ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಧಾರ್ಮಿಕ ಪರಿಷತ್ ಸದಸ್ಯರಾದ ಮಹರ್ಷಿ ಆನಂದ ಗುರೂಜಿಯವರ ಭೇಟಿ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಅವ್ಯವಹಾರ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಮನವಿ

ಶ್ರೀ ಮಹರ್ಷಿ ಆನಂದ ಗುರೂಜಿಯವರಿಗೆ ವಿವರಿಸುತ್ತಿರುವ ಶ್ರೀ. ಮೋಹನ ಗೌಡ

ಬೆಂಗಳೂರು : ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಅವ್ಯವಹಾರಗಳ ತನಿಖೆ ಮಾಡಲು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದಿಂದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀ ಮಹರ್ಷಿ ಆನಂದ ಗುರೂಜಿಯವರಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಮನ್ವಯಕರಾದ ಶ್ರೀ. ಮೋಹನ ಗೌಡ, ಹಿಂದುತ್ವವಾದಿ ಪುರಂದರ ನಾಯ್ಡು, ರಾಧಾ ನಾಯ್ಡು, ವಕೀಲರಾದ ಸೌ. ಶಕುಂತಲಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ‘ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತದಲ್ಲಿ ನಡೆದ ಅವ್ಯವಹಾರಗಳನ್ನು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಪಡೆಯಲಾಗಿದ್ದು ೨೧.೮೦ ಕೋಟಿ ರೂಪಾಯಿಗಳ ವ್ಯವಹಾರವು ಸಂಶಯಾಸ್ಪದವಾಗಿದೆ ಮತ್ತು ಕೊಟ್ಯಂತರ ಮೌಲ್ಯದ ಚಿನ್ನದ ಲೂಟಿಯಾಗಿದೆ. ಕೊಟ್ಯಂತರ ರೂಪಾಯಿಗಳ ಮುಂಗಡ ಹಣದ ಲೆಕ್ಕ ಇಲ್ಲ. ದೇವಳದ ಆಸ್ತಿಯ ಲೆಕ್ಕಪತ್ರದ ದಾಖಲೆಗಳು ಇಲ್ಲ ಎಂದು ಹೇಳಿ ಅದನ್ನು ಮಹರ್ಷಿ ಆನಂದ ಗುರೂಜಿಯವರ ಗಮನಕ್ಕೆ ತರಲಾಯಿತು. ಅದಕ್ಕೆ ಸ್ಪಂದಿಸಿದ ಮಹರ್ಷಿ ಆನಂದ ಗುರೂಜಿ ಇವರು ನಾನು ಸರಕಾರದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯನಾಗಿ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.