ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಣೆ ಆದಾಯ ತೆರಿಗೆಯಲ್ಲಿ ಹೊಸ ವಿನಾಯಿತಿ ಇಲ್ಲ!

  • ೧೦೦ ಹೊಸ ಸೈನಿಕ ಶಾಲೆಗಳನ್ನು ನಿರ್ಮಿಸಲಾಗುವುದು
  • ಕೃಷಿ ಉತ್ಪನ್ನಗಳಿಗೆ ಒಂದೂವರೆ ಪಟ್ಟು ಬೆಂಬಲಬೆಲೆ ನೀಡಲಾಗುವುದು
  • ೨ ಹೊಸ ಲಸಿಕೆಗಳು ಕರೋನಾದಲ್ಲಿ ಲಭ್ಯವಿರಲಿವೆ
  • ಎಲ್‌ಐಸಿ, ಏರ್ ಇಂಡಿಯಾ, ಐಡಿಬಿಐ ಬ್ಯಾಂಕ್ ಇತ್ಯಾದಿಗಳನ್ನು ಖಾಸಗೀಕರಣಗೊಳಿಸಲಾಗುವುದು

ನವ ದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಫೆಬ್ರವರಿ ೧ ರಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಿದರು. ಸಾಮಾನ್ಯವಾಗಿ ಜನರು ನಿರೀಕ್ಷಿಸುವಂತಹ ಆದಾಯ ತೆರಿಗೆಯಲ್ಲಿ ಯಾವುದೇ ಹೊಸ ರಿಯಾಯ್ತಿಯನ್ನು ನೀಡಲಾಗಿಲ್ಲ ಎಂದು ಸಾರ್ವಜನಿಕರು ನಿರಾಶೆಗೊಂಡಿದ್ದಾರೆ; ಆದಾಗ್ಯೂ, ೭೫ ವರ್ಷಕ್ಕಿಂತ ಮೇಲ್ಪಟ್ಟವರಿಗೆ ‘ಐಟಿ ರಿಟರ್ನ್ಸ್’ನಿಂದ ವಿನಾಯಿತಿ ನೀಡಲಾಗಿದೆ. ಪ್ರಸ್ತುತ ಕರೋನಾ ಯುಗವನ್ನು ನೋಡಿದರೆ, ಆರೋಗ್ಯ ಕ್ಷೇತ್ರಕ್ಕೆ ಈ ವರ್ಷ ಮೂರು ಪಟ್ಟು ಅಂದರೆ ೨,೨೩,೮೪೬ ಕೋಟಿ ರೂ.ಏರ್ಪಾಡು ಮಾಡಲಾಗಿದೆ. ಈ ಮೊದಲು ಈ ಏರ್ಪಾಡು ಕೇವಲ ೯೪,೦೦೦ ಕೋಟಿ ರೂ.ಗಳಷ್ಟಿತ್ತು. ಇದಲ್ಲದೆ ಕರೋನಾ ವ್ಯಾಕ್ಸಿನೇಷನ್‌ಗಾಗಿ ೩೫,೦೦೦ ಕೋಟಿ ರೂ.ಗಳ ಏರ್ಪಾಡು ಮಾಡಲಾಗಿದ್ದು, ಇನ್ನೂ ಎರಡು ಕರೋನಾ ಲಸಿಕೆಗಳು ಲಭ್ಯವಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಇವರು ಮಾಹಿತಿ ನೀಡಿದರು. ೨೦೨೦-೨೧ನೇ ಸಾಲಿನಲ್ಲಿ ದೇಶದ ಹಣಕಾಸಿನ ಕೊರತೆ ಜಿಡಿಪಿಯು ಶೇಕಡಾ ೯.೫ ರಷ್ಟಿದೆ ಎಂದು ಹಣಕಾಸು ಸಚಿವರು ಹೇಳಿದರು. ಇದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಮೂರನೇ ಬಜೆಟ್ ಮಂಡನೆಯಾಗಿದ್ದು, ಮೊದಲ ಬಾರಿಗೆ ‘ಕಾಗದರಹಿತ’ ಬಜೆಟ್‌ಅನ್ನು ಮಂಡಿಸಲಾಯಿತು. ಇದಕ್ಕಾಗಿ ಸೀತಾರಾಮನ್ ಇವರು ’ಮೇಕ್ ಇನ್ ಇಂಡಿಯಾ’ ಟ್ಯಾಬ್ ಬಳಸಿದ್ದಾರೆ.

