CM Governor Argument : ತಮಿಳು ಹಾಡಿನಲ್ಲಿ `ದ್ರವಿಡ’ ಪದ ತೆಗೆದಿದ್ದಕ್ಕೆ ತಮಿಳುನಾಡು ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ವಾಗ್ವಾದ !

ಚೆನ್ನೈ (ತಮಿಳುನಾಡು) – ತಮಿಳು ಹಾಡಿನಲ್ಲಿ `ದ್ರವಿಡ’ ಪದ ಕೈಬಿಟ್ಟಿದ್ದಕ್ಕೆ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಹಾಗೂ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ ಇವರ ನಡುವೆ ವಾಗ್ವಾದ ನಡೆದಿದೆ. ಮುಖ್ಯಮಂತ್ರಿ ಸ್ಟಾಲಿನ ಇವರು ಕೇಂದ್ರ ಸರಕಾರಕ್ಕೆ `ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು’ ಎಂದು ಆಗ್ರಹಿಸಿದರೇ ರಾಜ್ಯಪಾಲರು ನಾನು `ದ್ರವಿಡ’ ಪದ ಕೈಬಿಡುವಂತೆ ಹೇಳಿರುವ ಆರೋಪ ತಪ್ಪಾಗಿದೆ’ ಎಂದು ಹೇಳಿದ್ದಾರೆ.

ಏನಿದು ಪ್ರಕರಣ ?

ಚೆನ್ನೈ ದೂರದರ್ಶನ ಕೇಂದ್ರದಲ್ಲಿ ಹಿಂದಿ ಭಾಷಾ ತಿಂಗಳು ಆಚರಿಸಲು ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ರಾಜ್ಯಪಾಲರು ಉಪಸ್ಥಿತರಿದ್ದರು. ಆ ಸಮಯದಲ್ಲಿ ‘ತಮಿಳು ಥಾಯಿ ವಲ್ತು’ ಈ ತಮಿಳು ಹಾಡು ಹಾಡಲಾಗಿತ್ತು. ಈ ಹಾಡು ಹಾಡುವಾಗ `ಥೆಕ್ಕನಮುಮ ಆದಿಲ ಸಿರಂಥಾ ದ್ರವಿಡ ನಾಲ ಥಿರು ನಡೂಮ’ ಈ ಸಾಲು ಹಾಡಲಿಲ್ಲ. ಇದರಿಂದ ಮುಖ್ಯಮಂತ್ರಿ ಸ್ಟಾಲಿನ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ‘ದ್ರವಿಡ’ ಪದದ ‘ಅಲರ್ಜಿ’ಯಿಂದ ಬಳಲುತ್ತಿರುವ ರಾಜ್ಯಪಾಲರು ಈ ಪದವನ್ನು ರಾಷ್ಟ್ರಗೀತೆಯಿಂದಲೂ ತೆಗೆದುಹಾಕಬಹುದು. ತಮಿಳುನಾಡು ಮತ್ತು ಇಲ್ಲಿಯ ಜನರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ರಾಜ್ಯಪಾಲರನ್ನು ಸರಕಾರವು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು’ ಎಂದು ಬರೆದಿದ್ದರು. ಇನ್ನೊಂದೆಡೆ ದೂರದರ್ಶನ ಕೇಂದ್ರವು ಈ ಸಾಲನ್ನು ತಪ್ಪಾಗಿ ಹಾಡಲಾಗಿಲ್ಲವೆಂದು ಸ್ಪಷ್ಟೀಕರಣ ನೀಡಿದೆ.

1. ಈ ಪೋಸ್ಟ್‌ಗೆ ಉತ್ತರಿಸುವಾಗ ರಾಜ್ಯಪಾಲ ರವಿಯವರು, ‘ಮುಖ್ಯಮಂತ್ರಿಗಳು ನನ್ನ ವಿರುದ್ಧ ಜಾತಿ ವಿರೋಧಿ ಟೀಕೆಗಳನ್ನು ಮಾಡಿದ್ದಾರೆ ಮತ್ತು ನನ್ನ ಮೇಲೆ ತಮಿಳು ಹಾಡನ್ನು ಅವಮಾನಿಸಿರುವ ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ ಮುಖ್ಯಮಂತ್ರಿಯ ಹುದ್ದೆಯ ವರ್ಚಸ್ಸು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

2. ರಾಜ್ಯಪಾಲ ರವಿ ಅವರ ಪೋಸ್ಟ್‌ಗೆ ಉತ್ತರಿಸುವಾಗ ಮುಖ್ಯಮಂತ್ರಿ ಸ್ಟಾಲಿನ ಅವರು, ‘ಒಂದು ವೇಳೆ ನೀವು ನಿಜವಾಗಿಯೂ ತಮಿಳು ಹಾಡನ್ನು ಪೂರ್ಣ ಭಕ್ತಿಭಾವದಿಂದ ಹಾಡಿದ್ದರೆ, ಈ ಹಾಡು ವೇದಿಕೆಯಲ್ಲಿ ಪೂರ್ಣ ಹಾಡದೇ ಇದ್ದರೂ ನೀವು ಏಕೆ ಆಕ್ಷೇಪಣೆಯನ್ನು ವ್ಯಕ್ತಪಡಿಸಲಿಲ್ಲ ? ಎಂದು ಬರೆದಿದ್ದಾರೆ.

