ಮಲಯಾಳಿ ಬ್ರಾಹ್ಮಣ ಅರ್ಚಕರು ಇರಬೇಕು ಎನ್ನುವ ನಿಯಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ
ನವದೆಹಲಿ – ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದ ಮೇಲಶಾಂತಿ (ಮುಖ್ಯ ಅರ್ಚಕ) ಹುದ್ದೆಗೆ ಕೇವಲ ಮಲಯಾಳಿ ಬ್ರಾಹ್ಮಣರನ್ನು ನೇಮಿಸುವ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇರಳ ಸರಕಾರದಿಂದ ಉತ್ತರವನ್ನು ಕೋರಿದೆ. ತ್ರಾವಣಕೋರ ದೇವಸ್ವಂ ಮಂಡಳಿಯು ಒಂದು ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಅರ್ಹತಾ ಮಾನದಂಡಗಳಲ್ಲಿ ಮಲಯಾಳಿ ಬ್ರಾಹ್ಮಣನಾಗಿರುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿತ್ತು. ಇದನ್ನು ವಿರೋಧಿಸಿ ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲಿ ಆ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಈ ನಿರ್ಣಯವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ಮುಂದಿನ ವಿಚಾರಣೆ ಅಕ್ಟೋಬರ್ 25ರಂದು ನಡೆಯಲಿದೆ.
ಈ ಪ್ರಕರಣದಲ್ಲಿ ತ್ರಾವಣಕೋರ ದೇವಸ್ವಂ ಮಂಡಳಿಯು ಮೆಲಶಾಂತಿಗಾಗಿ ಮಾಡಿರುವ ನೇಮಕಾತಿಯ ವಿರುದ್ಧ ಇಬ್ಬರು ಬ್ರಾಹ್ಮಣೇತರ ಅರ್ಚಕರು ಕೇರಳ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೇರಳ ಉಚ್ಚನ್ಯಾಯಾಲಯವು ತ್ರಾವಣಕೋರ ದೇವಸ್ವಂ ಮಂಡಳಿ ಅಧಿಸೂಚನೆಯು ಅಸ್ಪ್ರಶ್ಯತೆಯನ್ನು ನಿರ್ಮಾಣಮಾಡಿದೆಯೆನ್ನುವ ಅರ್ಜಿದಾರರ ವಾದವನ್ನು ತಿರಸ್ಕರಿಸಿತ್ತು.