ಅಗ್ಗ

ಚಿನ್ನ-ಬೆಳ್ಳಿ ಆಭರಣಗಳು, ಚರ್ಮದ ಸರಕುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಪಾತ್ರೆಗಳು

ದುಬಾರಿ

ಮೊಬೈಲ್ ಫೋನ್‌ಗಳು, ಚಾರ್ಜರ್‌ಗಳು, ಹೆಡ್‌ಫೋನ್‌ಗಳು, ಪೆಟ್ರೋಲ್, ಡೀಸೆಲ್, ವಾಹನಗಳು, ಸೌರ ಇನ್ ವರ್ಟರ್‌ಗಳು

ರಕ್ಷಣೆಗಾಗಿ ೪ ಲಕ್ಷ ೭೮ ಸಾವಿರ ಕೋಟಿ ರೂ.ಗಳ ಏರ್ಪಾಡು

ರಕ್ಷಣಾ ಕ್ಷೇತ್ರಕ್ಕೆ ೪ ಲಕ್ಷ ೭೮ ಸಾವಿರ ಕೋಟಿ ರೂ.ಗಳ ಏರ್ಪಾಡು ಮಾಡಲಾಗಿದೆ. ಇದರಲ್ಲಿ ಕಳೆದ ವರ್ಷದ ತುಲನೆಯಲ್ಲಿ ೭,೦೦೦ ಕೋಟಿ ರೂ. ಹೆಚ್ಚಳವಾಗಿದೆ ಈ ಏರ್ಪಾಡಿನಲ್ಲಿ ೧ ಲಕ್ಷ ೩೫ ಸಾವಿರ ಕೋಟಿ ರೂ.ಗಳನ್ನು ಶಸ್ತ್ರಾಸ್ತ್ರ ಖರೀದಿಗೆ ಮೀಸಲಿಡಲಾಗುವುದು.

ಈ ವರ್ಷ ವಾರ್ಷಿಕ ಉತ್ಪನ್ನದ ವೆಚ್ಚಕ್ಕಾಗಿ ೨ ಲಕ್ಷ ೧೨ ಸಾವಿರ ಕೋಟಿ ಮತ್ತು ಪಿಂಚಣಿಗೆ ೧ ಲಕ್ಷ ೧೫ ಸಾವಿರ ಕೋಟಿ ರೂ.ಗಳ ಏರ್ಪಾಡು ಮಾಡಲಾಗಿದೆ.

ಭಾರತೀಯ ಜೀವ ವಿಮಾ ನಿಗಮದ ಖಾಸಗೀಕರಣ

ನಿರ್ಮಲಾ ಸೀತಾರಾಮನ್ ಇವರು ಭಾರತದ ಅತಿದೊಡ್ಡ ವಿಮಾ ಕಂಪನಿಯಾದ ‘ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ’ದ (ಎಲ್‌ಐಸಿ)ಯನ್ನು ತನ್ನ ಆರಂಭಿಕ ಮುಕ್ತ ಮಾರಾಟದ ಮೂಲಕ (ಐಪಿಒ ಮೂಲಕ) ಹೂಡಿಕೆ ಮಾಡುವುದೆಂದು ಘೋಷಿಸಿದರು. ಇದನ್ನು ಶೇಕಡ ೪೯ ರಿಂದ ೭೪ ಕ್ಕೆ ಹೆಚ್ಚಿಸಲಾಗಿದೆ. ಐಡಿಬಿಐ ಬ್ಯಾಂಕಿನ ಖಾಸಗೀಕರಣದ ಬಗ್ಗೆಯೂ ಅವರು ಮಾಹಿತಿ ನೀಡಿದರು. ಈ ಎರಡರ ಹೂಡಿಕೆ ಮಾಡುವ ಮೂಲಕ ೯೦,೦೦೦ ಕೋಟಿ ರೂ.ಗಳನ್ನು ಜನರೇಟ್ ಮಾಡುವುದು ಸರಕಾರದ ಉದ್ದೇಶವಾಗಿದೆ. ಅದೇ ಸಮಯದಲ್ಲಿ, ಸರಕಾರವು ಇತರ ಹೂಡಿಕೆಗಳ ಮೂಲಕ ೧ ಲಕ್ಷ ೨೦,೦೦೦ ಕೋಟಿ ರೂ. ಗಳನ್ನು ಜನರೇಟ್ ಮಾಡಲಿದೆ. ಇದರಲ್ಲಿ ಬಿಪಿಸಿಎಲ್, ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ, ಏರ್ ಇಂಡಿಯಾದಲ್ಲಿ ಹೂಡಿಕೆ ಮಾಡಲಾಗುವುದು.

