ಚಾರಧಾಮ ಯಾತ್ರೆಯ ಎರಡನೇ ದಿನ, ಯಮುನೋತ್ರಿಯ ಚಿಂಚೋಳಿಯ 4 ಕಿ.ಮೀ. ರಸ್ತೆಯಲ್ಲಿ ಭಾರೀ ಜನದಟ್ಟಣೆ

ಅದೃಷ್ಟವಶಾತ್, ಯಾವುದೇ ಅಪಘಾತ ನಡೆದಿಲ್ಲ!

ಡೆಹರಾಡೂನ (ಉತ್ತರಾಖಂಡ) – ಮೇ 10 ರಿಂದ ಚಾರಧಾಮ್ ಯಾತ್ರೆ ಪ್ರಾರಂಭವಾದ ಮರುದಿನ 22 ಸಾವಿರ ಭಕ್ತರು ಕೇದಾರನಾಥವನ್ನು ತಲುಪಿದರೇ ಗಂಗೋತ್ರಿಗೆ 5 ಸಾವಿರದ 277 ಭಕ್ತರು ತಲುಪಿದ್ದಾರೆ. ಇದೇ ಸಮಯದಲ್ಲಿ ಯಮುನೋತ್ರಿಯ 5-6 ಅಡಿ ಅಗಲದ ಚಿಂಚೋಳಿ ಮಾರ್ಗದಲ್ಲಿ 4 ಕಿ.ಮೀ.ವರೆಗೆ 8 ಸಾವಿರ ಭಕ್ತರು ಆಗಮಿಸಿದ್ದರಿಂದ ಅಪಾರ ಜನದಟ್ಟಣೆಯಾಗಿತ್ತು.

ವಾಸ್ತವವಾಗಿ, ಈ ಮಾರ್ಗದ ಸಾಮರ್ಥ್ಯವು ಒಂದು ಬಾರಿಗೆ ಕೇವಲ 1-2 ಸಾವಿರ ಜನರು ಪ್ರಯಾಣಿಸುವಷ್ಟಿದೆ. ಇಂತಹ ಸ್ಥಿತಿಯಲ್ಲಿ ಇಲ್ಲಿ ಕಾಲ್ತುಳಿತ ನಡೆಯದಿರುವುದು ಅದೃಷ್ಟವೆನ್ನಲಾಗಿದೆ. ಆಡಳಿತವು ಜನದಟ್ಟಣೆಯನ್ನು ನಿಯಂತ್ರಿಸಲು ಯಾವುದೇ ಉಪಾಯ ಯೋಜನೆ ಕೈಕೊಂಡಿರಲಿಲ್ಲ ಎನ್ನುವುದು ಬಹಿರಂಗವಾಯಿತು. ಈ ಘಟನೆಯಿಂದಾಗಿ ಮೂರನೇ ದಿನ ಅಂದರೆ ಮೇ 12 ರಂದು ಯಮುನೋತ್ರಿಗೆ ತೆರಳದಂತೆ ಆಡಳಿತವು ಭಕ್ತರಿಗೆ ಮನವಿ ಮಾಡಿದೆ.

(ಸೌಜನ್ಯ –  Zee Bihar Jharkhand)

ಸಮುದ್ರ ಮಟ್ಟದಿಂದ 10ಸಾವಿರ 797 ಅಡಿ ಎತ್ತರದಲ್ಲಿರುವ ಜಾನಕಿ ಚಟ್ಟಿಯಿಂದ ಯಮುನೋತ್ರಿ ದೇವಸ್ಥಾನದವರೆಗಿನ ಮಾರ್ಗವು ಜನದಟ್ಟಣೆಯಿಂದ ಕೂಡಿತ್ತು. ಒಂದೆಡೆ ಪರ್ವತ, ಇನ್ನೊಂದೆಡೆ ಆಳವಾದ ಕಂದಕ. ಜೊತೆಗೆ ಮಳೆ ಮತ್ತು ಕೊರೆಯುವ ಚಳಿ. ಜನಸಂದಣಿಯಲ್ಲಿ ಮಕ್ಕಳು, ಮುದುಕರು, ಮಹಿಳೆಯರು ಮತ್ತು ನೂರಾರು ಹೇಸರಗತ್ತೆಗಳು ಇದ್ದವು. ಒಂದೇ ಒಂದು ಹೇಸರಗತ್ತೆ ದಾರಿ ತಪ್ಪಿದ್ದರೂ ಸಾವಿರಾರು ಜನರ ಜೀವ ಸಂಕಷ್ಟಕ್ಕೆ ಸಿಲುಕುತ್ತಿತ್ತು. ಸುಮಾರು 24 ಗಂಟೆಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಿತು. ಕೊನೆಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ ಪರಿಸ್ಥಿತಿ ನಿಭಾಯಿಸಿದೆ. ಈ ಜನದಟ್ಟಣೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.