ಇಂತಹ ವೈದ್ಯರ ವೈದ್ಯಕೀಯ ಪದವಿಯನ್ನು ತೆಗೆದುಹಾಕಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !
ಬೆಂಗಳೂರು – ನಗರದಲ್ಲಿ ನಕಲಿ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಮಾರಾಟ ಮಾಡಿದ ಖಾಸಗಿ ಆಸ್ಪತ್ರೆಯ ವೈದ್ಯ. ಡಾ.ಸಾಗರ ಮತ್ತು ವಾರ್ಡ್‍ಬಾಯ್ ಕೃಷ್ಣ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ‘ರೋಹಿತ್’ ಎಂಬ ಹೆಸರಿನಲ್ಲಿ ಸರಕಾರದಿಂದ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ತರಿಸುತ್ತಿದ್ದರು ಮತ್ತು ಅವುಗಳಲ್ಲಿ ಅರ್ಧವನ್ನು ರೋಗಿಗಳಿಗಾಗಿ ಬಳಸಲಾಗುತ್ತಿತ್ತು ಮತ್ತು ಉಳಿದವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅವರು ಖಾಲಿ ರೆಮ್‌ಡೆಸಿವಿರ್ ಬಾಟಲಿಗಳಲ್ಲಿ ಗ್ಲೂಕೋಸ್ ಅನ್ನು ತುಂಬಿಸಿ ೨೦,೦೦೦ ರೂಪಾಯಿಗೂ ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿದ್ದರು. ಈ ಹಿಂದೆ ರೆಮ್ಡೆಸಿವಿರ್ ಅನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಮುನಿರಾಜ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ವಾರ್ಡ್‍ಬಾಯ್ ಕೃಷ್ಣನ ಹೆಸರನ್ನು ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಆ ನಂತರ ಕೃಷ್ಣನನ್ನು ವಿಚಾರಣೆಗೊಳಪಡಿಸಿದಾಗ ಇದರಲ್ಲಿ ಮುಖ್ಯ ವೈದ್ಯ ಡಾ.ಸಾಗರ ಇವರ ಹೆಸರು ಬಹಿರಂಗವಾಗಿದೆ.