ಅಪಘಾತಕ್ಕೀಡಾದ ವಿಮಾನವನ್ನು ನಮ್ಮ ಸಂಸ್ಥೆ ನಿರ್ವಹಿಸಿಲ್ಲ!

ಕರ್ಣಾವತಿ ವಿಮಾನ ಅಪಘಾತದ ಕುರಿತು ಟರ್ಕಿಯ ಸ್ಪಷ್ಟೀಕರಣ

ಅಂಕಾರಾ (ಟರ್ಕಿ): ಕರ್ಣಾವತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದ ಹಿಂದೆ ವಿಧ್ವಂಸಕ ಕೃತ್ಯವಿದ್ದು, ಅದನ್ನು ಟರ್ಕಿಯ ‘ಟರ್ಕಿಶ್ ಟೆಕ್ನಿಕ್’ ಸಂಸ್ಥೆ ನಡೆಸುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಯೋಗ ಋಷಿ ರಾಮದೇವ ಬಾಬಾ ಅವರೂ ಸಹ ಈ ವಿಮಾನವನ್ನು ಟರ್ಕಿಯ ಸಂಸ್ಥೆ ನಿರ್ವಹಿಸಿದೆ ಎಂದು ಹೇಳಿ, ಟರ್ಕಿಯ ಪಾತ್ರದ ಕುರಿತು ತನಿಖೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ, ಈಗ ಟರ್ಕಿಯ ಮಾಹಿತಿ ವಿಭಾಗವು ಸ್ಪಷ್ಟನೆ ನೀಡಿದ್ದು, ‘ನಮ್ಮ ದೇಶದ ಸಂಸ್ಥೆ ಈ ವಿಮಾನವನ್ನು ನಿರ್ವಹಿಸುತ್ತಿರಲಿಲ್ಲ’ ಎಂದು ಹೇಳಿದೆ.

ಭಾರತ-ಟರ್ಕಿಯ ಸಂಬಂಧಗಳನ್ನು ಹಾಳುಮಾಡುವ ಪ್ರಯತ್ನ!

‘X’ ನಲ್ಲಿ ಪೋಸ್ಟ್ ಮಾಡಿದ ಟರ್ಕಿಯ ಮಾಹಿತಿ ವಿಭಾಗವು: “ಏರ್ ಇಂಡಿಯಾ ಮತ್ತು ‘ಟರ್ಕಿಶ್ ಟೆಕ್ನಿಕ್’ ನಡುವಿನ ಒಪ್ಪಂದವು ‘ಬಿ 777’ ವಿಮಾನಗಳ ನಿರ್ವಹಣೆಗಾಗಿ ಮಾತ್ರವಿದ್ದು, ‘ಬೋಯಿಂಗ್ 787-8’ ಗಾಗಿ ಅಲ್ಲ. ಟರ್ಕಿಶ್ ಟೆಕ್ನಿಕ್ ಎಂದಿಗೂ ಅಪಘಾತಕ್ಕೀಡಾದ ವಿಮಾನದ ನಿರ್ವಹಣಾ ಕಾರ್ಯವನ್ನು ಮಾಡಿಲ್ಲ. ಇಲ್ಲಿಯವರೆಗೆ, ಟರ್ಕಿಶ್ ಟೆಕ್ನಿಕ್ ಏರ್ ಇಂಡಿಯಾದ ಯಾವುದೇ ಬೋಯಿಂಗ್ 787-8 ವಿಮಾನಗಳನ್ನು ರಿಪೇರಿ ಮಾಡಿಲ್ಲ. ಆ ವಿಮಾನಕ್ಕೆ ಕೊನೆಯ ಸೇವೆಯನ್ನು ಯಾವ ಸಂಸ್ಥೆ ನೀಡಿದೆ ಎಂಬುದು ನಮಗೆ ತಿಳಿದಿದೆ; ಆದರೆ ತಪ್ಪು ಮಾಹಿತಿ ಹರಡಬಾರದು ಎಂಬ ಕಾರಣಕ್ಕೆ ನಾವು ಅದರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಈ ಅಪಘಾತದ ಹಿಂದೆ ನಮ್ಮ ಸಂಸ್ಥೆ ಇದೆ ಎಂದು ಹೇಳಿಕೊಳ್ಳುವುದು, ಜನರನ್ನು ದಾರಿ ತಪ್ಪಿಸುವ ಮತ್ತು ಭಾರತ-ಟರ್ಕಿ ಸಂಬಂಧಗಳನ್ನು ಹಾಳುಮಾಡುವ ಪ್ರಯತ್ನವಾಗಿದೆ. ನಮ್ಮ ಸಂಸ್ಥೆ ಇಂತಹ ಸುಳ್ಳು ಹೇಳಿಕೆಗಳನ್ನು ಗಮನಿಸುತ್ತದೆ ಮತ್ತು ಟರ್ಕಿಯ ಪ್ರತಿಷ್ಠೆಗೆ ಧಕ್ಕೆ ತರುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುತ್ತದೆ” ಎಂದು ಹೇಳಿದೆ.