ಬಜೆಟ್‌ನಲ್ಲಿ ಪ್ರಮುಖ ನಿಬಂಧನೆಗಳು

  •  ದೇಶ ಸ್ವತಂತ್ರವಾದ ನಂತರ ಮೊದಲ ಡಿಜಿಟಲ್ ಜನಗಣತಿಯನ್ನು ನಡೆಸಲಾಗುವುದು. ಇದಕ್ಕಾಗಿ ೩,೦೬೮ ಕೋಟಿ ರೂ.ಗಳ ಏರ್ಪಾಡು
  • ೪ ಹೊಸ ರಾಷ್ಟ್ರೀಯ ವೈರಾಲಜಿ ಸಂಸ್ಥೆಗಳನ್ನು (ಎನ್‌ಐವಿ) ಸ್ಥಾಪಿಸಲಾಗುವುದು. ಪ್ರಸ್ತುತ, ಪುಣೆ ನಗರದಲ್ಲಿ ದೇಶದಲ್ಲಿ ಕೇವಲ ಒಂದೇ ಎನ್‌ಐವಿ ಇದೆ.
  •  ದೇಶದಲ್ಲಿ ೧೦೦ ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲಾಗುವುದು
  •  ಕನಿಷ್ಠ ವೇತನ ಕಾಯ್ದೆ ಎಲ್ಲ ಕ್ಷೇತ್ರಗಳಲ್ಲೂ ಜಾರಿಗೆ ಬರಲಿದೆ
  •  ’ಉಜ್ವಾಲಾ ಯೋಜನೆ’ ಇನ್ನೂ ೧ ಕೋಟಿ ಫಲಾನುಭವಿಗಳನ್ನು ತಲುಪಲಿದೆ. ಮುಂದಿನ ಮೂರು ವರ್ಷಗಳಲ್ಲಿ ಇನ್ನೂ ೧೦೦ ಜಿಲ್ಲೆಗಳನ್ನು ಅನಿಲ ವಿತರಣಾ ಜಾಲಕ್ಕೆ ಸೇರಿಸಲಾಗುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ಯಾಸ್ ಪೈಪ್‌ಲೈನ್ ಯೋಜನೆಯನ್ನು ಪ್ರಾರಂಭಿಸಲಾಗುವುದು
  •  ಅಸಂಘಟಿತ ಕಾರ್ಮಿಕರಿಗಾಗಿ ಆನ್‌ಲೈನ್ ಪೋರ್ಟಲ್ ರಚಿಸಲಾಗುವುದು
  •  ಕೃಷಿ ಉತ್ಪನ್ನಗಳಿಗೆ ಒಂದೂವರೆ ಪಟ್ಟು ಬೆಂಬಲಬೆಲೆ ನೀಡಲಾಗುವುದು
  •  ಗೋಧಿ ಬೆಳೆಗಾರರಿಗೆ ಸಹಾಯ ಮಾಡಲು ೭೫,೦೬೦ ಕೋಟಿ ರೂ.ಗಳ ಏರ್ಪಾಡು
  •  ಸರಕಾರಿ ಬ್ಯಾಂಕುಗಳನ್ನು ಸಕ್ಷಮಗೊಳಿಸಲು ೨೦,೦೦೦ ಕೋಟಿ ರೂ.ಗಳನ್ನು ನೀಡಲಾಗುವುದು
  •  ಹಳೆಯ ವಾಹನಗಳಿಗೆ ‘ಸ್ಕ್ರ್ಯಾಪಿಂಗ್ ಪಾಲಿಸಿ’ ಘೋಷಿಸಲಾಗಿದೆ. ಖಾಸಗಿ ವಾಹನಗಳ ಫಿಟ್‌ನೆಸ್ ಪರೀಕ್ಷೆಯನ್ನು ೨೦ ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳ ೧೫ ವರ್ಷಗಳ ನಂತರ ನಡೆಸಲಿದೆ
  •  ಬಂಗಾಳದ ಹೆದ್ದಾರಿಗಳಿಗೆ ೨೫ ಸಾವಿರ ಕೋಟಿ ರೂ.ಗಳ ಏರ್ಪಾಡು ಮಾಡಲಾಗುವುದು
  •  ತ್ಯಾಜ್ಯ ವಿಲೇವಾರಿಗೆ ೧ ಲಕ್ಷ ೭೮ ಸಾವಿರ ಕೋಟಿ ರೂ.ಗಳನ್ನು ನೀಡಲಾಗುವುದು
  •  ಮುಂಬೈ-ಕನ್ಯಾಕುಮಾರಿ ಹೆದ್ದಾರಿಗೆ ೬೪,೦೦೦ ಕೋಟಿ ರೂ.ಗಳು
  •  ೧೫ ತುರ್ತು ಆರೋಗ್ಯ ಕೇಂದ್ರಗಳು ಮತ್ತು ೨ ಸಂಚಾರೀ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು
  •  ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಮತಿ
  •  ಲಡಾಖ್‌ನ ಲೇಹ್ ಪ್ರದೇಶದಲ್ಲಿ ಕೇಂದ್ರ ವಿಶ್ವವಿದ್ಯಾಲಯದ ಸ್ಥಾಪನೆ
  •  ೨೦೩೦ ರ ವೇಳೆಗೆ ರಾಷ್ಟ್ರೀಯ ರೈಲ್ವೆ ಯೋಜನೆ ಅನುಷ್ಠಾನ. ಇದಕ್ಕಾಗಿ ೧ ಲಕ್ಷ ೧೦ ಸಾವಿರ ೫೫ ಕೋಟಿ ರೂ.ಗಳ ಏರ್ಪಾಡು ಮಾಡಲಾಗುವುದು