ನವ ದೆಹಲಿ: ದೇಶದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ೧.೫ ಲಕ್ಷ ರೂ.ಗಳವರೆಗೆ ನಗದು ರಹಿತ ನೆರವಿನ ಯೋಜನೆಯನ್ನು ಕೇಂದ್ರ ಸರಕಾರವು ೨೦೨೧-೨೦೨೨ ರಲ್ಲಿ ಜಾರಿಗೆ ತರುವ ಸಾಧ್ಯತೆಯಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕಿಯನ್ನು ಆಸ್ಪತ್ರೆಗಳು ತಕ್ಷಣ ದಾಖಲಿಸಿ ಚಿಕಿತ್ಸೆ ನೀಡುವುದು ಕಡ್ಡಾಯವಾಗಿರುತ್ತದೆ. ಈ ಯೋಜನೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ರೂಪಿಸಿದೆ. ದೇಶದಲ್ಲಿ ಪ್ರತಿ ವರ್ಷ ೫ ಲಕ್ಷ ಅಪಘಾತಗಳಲ್ಲಿ ಒಂದೂವರೆ ಲಕ್ಷ ಜನರು ಸಾವನ್ನಪ್ಪುತ್ತಾರೆ ಮತ್ತು ಸುಮಾರು ಮೂರೂವರೆ ಲಕ್ಷ ಜನರು ಅಂಗವಿಕಲರಾಗುತ್ತಾರೆ.
ಈ ಯೋಜನೆಯಡಿ ಮೋಟಾರು ವಾಹನ ಅಪಘಾತ ನಿಧಿಯನ್ನು ಸ್ಥಾಪಿಸಲಾಗುವುದು. ಇದು ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಹಾಗೂ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರವನ್ನು ಒದಗಿಸಲಿದೆ. ಪರಿಹಾರ ಮತ್ತು ಸಹಾಯದ ಮೊತ್ತವನ್ನು ಕೇಂದ್ರ ಸರಕಾರವು ನಿರ್ಧರಿಸಲಿದೆ.
ನಗದುರಹಿತ ಚಿಕಿತ್ಸೆಯ ಪ್ರಮುಖ ಅಂಶಗಳು
೧. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಆಸ್ಪತ್ರೆಗಳು ತಕ್ಷಣ ದಾಖಲಿಸಿಕೊಂಡು ಚಿಕಿತ್ಸೆ ನೀಡುವುದು ಕಡ್ಡಾಯವಾಗಿರುತ್ತದೆ.
೨. ಗಾಯಗೊಂಡ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖವಾಗುವವರೆಗೆ ನಗದುರಹಿತ ಚಿಕಿತ್ಸೆ ಮುಂದುವರಿಯುತ್ತದೆ.
೩. ಗಾಯಾಳುಗಳನ್ನು ಆಸ್ಪತ್ರೆಗೆ ಅಥವಾ ಇನ್ನೊಂದು ಆಸ್ಪತ್ರೆಗೆ ಸಾಗಿಸುವ ವೆಚ್ಚವು ಸಹ ಇದರಲ್ಲಿ ಒಳಗೊಂಡಿರುತ್ತದೆ.
೪. ಗಾಯಗೊಂಡ ಪ್ರತಿಯೊಬ್ಬ ವ್ಯಕ್ತಿಗೂ ೧.೫ ಲಕ್ಷ ರೂ. ವರೆಗಿನ ಚಿಕಿತ್ಸೆಯ ವೆಚ್ಚ ಒಳಗೊಂಡಿದೆ.