‘ರಷ್ಯಾ-ಉಕ್ರೇನ್ ಯುದ್ಧ : ಭಾರತದ ಮೇಲಾಗುವ ಪರಿಣಾಮವೇನು ?’ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ
ರಷ್ಯಾ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವಾಗಲೂ ಭಾರತದ ಪರವಾಗಿ ನಿಂತಿದೆ. ಬಿಕ್ಕಟ್ಟಿನ ಸಮಯದಲ್ಲಿ ಭಾರತಕ್ಕೆ ಸಹಾಯ ಮಾಡಿದೆ. ಕಾಶ್ಮೀರ ಗಡಿವಿವಾದ, ಕಲಮ್ ೩೭೦ ವಿಷಯದಲ್ಲಿಯೂ ಸಹ ಭಾರತವನ್ನು ಬೆಂಬಲಿಸಿದೆ. ಭಾರತಕ್ಕೆ ಯಾವಾಗಲೂ ಶಸ್ತ್ರಾಸ್ತ್ರಗಳನ್ನು ನೀಡಿದೆ. ತದ್ವಿರುದ್ಧ ಉಕ್ರೇನ್ ಯಾವಾಗಲೂ ಭಾರತದ ವಿರುದ್ಧ ನಿಲುವು ತಳೆದಿದೆ. ಉಕ್ರೇನ್ ಮೇಲೆ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಭಾರತವು ‘ಉಕ್ರೇನ್ ಪರವಾಗಿ ನಿಲ್ಲಬೇಕು’, ಎಂದು ಭಾರತದ ಮೇಲೆ ಒತ್ತಡ ಹೇರಲಾಗುತ್ತಿದ್ದರೂ, ಇದನ್ನು ನೇರವಾಗಿ ಮಾಡಲು ಸಾಧ್ಯವಿಲ್ಲ. ಅಲ್ಲದೆ, ನಮ್ಮ ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಉಳಿಸುವುದು ಮುಖ್ಯವಾಗಿರುವುದರಿಂದ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತ ಎಚ್ಚರಿಕೆಯ ನಿಲುವು ತಳೆಯಬೇಕು ಮತ್ತು ಭಾರತದ ಹಿತದೃಷ್ಟಿಯಿಂದ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕು, ಎಂದು ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಜಗತಬೀರ್ ಸಿಂಗ್ ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ರಷ್ಯಾ-ಉಕ್ರೇನ್ ಯುದ್ಧ : ಭಾರತದ ಮೇಲಾಗುವ ಪರಿಣಾಮವೇನು ?’ ಈ ಕುರಿತು ‘ಆನಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಈ ವೇಳೆ ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ವಿ.ಕೆ. ಸಿಂಗ್ ಇವರು ಮಾತನಾಡುತ್ತಾ, ರಷ್ಯಾದ ಮೇಲೆ ನ್ಯಾಟೋದ ಸದಸ್ಯರು ಹೇರಿರುವ ಕಠಿಣ ಆರ್ಥಿಕ ನಿರ್ಬಂಧಗಳು ಮತ್ತು ವ್ಯಾಪಾರದ ಬಹಿಷ್ಕಾರಕ್ಕೆ ಪ್ರತ್ಯುತ್ತರವೆಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಪರಮಾಣು ದಾಳಿಯ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಶತ್ರು ರಾಷ್ಟ್ರಗಳು ಅವರ ಮೇಲೆ ದಾಳಿ ಮಾಡಲು ಮುಂದಾಗಲಾರರು. ಭಾರತವೂ ಪಾಕಿಸ್ತಾನದಲ್ಲಿ ನುಗ್ಗಿ ಯುದ್ಧಕ್ಕೆ ಮುಂದಾದರೆ ಅಣ್ವಸ್ತ್ರ ಬಳಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕುತ್ತಿರುತ್ತದೆ. ಅದೇ ರೀತಿ ರಷ್ಯಾ ಮಾಡಿದೆ ಎಂದು ಹೇಳಿದರು.
ಆ ಸಮಯದಲ್ಲಿ, ಭಾರತೀಯ ಸೇನೆಯ ನಿವೃತ್ತ ಕರ್ನಲ್ ರಾಜೇಂದ್ರ ಶುಕ್ಲಾ ಅವರು ಮಾತನಾಡುತ್ತಾ, ಇತ್ತೀಚಿನ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ರಷ್ಯಾಗಾದ ಯುದ್ಧಸಾಮಗ್ರಿಗಳ ವೆಚ್ಚ ಮತ್ತು ಪಾಶ್ಚಿಮಾತ್ಯ ದೇಶಗಳು ಅದರ ಮೇಲೆ ವಿಧಿಸಿದ ನಿರ್ಬಂಧಗಳಿಂದ ರಷ್ಯಾಗೆ ಮೇಲೆ ಭಾರಿ ಆರ್ಥಿಕ ಪರಿಣಾಮ ಬೀರಲಿದೆ. ರಷ್ಯಾ ಜಾಗತಿಕವಾಗಿ ಬಹುದೊಡ್ಡ ನಷ್ಟವನ್ನು ಅನುಭವಿಸುತ್ತದೆ. ರಷ್ಯಾದ ಮೇಲಿನ ಆರ್ಥಿಕ ನಿರ್ಬಂಧಗಳಿಂದಾಗಿ, ಭಾರತಕ್ಕೆ ‘ಎಸ್-400’ ಈ ವಿಮಾನ ಮತ್ತು ಕ್ಷಿಪಣಿ ವಿರೋಧಿ ತಂತ್ರಜ್ಞಾನ ಮತ್ತು ಇತರ ಯುದ್ಧಸಾಮಗ್ರಿಗಳನ್ನು ರಷ್ಯಾದಿಂದ ಪಡೆಯಲು ಯಾವುದೇ ತೊಂದರೆಯಾಗುವುದಿಲ್ಲ. ಬಹುಶಃ ಯುದ್ಧದಿಂದಾಗಿ ಅದನ್ನು ಪಡೆಯಲು ಸ್ವಲ್ಪ ಮಟ್ಟಿಗೆ ತಡವಾಗಬಹುದು; ಕೇವಲ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರಿಂದಾಗಿ ವಿಶ್ವದಲ್ಲಿ ಭಾರತದ ಸ್ಥಾನ ಮೊದಲಿಗಿಂತ ಉತ್ತಮವಾಗಿದೆ. ಅವರು ಸಮತೋಲನವನ್ನು ಕಾಯ್ದುಕೊಂಡು ನಿಲುವನ್ನು ನಿರ್ಧರಿಸುತ್ತಿದ್ದಾರೆ. ರಷ್ಯಾ ಮತ್ತು ಭಾರತವು ಸಾಂಪ್ರದಾಯಿಕ ಸ್ನೇಹವನ್ನು ಹೊಂದಿದೆ ಹಾಗೂ ಕಷ್ಟದ ಸಮಯದಲ್ಲಿ ರಷ್ಯಾ ಭಾರತಕ್ಕೆ ಸಹಾಯ ಮಾಡಿದೆ ಎಂಬುದನ್ನು ಭಾರತವೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.