ಪಾಟಲಿಪುತ್ರ (ಬಿಹಾರ) – ನಾನು ಕ್ಷಮೆಯಾಚಿಸುತ್ತೇನೆ. ನಾನು ನನ್ನ ಮಾತುಗಳನ್ನು ಹಿಂಪಡೆಯುತ್ತೇನೆ. ನಾನು ಹೇಳಿದ್ದು ತಪ್ಪಾಗಿದ್ದರೆ ಅಥವಾ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆಯನ್ನು ಯಾರಾದರೂ ಟೀಕಿಸುತ್ತಿದ್ದರೆ, ನಾನು ಖೇದವನ್ನು ವ್ಯಕ್ತಪಡಿಸುತ್ತೇನೆ. ನಾನು ನನ್ನನ್ನೇ ದೂಷಿಸಿ ಕೊಳ್ಳುತ್ತಿದ್ದೇನೆ. ಇದಾದ ನಂತರವೂ ಯಾರಾದರೂ ನನ್ನನ್ನು ಟೀಕಿಸಿದರೆ ಅವರನ್ನು ಅಭಿನಂದಿಸುತ್ತೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಜನಸಂಖ್ಯೆ ನಿಯಂತ್ರಣದ ಕುರಿತು ನೀಡಿದ ಒಂದು ಆಕ್ಷೇಪಾರ್ಹ ಹೇಳಿಕೆಯ ಕುರಿತು ಕ್ಷಮೆಯಾಚಿಸಿದರು. ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಮತ್ತು ವಿಧಾನಸಭೆಯ ಹೊರಗೆ ಕೈ ಜೋಡಿಸಿ ಕ್ಷಮೆಯಾಚಿಸಿದರು. ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದೆ, ಶಿಕ್ಷಣದ ನಂತರ ಜನಸಂಖ್ಯೆಯ ವೃದ್ಧಿಯಲ್ಲಿ ಆಗುವ ಬದಲಾವಣೆಯನ್ನು ಹೇಳುವುದಷ್ಟೇ ತಮ್ಮ ಉದ್ದೇಶವಾಗಿತ್ತು ಎಂದು ನಿತೀಶ ಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಕ್ಷಮೆ ಯಾಚಿಸುತ್ತಿರುವಾಗ ಬಿಜೆಪಿ ಶಾಸಕರು ಗದ್ದಲ ಆರಂಭಿಸಿದರು. ಅವರು ಸಭಾಂಗಣದಲ್ಲಿ ಕುರ್ಚಿಗಳನ್ನು ಎತ್ತಿಕೊಂಡರು. ಗಲಾಟೆಯಿಂದಾಗಿ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯಕಲಾಪ ಸ್ಥಗಿತಗೊಂಡಿತ್ತು.
ಬಿಹಾರ ವಿಧಾನಮಂಡಲದ ಉಭಯ ಸದನಗಳಲ್ಲಿ ನವೆಂಬರ್ 7 ರಂದು ಮಂಡಿಸಲಾದ ಜಾತಿ-ಆರ್ಥಿಕ ಸಮೀಕ್ಷೆ ವರದಿಯ ಮೇಲಿನ ಚರ್ಚೆಯ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಉತ್ತರಿಸುತ್ತಿದ್ದರು. ಒಂದು ವೇಳೆ ಮಹಿಳೆಯರು ಶಿಕ್ಷಣ ಪಡೆದರೆ, ಜನನ ಪ್ರಮಾಣ ಕಡಿಮೆಯಾಗುತ್ತದೆಯೆನ್ನುವುದು ಅವರ ಹೇಳಿಕೆಯಾಗಿತ್ತು. ಈ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರು ಪತಿ-ಪತ್ನಿಯ ನಡುವಿನ ದೈಹಿಕ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿದ್ಯಾವಂತ ಪತ್ನಿ ಗರ್ಭ ಧರಿಸುವ ಸಾಧ್ಯತೆಯನ್ನು ತಪ್ಪಿಸುತ್ತಾಳೆ , ಪರಿಣಾಮವಾಗಿ, ಜನನ ಪ್ರಮಾಣ ಕಡಿಮೆಯಾಗಿದೆ ಎಂದು ಆ ಮೂಲಕ ನಿತೀಶ್ ಕುಮಾರ ಅವರು ಹೇಳಬಯಸಿದ್ದರು; ಆದರೆ ಅವರ ಶಬ್ದಗಳು ಆಕ್ಷೇಪಾರ್ಹವಾಗಿತ್ತು. ಈ ಕಾರಣದಿಂದ ಅವರ ಹೇಳಿಕೆ ಬಗ್ಗೆ ಟೀಕೆಗಳು ಆಗತೊಡಗಿದವು. ವಿಧಾನಪರಿಷತ್ ನ ಭಾಜಪ ಮಹಿಳಾ ಸದಸ್ಯೆ ನಿವೇದಿತಾ ಸಿಂಹ ಇವರು ನಿತೀಶ್ ಕುಮಾರ್ ಹೇಳಿಕೆಯಿಂದ ಅಳಲು ಪ್ರಾರಂಭಿಸಿದರು. ಇಂದು ನಮಗೆ ನಾಚಿಕೆಯೆನಿಸಿತು ಎಂದು ಹೇಳಿದರು.
* ಕ್ಷಮೆ ಕೇಳುವುದು ಪರಿಹಾರವಲ್ಲ! – ರಾಷ್ಟ್ರೀಯ ಮಹಿಳಾ ಆಯೋಗ
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಅವರು ಯಾವ ರೀತಿ ಹೇಳಿಕೆ ನೀಡಿದರೋ ಅದು ‘ಸಿ ಗ್ರೇಡ್’ ಚಿತ್ರದ ಸಂಭಾಷಣೆಯಂತೆ ಎನಿಸುತ್ತಿತ್ತು ಎಂದು ಹೇಳಿದ್ದಾರೆ. ಅವರು ವಿಧಾನಸಭೆಯಲ್ಲಿದ್ದ ಎಲ್ಲ ಮಹಿಳೆಯರು ಮತ್ತು ಪುರುಷರ ಸಮ್ಮುಖದಲ್ಲಿಯೇ ಈ ಹೇಳಿಕೆ ನೀಡಿದ್ದು ಮತ್ತು ಎಲ್ಲಕ್ಕಿಂತ ದುಃಖದ ವಿಷಯವೆಂದರೆ ಅಲ್ಲಿ ಕುಳಿತಿದ್ದ ಜನರು ನಗುತ್ತಿದ್ದರು. ಅವರು ಇಂದು ಕ್ಷಮೆಯಾಚಿಸಿದ್ದಾರೆ; ಆದರೆ ಕೇವಲ ಕ್ಷಮೆ ಕೇಳುವುದು ಪರಿಹಾರವಲ್ಲ. ಅವರ ವಿರುದ್ಧ ವಿಧಾನಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ನಾಯಕ ಸುಶೀಲ್ ಮೋದಿಯವರು ಮಾತನಾಡಿ ನಿತೀಶ್ ಕುಮಾರ್ ಕ್ಷಮೆಯಾಚಿಸಿದರೂ ಅವರ ಹೇಳಿಕೆಯು ಸಂಪೂರ್ಣ ಬಿಹಾರಕ್ಕೆ ನಾಚಿಕೆ ತಂದಿದೆ ಎಂದು ಹೇಳಿದ್ದಾರೆ. ಅಂತಹ ಹೇಳಿಕೆ ನೀಡಲು ಅವರಿಗೆ ಎಷ್ಟು ಧೈರ್ಯ ಹೇಗೆ ಬಂತು ? ಅವರು ಕೇವಲ ಕ್ಷಮೆಯನ್ನು ಕೇಳಿದ ಮಾತ್ರಕ್ಕೆ ಸಾಕಾಗುವುದಿಲ್ಲ. ಎಲ್ಲಾ ಮಹಿಳೆಯರ ಮುಂದೆ ಕೈ ಜೋಡಿಸಿ ನಿಲ್ಲಬೇಕು ಎಂದರು.