ಶ್ರೀನಗರ – ರಸ್ತೆಗಳ ಸ್ಥಿತಿ ಕಳಪೆಯಾಗಿದ್ದರೂ ಟೋಲ್ ಸಂಗ್ರಹಿಸುವುದು ನ್ಯಾಯಸಮ್ಮತವಲ್ಲ ಎಂದು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಪಂಜಾಬ್ (ಪಠಾಣಕೋಟ್) ನಿಂದ ಜಮ್ಮುವಿನ (ಉಧಂಪುರ್)ವರೆಗೆ ಇರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44ರ ಎರಡು ಟೋಲ್ ನಾಕೆಗಳ ಶುಲ್ಕವನ್ನು 80% ಕಡಿತಗೊಳಿಸಲು ನ್ಯಾಯಾಲಯ ಆದೇಶಿಸಿದೆ. ಸುಗಮ, ಸುರಕ್ಷಿತ ಹಾಗೂ ಸೂಕ್ತ ವ್ಯವಸ್ಥೆಯನ್ನೊಳಗೊಂಡ ಹೆದ್ದಾರಿಗಳಿಗಾಗಿ ಮಾತ್ರ ಟೋಲ್ ಶುಲ್ಕ ವಿಧಿಸಬೇಕು ಎಂಬುದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. (ಇದನ್ನು ನ್ಯಾಯಾಲಯ ಏಕೆ ಹೇಳಬೇಕಾಗುತ್ತದೆ? ಸರಕಾರಕ್ಕೆ ಇದು ಗೊತ್ತಾಗುವುದಿಲ್ಲವೇ? – ಸಂಪಾದಕರು)
1. ಮುಖ್ಯ ನ್ಯಾಯಮೂರ್ತಿ ತಾಶಿ ರಾಬಸ್ತಾನ್ ಹಾಗೂ ನ್ಯಾಯಮೂರ್ತಿ ಎಂ.ಎ. ಚೌಧರಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಹೆದ್ದಾರಿಗಳ ಸ್ಥಿತಿ ಹದಗೆಡಿದರೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
2. ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಪಠಾಣ್‌ಕೋಟ್‌ನಿಂದ ಉಧಂಪುರದವರೆಗಿನ ಹೆದ್ದಾರಿಯಲ್ಲಿರುವ ಲಖನ್‌ಪುರ, ಥಂಡಿ ಖುಯಿ ಮತ್ತು ಬನ್ ಟೋಲ್ ಗೇಟ್‌ಗಳಲ್ಲಿ ಟೋಲ್ ಶುಲ್ಕದಿಂದ ವಿನಾಯಿತಿ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಸುಗಂಧಾ ಸಾಹ್ನಿ ಈ ಅರ್ಜಿಯನ್ನು ಸಲ್ಲಿಸಿದ್ದರು.
3. ಡಿಸೆಂಬರ್ 2021ರಿಂದ ರಾಷ್ಟ್ರೀಯ ಹೆದ್ದಾರಿ 44ರ ಶೇ. 60ರಿಂದ 70ರಷ್ಟು ಭಾಗದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೂ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿಗದಿ ಮತ್ತು ಸಂಗ್ರಹ) ನಿಯಮ 2008 ಅನ್ನು ಉಲ್ಲಂಘಿಸಿ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದರು.
4. ರಾಷ್ಟ್ರೀಯ ಹೆದ್ದಾರಿ 44ರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ವಾಹನಗಳ ಸಂಚಾರಕ್ಕೆ ಸರ್ವಿಸ್ ರಸ್ತೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ರಸ್ತೆಯಲ್ಲಿ ತೀಕ್ಷ್ಣವಾದ ತಿರುವುಗಳು, ಗುಂಡಿಗಳು ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದೆ.
5. ಪ್ರಯಾಣಿಕರು ಯಾವ ಗುಣಮಟ್ಟದ ಮೂಲಸೌಕರ್ಯಗಳಿಗೆ ಹಣ ಪಾವತಿಸಬೇಕೋ ಅದು ಸಿಗುತ್ತಿಲ್ಲ. ಹೀಗಾಗಿ ಅವರಿಂದ ಅನ್ಯಾಯದ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗಿ ಕಾರ್ಯಾರಂಭ ಮಾಡುವವರೆಗೆ ಸರಕಾರ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.