ಜಗತ್ತಿನ 86 ದೇಶಗಳಲ್ಲಿ 10 ಸಾವಿರ 152 ಭಾರತೀಯ ಕೈದಿಗಳಿದ್ದಾರೆ !

ನವದೆಹಲಿ – ಜಗತ್ತಿನ 86 ದೇಶಗಳ ಜೈಲುಗಳಲ್ಲಿ 10 ಸಾವಿರ 152 ಭಾರತೀಯ ಕೈದಿಗಳಿದ್ದಾರೆ. ಇವುಗಳಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದವರೂ ಸಹ ಸೇರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದರು.

1. ಅಮೇರಿಕ, ಅರ್ಜೆಂಟೀನಾ, ರಷ್ಯಾ, ಸ್ಪೇನ್, ಇಸ್ರೇಲ್, ಸೌದಿ ಅರೇಬಿಯಾ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ನೇಪಾಳ, ಪಾಕಿಸ್ತಾನ, ಚೀನಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ 86 ದೇಶಗಳಲ್ಲಿ ಬಂಧಿತರಾದ ಭಾರತೀಯರ ಅಂಕಿ-ಅಂಶಗಳು ಹೀಗಿವೆ: ಸೌದಿ ಅರೇಬಿಯಾದ ಜೈಲುಗಳಲ್ಲಿ 2 ಸಾವಿರ 633 ಕೈದಿಗಳು, ಯುನೈಟೆಡ್ ಅರಬ್ ಎಮಿರೇಟ್ಸ್ ಜೈಲುಗಳಲ್ಲಿ 2 ಸಾವಿರ 518 ಕೈದಿಗಳಿದ್ದಾರೆ. ಹಾಗೆಯೇ ನೇಪಾಳದ ಜೈಲುಗಳಲ್ಲಿ 1 ಸಾವಿರ 317 ಭಾರತೀಯ ನಾಗರಿಕರಿದ್ದಾರೆ. ಪಾಕಿಸ್ತಾನದಲ್ಲಿ 266 ಮತ್ತು ಶ್ರೀಲಂಕಾದಲ್ಲಿ 98 ಕೈದಿಗಳಿದ್ದಾರೆ.

2. “ಕತಾರ್ ನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ನಡೆದ ನಂತರ, ಕೇರಳದಿಂದ ತೆರಳಿದ ಬಹುಪಾಲು ನಾಗರಿಕರನ್ನು ಜೈಲಿಗೆ ಹಾಕಲಾಗಿದೆ ಎಂಬುದು ಸರಕಾರಕ್ಕೆ ತಿಳಿದಿದೆಯೇ?” ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸಚಿವರು, ವಿದೇಶಾಂಗ ಸಚಿವಾಲಯದ ಬಳಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕತಾರ್ ಜೈಲುಗಳಲ್ಲಿ 611 ಭಾರತೀಯ ಕೈದಿಗಳಿದ್ದಾರೆ ಎಂದು ಹೇಳಿದರು. ಆದಾಗ್ಯೂ, ಗೌಪ್ಯತೆಯ ಕಾನೂನಿನಿಂದಾಗಿ ಒಪ್ಪಿಗೆಯಿಲ್ಲದೆ ಕತಾರ್ ಸರಕಾರವು ಬಂಧಿತರ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ತಿಳಿಸಿದರು.

3. ವಿದೇಶಿ ಜೈಲುಗಳಲ್ಲಿರುವ ಭಾರತೀಯ ಕೈದಿಗಳಿಗೆ ಸಹಾಯ ಮಾಡಲು ಸರಕಾರ ಬದ್ಧವಾಗಿದೆ ಎಂದು ಕೀರ್ತಿವರ್ಧನ್ ಸಿಂಗ್ ಭರವಸೆ ನೀಡಿದರು. ವಿದೇಶದಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಿದಾಗ, ಆ ಮಾಹಿತಿಯನ್ನು ತಕ್ಷಣವೇ ಭಾರತೀಯ ರಾಯಭಾರ ಕಚೇರಿಗೆ ವರದಿ ಮಾಡಲಾಗುತ್ತದೆ. ನಂತರ, ವಿದೇಶಾಂಗ ಕಚೇರಿಯ ಅಧಿಕಾರಿಗಳು ತಕ್ಷಣವೇ ಜೈಲನ್ನು ಸಂಪರ್ಕಿಸಿ ಬಂಧಿತ ಭಾರತೀಯ ಪ್ರಜೆಗೆ ಸಹಾಯ ಮಾಡುತ್ತಾರೆ. ಬಂಧನದ ಕಾರಣವನ್ನು ಪರಿಶೀಲಿಸಿದ ನಂತರ ಅವನಿಗೆ ಕಾನೂನು ನೆರವು ನೀಡಲಾಗುತ್ತದೆ.