ಮೊಘಲರಲ್ಲ, ಕ್ರಾಂತಿಕಾರರೇ ಶ್ರೇಷ್ಠ ನಾಯಕರು! – ಯೋಗಋಷಿ ರಾಮದೇವಬಾಬಾ

  • ಪತಂಜಲಿ ಮೆಗಾ ಫುಡ್ ಮತ್ತು ಹರ್ಬಲ್ ಪಾರ್ಕ್ ಉದ್ಘಾಟನೆ!

  • ಇತಿಹಾಸದ ಪುಸ್ತಕಗಳಿಂದ ಭಾರತೀಯ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿರುವ ಆರೋಪ!

ನಾಗಪುರ – ಮೊಘಲರಲ್ಲ, ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಕ್ರಾಂತಿಕಾರರೇ ಶ್ರೇಷ್ಠರಾಗಿದ್ದರು; ಆದರೆ ಶಾಲಾ ಪಠ್ಯಕ್ರಮದಲ್ಲಿ ಮೊಘಲರ ಇತಿಹಾಸವನ್ನು ಕಲಿಸಲಾಯಿತು. ಇತಿಹಾಸದ ಪುಸ್ತಕಗಳಿಂದ ಭಾರತೀಯ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ. ನಾವು ನಮ್ಮ ಸಮೃದ್ಧ ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಾಗಲಿಲ್ಲ. ಪಠ್ಯಕ್ರಮದಲ್ಲಿ ಸನಾತನ ಧರ್ಮದ ಶಿಕ್ಷಣವನ್ನು ನೀಡಬೇಕಿತ್ತು. ವೇದದರ್ಶನ, ಉಪನಿಷತ್ತುಗಳನ್ನು ಕಲಿಸಬೇಕಿತ್ತು ಎಂದು ಯೋಗಋಷಿ ರಾಮದೇವಬಾಬಾ ಇಲ್ಲಿ ಪ್ರತಿಪಾದಿಸಿದರು. ಇಲ್ಲಿನ ಮಿಹಾನ ಪ್ರದೇಶದಲ್ಲಿ ‘ಪತಂಜಲಿ ಮೆಗಾ ಫುಡ್ ಮತ್ತು ಹರ್ಬಲ್ ಪಾರ್ಕ್’ ಅನ್ನು ಕೇಂದ್ರ ಸಚಿವ ನಿತಿನ ಗಡ್ಕರಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಉದ್ಘಾಟಿಸಿದರು. ಆ ಸಮಯದಲ್ಲಿ ಯೋಗಋಷಿ ರಾಮದೇವಬಾಬಾ ಮಾತನಾಡಿದರು.

ಅವರು ಮಾತನ್ನು ಮುಂದುವರೆಸಿ, “ತಪ್ಪಾದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿಯವರು ಕೊಡುಗೆ ನೀಡಿದ್ದಾರೆ” ಎಂದರು.

ಕೇಂದ್ರ ಸಚಿವ ನಿತಿನ ಗಡಕರಿಯವರು ಮಾತನಾಡಿ, ವಿದರ್ಭದ ರೈತರ ಆತ್ಮಹತ್ಯೆಯ ಬಿಕ್ಕಟ್ಟನ್ನು ನಿವಾರಿಸಲು 10 ವರ್ಷಗಳ ಹಿಂದೆ ಯೋಗಋಷಿ ರಾಮದೇವಬಾಬಾ ಅವರಿಗೆ ‘ಪತಂಜಲಿ’ಯ ‘ಮೆಗಾ ಫುಡ್ ಪ್ರೊಸೆಸಿಂಗ್ ಯುನಿಟ್’ ಅನ್ನು ನಾಗಪುರದಲ್ಲಿ ಸ್ಥಾಪಿಸಲು ವಿನಂತಿಸಿದ್ದೆ. ಈ ಭವ್ಯ ಕಾರ್ಯದ ಶುಭಾರಂಭವಾಯಿತು. ಇದರ ಮೂಲಕ ವಿದರ್ಭದ ರೈತರು ಸಮೃದ್ಧಿಯ ಹಾದಿ ಹಿಡಿಯುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಮಾತನಾಡಿ, ‘ಪತಂಜಲಿ’ ಕೇಂದ್ರ ವಿದರ್ಭದ ರೈತರಿಗೆ ವರದಾನವಾಗಲಿದೆ. ಮುಂದಿನ ಕೆಲ ದಿನಗಳಲ್ಲಿ ಕಿತ್ತಳೆ ಸೇರಿದಂತೆ ಎಲ್ಲಾ ಹಣ್ಣುಗಳ ‘ಪ್ರೊಸೆಸಿಂಗ್’ ಆರಂಭವಾಗಲಿದೆ. ವಿದರ್ಭದಲ್ಲಿ ಮೆಗಾ ಫುಡ್ ಪಾರ್ಕ್ ಇರಬೇಕು ಎಂಬುದು ನಮ್ಮ ಆಶಯವೂ ಆಗಿತ್ತು. ಈಗ ‘ಪತಂಜಲಿ’ ಮೂಲಕ ಎಲ್ಲರೂ ದೀರ್ಘಕಾಲ ಕಿತ್ತಳೆ ಹಣ್ಣುಗಳನ್ನು ಸಂಗ್ರಹಿಸಬಹುದು. ಇದರಿಂದ ಬೆಳೆ ನಷ್ಟವಾಗುವುದು ತಪ್ಪುತ್ತದೆ.” ಎಂದು ಹೇಳಿದರು.

ನಾಗಪುರ ಆಧ್ಯಾತ್ಮದ ಜೊತೆಗೆ ಕ್ರಾಂತಿಯ ಭೂಮಿ! – ಆಚಾರ್ಯ ಬಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕ, ಪತಂಜಲಿ ಆಯುರ್ವೇದ ಲಿಮಿಟೆಡ್

ನಾಗಪುರದ ಭೂಮಿ ಆಧ್ಯಾತ್ಮ ಮತ್ತು ಕ್ರಾಂತಿಯ ಭೂಮಿಯಾಗಿದೆ. ಇದು ದೇಶ ಮತ್ತು ಸಂವಿಧಾನಕ್ಕೆ ಮೂರ್ತರೂಪ ನೀಡುವಂತಹದ್ದಾಗಿದೆ. ಈಗ ಈ ಭೂಮಿಯಿಂದ ‘ಪತಂಜಲಿ’ಯ ನವಕೃಷಿ ಕ್ರಾಂತಿಯ ಮೂಲಕ ದೇಶದ ರೈತರ ಸಮೃದ್ಧಿಯ ಬಾಗಿಲು ತೆರೆಯುತ್ತದೆ. ಇಲ್ಲಿನ ‘ಮೆಗಾ ಫುಡ್ ಮತ್ತು ಹರ್ಬಲ್ ಪಾರ್ಕ್’ ಆಹಾರ ಸಂಸ್ಕರಣಾ ಕ್ಷೇತ್ರದ ‘ಸಿಂಗಲ್ ಪಾಯಿಂಟ್’ ಮತ್ತು ಏಷ್ಯಾದ ಅತಿದೊಡ್ಡ ಘಟಕವಾಗಿದೆ ಎಂದು ಹೇಳಿದರು.