ಮುಸ್ಲಿಮರಿಗೆ ಆಸ್ಸಾಂ ಅನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ ! – ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ

ಗೌಹಾಟಿ (ಆಸ್ಸಾಂ) – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು 27 ಆಗಸ್ಟ್ 2024 ರಂದು ವಿಧಾನಸಭೆಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವಾಗ, ‘ಮಿಯಾ ಮುಸಲ್ಮಾನರಿಗೆ ಆಸ್ಸಾಂ ಅನ್ನು ವಶಕ್ಕೆ ಪಡೆಯಲು ಬಿಡುವುದಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಅವರು ವಿಧಾನಸಭೆಯಲ್ಲಿ ನಾಗಾಂವನಲ್ಲಿ 14 ವರ್ಷದ ಹುಡುಗಿಯೊಬ್ಬಳ ಮೇಲೆ ನಡೆದ ಅತ್ಯಾಚಾರದ ಘಟನೆಯ ಬಗ್ಗೆ ಮಾತನಾಡುತ್ತಿದ್ದರು. ಅವರ ಈ ಹೇಳಿಕೆಯ ಬಳಿಕ ವಿರೋಧಿಗಳು ಅವರ ಮೇಲೆ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಆಸ್ಸಾಂ ವಿಧಾನಸಭೆಯಲ್ಲಿ ವಿರೋಧಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ್ದರು. ಆ ಸಮಯದಲ್ಲಿ ಸಭಾಂಗಣದಲ್ಲಿ ನಡೆದ ಚರ್ಚೆಗೆ ಉತ್ತರಿಸುವಾಗ ಮುಖ್ಯಮಂತ್ರಿ ಸರಮಾ ಮಾತನಾಡಿ, ಜನಸಂಖ್ಯೆಯಲ್ಲಿ ಆಗಿರುವ ಹೆಚ್ಚಳವನ್ನು ನಿಯಂತ್ರಣದಲ್ಲಿಟ್ಟಿದ್ದರೆ ಇಂದು ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿರಲಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಗಳ ಹೇಳಿಕೆಯಿಂದ ಗಲಭೆ !

ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಈ ಹೇಳಿಕೆಯ ಬಳಿಕ ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದವು. ಎರಡೂ ಕಡೆಯ ಶಾಸಕರು ಸಭಾಧ್ಯಕ್ಷರ ಆಸನದ ಎದುರಿಗೆ ಬಂದಿದ್ದರಿಂದ ಸಭಾಧ್ಯಕ್ಷರು ಸಭೆಯ ಕಾರ್ಯಕಲಾಪವನ್ನು ಕೆಲವು ಸಮಯಕ್ಕಾಗಿ ಮುಂದೂಡಬೇಕಾಯಿತು.