ತಿರುವನಂತಪುರಮ್ (ಕೇರಳ) – ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇವರು ಕೇರಳ ಪೊಲೀಸ್ ಕಾಯ್ದೆಯಲ್ಲಿ ಸೆಕ್ಷನ್ ೧೧೮ (ಅ) ಅನ್ನು ಸೇರಿಸುವ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ. ಈ ಸೆಕ್ಷನ್ ಪ್ರಕಾರ ಸಾಮಾಜಿಕ ಮಾಧ್ಯಮದಲ್ಲಿ(ಸೋಶಲ್ ಮೀಡಿಯಾ) ಯಾವುದೇ ವ್ಯಕ್ತಿಯ ಮಾನಹಾನಿ, ಆತನಿಗೆ ನೀಡಿದ ಬೆದರಿಕೆ ಮತ್ತು ಆತನನ್ನು ಅವಮಾನಿಸುವುದು, ಶಿಕ್ಷಾರ್ಹ ಅಪರಾಧವಾಗಿದ್ದು ೫ ವರ್ಷಗಳವರೆಗೆ ಸೆರೆಮನೆ ಶಿಕ್ಷೆ ಅಥವಾ ೧೦,೦೦೦ ರೂಪಾಯಿಗಳ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
೧. ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚುತ್ತಿರುವ ಅಪರಾಧಗಳ ಪ್ರಮಾಣವನ್ನು ತಡೆಯಲು ಈ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಸರಕಾರವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇಂತಹ ಅಪರಾಧಗಳನ್ನು ತಡೆಗಟ್ಟಲು ಅಸ್ತಿತ್ವದಲ್ಲಿರುವ ಕಾನೂನುಗಳು ಸಾಕಾಗುತ್ತಿಲ್ಲ. ವಿಶೇಷವಾಗಿ ಸರ್ವೋಚ್ಚ ನ್ಯಾಯಾಲಯವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೬ ಅ ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ ೧೧೮ (ಡ) ಅನ್ನು ರದ್ದುಪಡಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
೨. ಈ ಕಲಂ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರು, ಸುಳ್ಳು ಸುದ್ದಿ, ದ್ವೇಷಭರಿತ ಭಾಷಣ ಮತ್ತು ಕೆಲವು ವ್ಯಕ್ತಿಗಳನ್ನು ಗುರಿಯಾಗಿಸಲು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಿಸುವ ಪ್ರಕರಣಗಳು ಹೆಚ್ಚಾಗಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
೩. ಈ ತಿದ್ದುಪಡಿ ಮಾಧ್ಯಮಗಳ ಸ್ವಾತಂತ್ರ್ಯದ ಮೇಲಿನ ದಾಳಿ. ಈ ಸುಗ್ರೀವಾಜ್ಞೆಯು ವಾಕ್ ಮತ್ತು ನಾಗರಿಕ ಸ್ವಾತಂತ್ರ್ಯದ ಮೇಲಿನ ಗದಾಪ್ರಹಾರವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಮೇಶ ಚೆನ್ನಿಥಾಲಾ ಹೇಳಿದ್ದಾರೆ.