Indian MEA Advisory: ಸಿರಿಯಾ ತೊರೆಯಿರಿ ! –  ವಿದೇಶಾಂಗ ಸಚಿವಾಲಯ

ಭಾರತೀಯ ನಾಗರಿಕರಿಗೆ ವಿದೇಶಾಂಗ ಸಚಿವಾಲಯದಿಂದ ಕರೆ

ನವ ದೆಹಲಿ – ಮಧ್ಯ ಪೂರ್ವದ ಇಸ್ಲಾಮಿಕ್ ದೇಶ ಸಿರಿಯಾದಲ್ಲಿ ನವೆಂಬರ್ ೨೭ ರಿಂದ ಯಾದವಿ ಕಲಹ ಪ್ರಾರಂಭವಾಗಿದೆ. ಇಲ್ಲಿಯ ಬಂಡುಕೋರರು ೩ ಪ್ರಮುಖ ನಗರಗಳನ್ನು ವಶಕ್ಕೆ ಪಡೆದಿದ್ದಾರೆ. ಅವರು ರಾಜಧಾನಿ ದಮಾಸ್ಕಸ್ ಕಡೆಗೆ ಮುಂದುವರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವಾಲಯವು ಭಾರತೀಯರಿಗೆ ಮಾರ್ಗಸೂಚಿಗಳನ್ನು ನೀಡಿದ್ದು, ಭಾರತೀಯ ನಾಗರಿಕರನ್ನು ಜಾಗರೂಕತೆಯಿಂದ ಇರುವಂತೆ ಹೇಳಿದೆ. ಭಾರತೀಯ ನಾಗರಿಕರು ಸಿರಿಯಾಕ್ಕೆ ಪ್ರಯಾಣಿಸುವುದನ್ನು  ತಪ್ಪಿಸಬೇಕು ಎಂದು ಆದೇಶ ನೀಡಲಾಗಿದೆ. ಹಾಗೆಯೇ ಸಿರಿಯಾದಲ್ಲಿ ಇರುವ ಭಾರತೀಯ ನಾಗರಿಕರು ಆದಷ್ಟು ಬೇಗನೆ ಸಿರಿಯಾ ಬಿಡುವಂತೆ ಸೂಚಿಸಲಾಗಿದೆ.

ಸದ್ಯ ಸಿರಿಯಾದಲ್ಲಿರುವ ಭಾರತೀಯ ನಾಗರಿಕರು ದಮಾಸ್ಕಸ್ ನಗರದಲ್ಲಿರುವ ಭಾರತೀಯ ಉಚ್ಚಾಯುಕ್ತಾಲಯದೊಂದಿಗೆ ಸಂಪರ್ಕ ಸಾಧಿಸಬೇಕೆಂದು ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು ಮಾತನಾಡಿ, “ಸಿರಿಯಾದ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ನಿಗಾ ವಹಿಸುತ್ತಿದ್ದೇವೆ. ಸಿರಿಯಾದಲ್ಲಿ ೯೦ ಭಾರತೀಯ ನಾಗರಿಕರು ಇದ್ದಾರೆ, ಅವರಲ್ಲಿ ೧೪ ಮಂದಿ ವಿಶ್ವ ಸಂಸ್ಥೆಯ ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಗರಿಕರ ಭದ್ರತೆಗೆ ನಮ್ಮ ಪ್ರಮುಖ ಆದ್ಯತೆಯಾಗಿರಲಿದೆ.” ಎಂದು ಹೇಳಿದ್ದಾರೆ.