Manoj Naravane : ಯುದ್ಧವೆಂದರೆ ರೊಮ್ಯಾಂಟಿಕ್ ಚಲನಚಿತ್ರವಲ್ಲ, ಅದು ಬಹಳ ಗಂಭೀರವಾದ ವಿಷಯ! – (ನಿವೃತ್ತ) ಜನರಲ್ ಮನೋಜ ನರವಣೆ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರು

ಭಾರತೀಯ ಸೇನಾ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ

ಪುಣೆ – ಯುದ್ಧವೆಂದರೆ ಹಿಂದಿ ಚಿತ್ರರಂಗದ ಪ್ರಣಯ (“ರೊಮ್ಯಾಂಟಿಕ್”) ಚಿತ್ರವೇನಲ್ಲ. ಯುದ್ಧವು ಬಹಳ ಗಂಭೀರವಾದ ವಿಷಯವಾಗಿದೆ. ಯುದ್ಧ ಅಥವಾ ಹಿಂಸಾಚಾರವು ಕೊನೆಯ ಉಪಾಯವಾಗಿರಬೇಕು; ಅದಕ್ಕಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದು ಯುದ್ಧದ ಕಾಲವಲ್ಲ ಎಂದು ಹೇಳಿದರು. ಕೆಲವು ಮೂರ್ಖ ಜನರು ನಮ್ಮ ಮೇಲೆ ಯುದ್ಧವನ್ನು ಹೇರಿದರೂ, ನಾವು ಅದನ್ನು ಆಚರಿಸಬಾರದು ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ ನರವಣೆ ಹೇಳಿದ್ದಾರೆ. ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಮತ್ತು ಪಾಕಿಸ್ತಾನದ ವಿರುದ್ಧ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸುವಂತೆ ಸಲಹೆ ನೀಡುತ್ತಿರುವವರನ್ನು ಅವರು ಈ ರೀತಿ ಟೀಕಿಸಿದ್ದಾರೆ. ಇಲ್ಲಿನ ‘ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ, “ಒಂದು ವೇಳೆ ನನಗೆ ಆದೇಶ ಸಿಕ್ಕಿದ್ದರೆ, ನಾನು ಖಂಡಿತವಾಗಿಯೂ ಯುದ್ಧಭೂಮಿಗೆ ಹೋಗುತ್ತಿದ್ದೆ; ಆದರೆ ರಾಜಕೀಯ ಚರ್ಚೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸುವುದು ನನ್ನ ಆದ್ಯತೆಯಾಗಿದೆ. ಹೋರಾಟದಿಂದ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ತೊಂದರೆಗೀಡಾಗಿದ್ದಾರೆ. ಸಣ್ಣ ಮಕ್ಕಳು ರಾತ್ರಿ ಬಾಂಬ್ ಸ್ಫೋಟದಿಂದ ಬಂಕರ್‌ಗಳಲ್ಲಿ ಕಳೆಯಬೇಕಾಗಿದೆ. ಯುದ್ಧದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಆಘಾತವು ಈಗ ತಲೆಮಾರುಗಳವರೆಗೆ ಉಳಿಯುತ್ತದೆ. ‘ಪಿ ಟಿ ಎಸ್‌ ಡಿ’ (‘ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’) ಎಂಬ ಸಮಸ್ಯೆಯಿಂದ ಬಳಲುತ್ತಿರುವವರಿಗೆ 20 ವರ್ಷಗಳ ನಂತರವೂ ಭಯ ಮತ್ತು ಆತಂಕ ಕಾಡುತ್ತಿರುತ್ತದೆ. ಅಂತಹ ಜನರು ಅನೇಕ ಬಾರಿ ಮನೋವೈದ್ಯರ ಸಹಾಯವನ್ನು ಪಡೆಯಬೇಕಾಗುತ್ತದೆ”, ಎಂದು ಹೇಳಿದರು.