3. ಇದಾದ ನಂತರ, ರಾಜ್ಯಪಾಲರು ‘ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯು ಜಾತಿಯವಾದಿ ಗುಂಪಿನ ಕೈಗೊಂಬೆಯಾಗಿ, ತಮಿಳು ನೆಲದಲ್ಲಿ ಜಾತೀಯ ವಿಚಾರಗಳ ಬೀಜವನ್ನು ಬಿತ್ತುವ ವಿಚಾರವನ್ನು ಮಾಡುತ್ತಿದ್ದರೆ, ತಮಿಳುನಾಡಿನ ಜನತೆಯು ಈ ಕಲ್ಪನೆಯನ್ನು ತಿರಸ್ಕರಿಸುತ್ತಾರೆ, ಎಂದು ಬರೆದಿದ್ದಾರೆ,

4. ಮುಖ್ಯಮಂತ್ರಿ ಸ್ಟಾಲಿನ್ ಅವರು ಮೋದಿಯವರಿಗೆ ‘ಟ್ಯಾಗ್’ ಮಾಡುತ್ತಾ, (ಸೂಚಿಸುತ್ತಾ), ಭಾರತೀಯ ಸಂವಿಧಾನವು ಯಾವುದೇ ಭಾಷೆಗೆ ರಾಷ್ಟ್ರ ಭಾಷೆಯ ಸ್ಥಾನಮಾನವನ್ನು ನೀಡುವುದಿಲ್ಲ. ಬಹುಭಾಷಾ ರಾಷ್ಟ್ರದಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಭಾಷಾ ತಿಂಗಳನ್ನು ಆಚರಿಸುವುದು ಎಂದರೆ ಇತರ ಭಾಷೆಗಳ ಅವಮಾನವಾಗಿದೆ. ಆದ್ದರಿಂದ ಅಂತಹ ಘಟನೆಗಳನ್ನು ತಪ್ಪಿಸಬೇಕು, ಅದರ ಬದಲಾಗಿ ರಾಜ್ಯದಲ್ಲಿ ಸ್ಥಳೀಯ ಭಾಷೆಯ ತಿಂಗಳನ್ನು ಆಚರಿಸಲು ಪ್ರೋತ್ಸಾಹಿಸಿರಿ ಎಂದು ಸೂಚಿಸುತ್ತೇನೆ. ಭಾರತದಲ್ಲಿ 122 ಭಾಷೆಗಳಿವೆ. ಇತರೆ 1 ಸಾವಿರ 599 ಆಡುಭಾಷೆಗಳಿವೆ. ಭಾರತವು ವೈವಿಧ್ಯತೆಯಿಂದ ಕೂಡಿದ ದೇಶವಾಗಿರುವಾಗ, ಕೇವಲ ಒಂದೇ ಭಾಷೆಯನ್ನು ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ದೇಶದಲ್ಲಿ 1 ಸಾವಿರ 700 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆ, ವಿಶೇಷವಾಗಿ ನಮ್ಮ ರಾಜ್ಯದಲ್ಲಿ ತಮಿಳು ಇದು ಜಗತ್ತಿನ ಅತ್ಯಂತ ಹಳೆಯ ಮಾತನಾಡುವ ಭಾಷೆಯಾಗಿದೆ, ಆದ್ದರಿಂದ ಹಿಂದಿ ಭಾಷಾ ತಿಂಗಳನ್ನು ಆಚರಿಸುವುದು ದೇಶದಲ್ಲಿ ವೈವಿಧ್ಯತೆಯ ಮೇಲೆ ಪರಿಣಾಮ ಬೀರಬಹುದು. ಭಾರತದಲ್ಲಿ ರಾಷ್ಟ್ರೀಯ ಭಾಷೆ ಎಂಬುದು ಯಾವುದೂ ಇಲ್ಲ. ಸೆಪ್ಟೆಂಬರ್ 14, 1949 ರಂದು ಹಿಂದಿಯನ್ನು ದೇಶದ ಅಧಿಕೃತ ಭಾಷೆಯಾಗಿ ಘೋಷಿಸಿರುವುದರಿಂದ ಹಿಂದಿ ಭಾಷಾ ದಿನ ಮತ್ತು ಹಿಂದಿ ಭಾಷಾ ತಿಂಗಳುಗಳನ್ನು ಆಚರಿಸುವುದು ಸೂಕ್ತವಾಗಿರಬಹುದು, ಆದರೆ ತಮಿಳು ಭಾಷೆಯು ಆಚರಿಸಲು ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದಲ್ಲಿ ಹಲವು ಗಂಭೀರ ಸಮಸ್ಯೆಗಳಿರುವಾಗ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ ಇಂತಹ ವಿಷಯಗಳ ಬಗ್ಗೆ ವಾದ ಮಾಡಿ ತಮ್ಮ ಮತ್ತು ಸಾರ್ವಜನಿಕರ ಸಮಯ ವ್ಯರ್ಥ ಮಾಡುತ್ತಿದ್ದಾರೆ !