ಮತಾಂತರಗೊಳ್ಳದ ಕಾರಣಕ್ಕಾಗಿ ನೌಕರಿಯಿಂದ ವಜಾ !
|
ಖಜುರಾಹೊ (ಮಧ್ಯಪ್ರದೇಶ) – ಖಜುರಾಹೊದಲ್ಲಿ ಕ್ಯಾಥೊಲಿಕ್ ಚರ್ಚ್ ನಡೆಸುತ್ತಿರುವ ಸೆಕ್ರೆಟ್ ಹಾರ್ಟ್ ಕಾನ್ವೆಂಟ್ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಭಾಗ್ಯ ಅವರು ಶಾಲಾ ಗ್ರಂಥಪಾಲಕಿ ರೂಬಿ ಸಿಂಗ್ ಮೇಲೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ. ರೂಬಿ ಸಿಂಗ್ ಬಡವರಾಗಿರುವುದನ್ನು ನೋಡಿ ಅವರ ಸಂಬಳವನ್ನು ತಡೆಹಿಡಿಯಲಾಯಿತು ಮತ್ತು ಮತಾಂತರಗೊಳ್ಳುವಂತೆ ಒತ್ತಡ ಹೇರಲಾಯಿತು. ಸಿಸ್ಟರ್ ಭಾಗ್ಯ ಇವರು ಹಿಂದೂ ಧರ್ಮವನ್ನೂ ಅವಮಾನಿಸಿದ್ದರು ಎಂದು ಆರೋಪಿಸಲಾಗಿದೆ. ರೂಬಿ ಸಿಂಗ್ ಅವರು ಮತಾಂತರಗೊಂಡರೆ, ಅವರ ಸಂಬಳವನ್ನು ಹೆಚ್ಚಿಸುವ ಮತ್ತು ಅವರ ಕೆಲಸವನ್ನು ಶಾಶ್ವತಗೊಳಿಸುವುದಾಗಿಯೂ ಆಮಿಷ ಒಡ್ಡಿದ್ದರು. ರೂಬಿ ಸಿಂಗ್ ಮತಾಂತರಗೊಳ್ಳಲು ನಿರಾಕರಿಸಿದ ನಂತರ ಅವರನ್ನು ವಜಾ ಮಾಡಲಾಯಿತು. ಅವರು ಕಳೆದ ೪ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟನೆಯ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳಿಗೆ ಮಾಹಿತಿ ದೊರೆತಾಗ ಅವರು ರೂಬಿ ಸಿಂಗ್ ಅವರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಂತರ ಅಪರಾಧ ದಾಖಲಾಗಿದೆ.
ಮತ್ತೊಂದೆಡೆ ಮಧ್ಯಪ್ರದೇಶ ಕ್ಯಾಥೊಲಿಕ್ ಚರ್ಚಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾರಿಯಾ ಸ್ಟೀಫನ್ ಇವರು, ‘ಮಿಷನರಿ ಶಾಲೆಯನ್ನು ಗುರಿಯಾಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಂದ ದೂರುಗಳು ಬಂದ ನಂತರವೇ ರೂಬಿ ಸಿಂಗ್ ಅವರನ್ನು ವಜಾ ಮಾಡಲಾಯಿತು. ಈ ಮೊದಲು ಅವರಿಗೆ ಎಚ್ಚರಿಕೆ ನೀಡಲಾಗಿತ್ತು; ಆದರೆ ಯಾವುದೇ ಸುಧಾರಣೆಯಾಗದ ಕಾರಣ ಕ್ರಮ ಕೈಗೊಳ್ಳಲಾಗಿದೆ’, ಎಂದು ಹೇಳಿದರು.