ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಛೀಮಾರಿ
ಜಿನೀವಾ (ಸ್ವಿಟ್ಜರ್ಲೆಂಡ್) – ಪಾಕಿಸ್ತಾನ ಒಂದು ವಿಫಲ ರಾಷ್ಟ್ರವಾಗಿದ್ದು, ಅಂತಾರಾಷ್ಟ್ರೀಯ ನೆರವಿನಿಂದ ಪೋಷಿಸಲ್ಪಡುತ್ತಿದೆ. ಪಾಕಿಸ್ತಾನವು ತನ್ನ ಸೇನೆ ಮತ್ತು ಭಯೋತ್ಪಾದಕ ಸಂಘಟನೆಗಳ ನಡುವಿನ ಮೈತ್ರಿಯನ್ನು ಮರೆಮಾಚುವ ಮೂಲಕ ತನ್ನ ವರ್ಚಸ್ಸನ್ನು ಹಾಳು ಮಾಡಿಕೊಳ್ಳುತ್ತಿದೆ ಹಾಗೂ ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ, ಎಂದು ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 58ನೇ ಅಧಿವೇಶನದಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿತು.
ಈ ಸಭೆಯಲ್ಲಿ, ಭಾರತದ ಪ್ರತಿನಿಧಿ ಕ್ಷಿತಿಜ್ ತ್ಯಾಗಿ ಪಾಕಿಸ್ತಾನವನ್ನು ಛೀಮಾರಿ ಹಾಕುತ್ತಾ,
1. ಪಾಕಿಸ್ತಾನದಿಂದ ನೀಡಲಾಗುವ ಪ್ರತಿಕ್ರಿಯೆಗಳು ದ್ವಂದ್ವತೆ ಮತ್ತು ಅಮಾನವೀಯತೆಯಿಂದ ಕೂಡಿವೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ ಮತ್ತು ಹಾಗೆಯೇ ಉಳಿಯುತ್ತವೆ. ಕಳೆದ ಕೆಲವು ವರ್ಷಗಳಲ್ಲಿ, ಈ ಪ್ರದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಮಟ್ಟದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿದೆ. ಭಾರತ ಸರಕಾರ ‘ಭಯೋತ್ಪಾದನಾ ಮುಕ್ತ ನೀತಿ’ಯನ್ನು ಅನುಸರಿಸುತ್ತಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ.
2. ಪಾಕಿಸ್ತಾನದ ನಾಯಕರು ತಮ್ಮ ಸೇನೆ ಮತ್ತು ಭಯೋತ್ಪಾದಕ ಸಂಘಟನೆಗಳ ನಡುವಿನ ಸಂಪರ್ಕವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನವು ‘ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್’ (ಒಐಸಿ) ಅನ್ನು ತನ್ನ ಮುಖವಾಣಿಯಾಗಿ ಬಳಸಿಕೊಳ್ಳುತ್ತಿದೆ. ಪಾಕಿಸ್ತಾನ ಅಸ್ಥಿರವಾಗಿದ್ದು, ಅಂತಾರಾಷ್ಟ್ರೀಯ ನೆರವಿನ ಮೇಲೆ ಅವಲಂಬಿಸಿದೆ. ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಯವನ್ನು ವ್ಯರ್ಥ ಮಾಡುತ್ತಿರುವುದು ದುರದೃಷ್ಟಕರವಾಗಿದೆ. ಭಾರತವು ಯಾವಾಗಲೂ ಪ್ರಜಾಪ್ರಭುತ್ವ, ಅಭಿವೃದ್ಧಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವುದಕ್ಕೆ ಒತ್ತು ನೀಡಿದೆ.
3. ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಮತ್ತು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಹೊಸಕಿ ಹಾಕಲಾಗುತ್ತಿದೆ.
4. ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ ನೀಡಿದೆ. ಪಾಕಿಸ್ತಾನವೇ ಸ್ವತಃ ಅಸ್ಥಿರ ಆಡಳಿತ ಪ್ರಕ್ರಿಯೆಯ ಬಲಿಪಶುವಾಗಿದೆ. ಹೀಗಿರುವಾಗ ಪಾಕಿಸ್ತಾನ ಬೇರೆ ದೇಶಗಳಿಗೆ ಪಾಠ ಕಲಿಸಬಾರದು. ಪಾಕಿಸ್ತಾನದ ಸ್ವಂತ ದೇಶದ ನಾಗರಿಕರ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಂಡು ಅದನ್ನು ಪರಿಹರಿಸಲು ಪ್ರಯತ್ನಿಸಬೇಕು.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಹೇಳಿದ್ದೇನು?
ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಅಜಮ್ ನಜೀರ್ ತರಾರ್ ಅವರು ವಿಶ್ವಸಂಸ್ಥೆಗೆ, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದು, ಇದನ್ನು ನಿಲ್ಲಿಸಬೇಕು. ಜನರ ಸ್ವ-ನಿರ್ಣಯದ ಹಕ್ಕನ್ನು ನಿರಂತರವಾಗಿ ನಿರಾಕರಿಸಲಾಗುತ್ತಿದೆ. (ಇದಕ್ಕೆ ಕಳ್ಳನಿಗೊಂದು ಪಿಳ್ಳೆ ನೆವ ಎಂದು ಕರೆಯಲಾಗುತ್ತದೆ! ಕಳೆದ 77 ವರ್ಷಗಳಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂದರ್ಭದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಜಗತ್ತು ಪ್ರತ್ಯಕ್ಷವಾಗಿ ನೋಡುತ್ತಿದೆ; ಆದರೆ ಪಾಕಿಸ್ತಾನ ಮಾತ್ರವಲ್ಲ, ಇಡೀ ಜಗತ್ತು ಮೌನವಾಗಿದೆ. ಇದೇ ಪಾಕಿಸ್ತಾನ ಭಾರತದ ಕಾಶ್ಮೀರದ ಬಗ್ಗೆ ಹೇಳಿಕೆ ನೀಡಲು ಪ್ರಯತ್ನಿಸುತ್ತಿದೆ! – ಸಂಪಾದಕರು)
ಸಂಪಾದಕೀಯ ನಿಲುವು
|