೆ ದೂರು ದಾಖಲಾಗಿದೆ” ಎಂದು ಆತ ಹೇಳಿಕೊಂಡಿದ್ದಾನೆ. “ಗೂಢಚಾರಿಕೆ ಅಪರಾಧಕ್ಕಾಗಿ ನಿಮಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ದಂಡ ವಿಧಿಸಬಹುದು” ಎಂದು ತಿಳಿಸಿದ್ದಾನೆ. ಕ್ರಮದ ಭಯದಿಂದ ಮಹಿಳೆ ಸಂಬಂಧಪಟ್ಟವರಿಗೆ 22 ಲಕ್ಷ 40 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಹಣವನ್ನು ಖಾತೆಗೆ ಜಮಾ ಮಾಡಿದ ನಂತರ, ದೂರುದಾರ ಮಹಿಳೆಯನ್ನು ಯಾರೂ ಸಂಪರ್ಕಿಸಲಿಲ್ಲ. ಆಗ ತಮಗೆ ವಂಚನೆಯಾಗಿದೆ ಎಂದು ಆಕೆಗೆ ಅರಿವಾಯಿತು.

ಸಂಪಾದಕೀಯ ನಿಲುವು

  • ಅಪರಿಚಿತ ವ್ಯಕ್ತಿಗಳಿಗೆ ಹಣ ಕಳುಹಿಸುವಾಗ ಜಾಗರೂಕರಾಗಿರಿ!
  • ಇಂತಹ ಸೈಬರ್ ಕಳ್ಳರನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ವಿಧಿಸದೆ ಈ ರೀತಿಯ ವಂಚನೆಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ!