‘ಫ್ಲ್ಯಾಟ್ ಖರೀದಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು !

ಆಪತ್ಕಾಲದ ದೃಷ್ಟಿಯಿಂದ ಫ್ಲ್ಯಾಟ್ ಆಯ್ಕೆ ಮಾಡುವಾಗ ಎಲ್ಲ ನಿಯಮಗಳನ್ನು ಪರಿಶೀಲಿಸಿಕೊಳ್ಳುವುದು ಆವಶ್ಯಕವಿದೆ. ಸದ್ಯ ಅನೇಕ ಸ್ಥಳಗಳಲ್ಲಿ ದೊಡ್ಡ ದೊಡ್ಡ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ. ಆ ಸಮುಚ್ಚಯಗಳಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸುವಾಗ ಅಥವಾ ಇತರ ಸಹಕಾರಿ ಗೃಹನಿರ್ಮಾಣ ಸಂಸ್ಥೆಗಳಲ್ಲಿ (ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ) ಫ್ಲ್ಯಾಟ್ ಖರೀದಿಸುವ ಮೊದಲು ಅನೇಕ ಕಾಗದ ಪತ್ರಗಳನ್ನು ಪರಿಶೀಲಿಸಿಕೊಳ್ಳುವುದು ಮಹತ್ವದ್ದಾಗಿರುತ್ತದೆ. ನಮಗೆ ಫ್ಲ್ಯಾಟ್ ಖರೀದಿಸುವಾಗ ಮಾಡಿಕೊಳ್ಳುವ ಕರಾರುಗಳು, ಕಾಗದಪತ್ರಗಳ ಪರಿಶೀಲನೆ, ಕಟ್ಟಡ ನಿರ್ಮಾಣದ ದರ್ಜೆ, ಸೌಲಭ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ಸೂಕ್ಷ್ಮತೆ ತಿಳಿದಿರದ ಕಾರಣ ಅದರಲ್ಲಿ ನಾವು ಮೋಸಕ್ಕೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ರೀತಿಯಲ್ಲಿ ಮೋಸಕ್ಕೊಳಗಾಗದಿರಲು ಏನೆಲ್ಲ ಎಚ್ಚರಿಕೆಯನ್ನು ವಹಿಸಬೇಕು ಎನ್ನುವುದನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.

೧. ಕಟ್ಟಡ ನಿರ್ಮಾಣಕಾರರ (ಬಿಲ್ಡರ್) ಸಂದರ್ಭದಲ್ಲಿ ಏನೆಲ್ಲ ಎಚ್ಚರಿಕೆಯನ್ನು ವಹಿಸಬೇಕು ?

ಕಟ್ಟಡ ನಿರ್ಮಾಣಕಾರರು (ಬಿಲ್ಡರ್) ಆದಷ್ಟು ಸಿವಿಲ್ ಇಂಜನಿಯರ್ ಆಗಿದ್ದಾರೆ ಮತ್ತು ಆ ಉದ್ಯಮದಲ್ಲಿ ಅವರ ಅಧ್ಯಯನ ಮತ್ತು ಅನುಭವ ಉತ್ತಮವಾಗಿಯೇ ಎಂಬುದನ್ನು ಅವರ ಕೆಲಸಗಳನ್ನು ನೋಡಿ ಖಚಿತಪಡಿಸಿಕೊಳ್ಳಬೇಕು. ಅಲ್ಲದೇ ಯಾರು ಪ್ರತಿಕೂಲ ಪರಿಸ್ಥಿತಿಯಲ್ಲಿ ತಮ್ಮ ಹೂಡಿಕೆ ಮಾಡಿ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸುವಷ್ಟು ಸಕ್ಷಮರಾಗಿದ್ದಾರೆ ಮತ್ತು ಫ್ಲ್ಯಾಟ್‌ಗಳನ್ನು ಖರೀದಿಸುವವರ ಕೆಲಸಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿಕೊಡಲು ಆರ್ಥಿಕ ದೃಷ್ಟಿಯಿಂದ ಸಕ್ಷಮರಾಗಿದ್ದಾರೆ (ಸಮಾಜದಲ್ಲಿರುವ ಪ್ರತಿಷ್ಠಿತರು, ವಿಶ್ವಾಸಾರ್ಹತೆ ಮತ್ತು ವ್ಯವಹಾರದ ಪದ್ಧತಿ ಯೋಗ್ಯವಾಗಿದೆ) ಅಂತಹ ಕಟ್ಟಡ ನಿರ್ಮಾಣಕಾರರ ಬಳಿ ನಾವು ಫ್ಲ್ಯಾಟ್‌ಗಾಗಿ ನೋಂದಣಿ ಮಾಡಬೇಕು. ಕೆಲವೊಮ್ಮೆ ಜಾಹೀರಾತಿನ ಮೂಲಕ ಗ್ರಾಹಕರಿಗೆ ಸೌಲಭ್ಯಗಳ ಆಮಿಷವನ್ನು ತೋರಿಸಲಾಗುತ್ತದೆ ಮತ್ತು ಫ್ಲ್ಯಾಟ್‌ಗಳ ಖರೀದಿಗಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಪ್ರತ್ಯಕ್ಷದಲ್ಲಿ ಮಾತ್ರ ಆ ಗ್ರಾಹಕರಿಗೆ ಜಾಹೀರಾತಿನಲ್ಲಿ ನಮೂದಿಸಿದಂತೆ ಉತ್ಕೃಷ್ಟ ಗುಣಮಟ್ಟದ ಕೆಲಸ ಇಲ್ಲದಿರುವುದು ಗಮನಕ್ಕೆ ಬರುತ್ತದೆ ಮತ್ತು ಆಗ ಅವರಿಗೆ ಮೋಸಕ್ಕೊಳಗಾಗಿರುವುದು ಅರಿವಾಗುತ್ತದೆ; ಆದರೆ ಅಲ್ಲಿಯವರೆಗೆ ಅವರಿಗೆ ಬಹಳ ಹಾನಿಯಾಗಿರುತ್ತದೆ. ಪ್ರತಿ ಸಲವೂ ಮೇಲಿನಂತೆ ಕಟ್ಟಡ ಉದ್ಯಮಿಗಳು ಸಿಗುತ್ತಾರೆ ಎಂದೇನಿಲ್ಲ. ಹಾಗಾಗಿ ಮೇಲಿನಂತೆ ಎಲ್ಲ ನಿಯಮಗಳಂತೆ ವ್ಯವಹಾರವನ್ನು ಪೂರ್ಣಗೊಳಿಸಿ ಕೊಡುವ ಬಿಲ್ಡರ್ ಇದ್ದರೆ ಅವರ ಬಳಿ ನೊಂದಣಿ ಮಾಡಬಹುದು.

೨. ನಿವೇಶನ ಮತ್ತು ನಿವೇಶನದ ಪರವಾನಿಗೆಯ ವಿಷಯದಲ್ಲಿ ಏನು ಮಾಡಬೇಕು ?

ಅ. ನಾವು ಯಾವ ಪ್ರದೇಶದಲ್ಲಿ ಫ್ಲ್ಯಾಟ್ ಖರೀದಿಸುವವರಿದ್ದೆಯೋ, ಅಲ್ಲಿಯ ಪರಿಸರ ಮತ್ತು ಎಲ್ಲ ಮೂಲಭೂತ ಸೌಲಭ್ಯಗಳು, ಉದಾ. ರಸ್ತೆ, ನೀರು, ವಿದ್ಯುತ್ ಇರುವುದನ್ನು ದೃಢಪಡಿಸಿಕೊಳ್ಳುವುದು ಮಹತ್ವದ್ದಾಗಿದೆ. ಅದಕ್ಕಾಗಿ ಸ್ಥಳದ ನೀಲನಕ್ಷೆಯಲ್ಲಿ ತಮ್ಮ ಫ್ಲ್ಯಾಟ್‌ಅನ್ನು ಮೇಲಿನಂತೆ ದೃಢಪಡಿಸಿಕೊಳ್ಳಬೇಕು

ಆ. ಅನುಮೋದಿತ ನೀಲನಕ್ಷೆಯ ಮೂಲ ಪ್ರತಿಯನ್ನು ಪರಿಶೀಲಿಸಬೇಕು. ಅದರೊಂದಿಗೆ ಏನಾದರೂ ಷರತ್ತು-ನಿಬಂಧನೆಗಳು ಇದ್ದರೆ ಅವುಗಳನ್ನು ಸಹ ಕೂಲಂಕುಷವಾಗಿ ಓದಬೇಕು.

ಇ. ಸ್ಥಳವು ಕೃಷಿಯೇತರ (N.A) ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಗ್ರಾಮಪಂಚಾಯತಿಯು ಅನುಮೋದಿಸಿದ ನೀಲನಕ್ಷೆಯ (ಲೇ-ಔಟ್) ಫ್ಲಾಟ್ಸ್‌ಗಳನ್ನು ಖರೀದಿಸಬಾರದು. ಗ್ರಾಮ ಪಂಚಾಯತಿಗೆ ನೀಲನಕ್ಷೆಗಳನ್ನು ಅನುಮೋದಿಸುವ ಅಧಿಕಾರವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೀಲನಕ್ಷೆಯ ಪರವಾನಗಿಯ ಅಧಿಕಾರವು ಗ್ರಾಮೀಣ ಟೌನ್ ಪ್ಲ್ಯಾನಿಂಗ್ ವಿಭಾಗದವರ ಬಳಿ ಇರುತ್ತದೆ.

೩. ಕಾನೂನಿನ ವಿಷಯಗಳ ಸಂದರ್ಭದಲ್ಲಿ ಏನೆಲ್ಲ ಮುನ್ನೆಚ್ಚೆರಿಕೆಯನ್ನು ವಹಿಸಬೇಕು ?

ಅ. ಆಸ್ತಿ ದಾಖಲೆ ಪತ್ರ ಅಥವಾ ಪಿ.ಆರ್. ಕಾರ್ಡ್ ಇದರ ನೋಂದಣಿಯನ್ನು ಪರಿಶೀಲಿಸಬೇಕು. ಕರ್ನಾಟಕ ರಾಜ್ಯದಲ್ಲಿ ಈ ನಮೂನೆಯನ್ನು ಫಾರ್ಮ ನಂ. ೧೬ (Form No. 16) ಎಂದು ಹೇಳುತ್ತಾರೆ.

ಆ. ಆಸ್ತಿ ದಾಖಲೆ ಪತ್ರದ ಬಲಗಡೆಯಲ್ಲಿರುವ ಕಾಲಂನಲ್ಲಿ ಇತರ ಹಕ್ಕುಗಳ, ವಾರಸುದಾರರ, ಬ್ಯಾಂಕಿನಲ್ಲಿ ಋಣಭಾರ ಪತ್ರ (ಜಾಗವನ್ನು ಅಡವಿಟ್ಟು ಸಾಲ ಪಡೆದಿದ್ದಾರೆಯೇ ?) ಅಥವಾ ಇತರ ನೊಂದಣಿ ಇದೆಯೇ? ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಆದಷ್ಟು ಗಣಕೀಯ ಆಸ್ತಿ ದಾಖಲೆ ಪತ್ರ ಪಡೆಯಬೇಕು. ಆಸ್ತಿ ದಾಖಲೆ ಪತ್ರದಲ್ಲಿ ಹಿಂದಿನ ದಸ್ತಾವೇಜುಗಳ ನೊಂದಣಿಯಿರುತ್ತದೆ. ಅದರಲ್ಲಿ ಆ ಸ್ಥಳದ ಕ್ಷೇತ್ರಫಲವನ್ನು ನಮೂದಿಸಲಾಗಿರುತ್ತದೆ ಮತ್ತು ಆ ಸ್ಥಳದ ಸದ್ಯದ ಮಾಲೀಕರು ಯಾರು, ಎನ್ನುವುದನ್ನೂ ನಮೂದಿಸಲಾಗಿರುತ್ತದೆ. ಇದಕ್ಕಾಗಿ ಆಸ್ತಿ ದಾಖಲೆ ಮಾತ್ರ ಆವಶ್ಯಕವಾಗಿರುತ್ತದೆ.

ಇ. ಹಿಂದಿನ ಕನಿಷ್ಟ ೩೦ ವರ್ಷಗಳ ಸರ್ಚ ರಿಪೋರ್ಟಅನ್ನು ತಮ್ಮ ನ್ಯಾಯವಾದಿಗಳಿಂದ ಪರಿಶೀಲಿಸಿಕೊಳ್ಳಬೇಕು.

ಈ. ಅಲ್ಲಿಯ ಅತ್ಯಧಿಕ ಜನಪ್ರಿಯವಾಗಿರುವ ಸ್ಥಳೀಯ ದಿನ ಪತ್ರಿಕೆಯಲ್ಲಿ ತಮ್ಮ ನ್ಯಾಯವಾದಿಗಳಿಂದ ಖರೀದಿಯ ಪೂರ್ವದಲ್ಲಿ ಜಾಹೀರು ನೊಟೀಸ್ ಪ್ರಕಟಿಸಬೇಕು. ಆ ಸೂಚನೆಯಲ್ಲಿ ಫ್ಲ್ಯಾಟ್‌ನ ಸಂಪೂರ್ಣ ವಿವರಗಳನ್ನು ನೀಡಿ ‘ಈ ಫ್ಲ್ಯಾಟ್‌ನ್ನು ನಾವು ಖರೀದಿಸುತ್ತಿದ್ದೇವೆ. ಈ ವಿಷಯದಲ್ಲಿ ಯಾರಿಂದಲಾದರೂ ದೂರುಗಳಿದ್ದರೆ ಫ್ಲ್ಯಾಟ್‌ನ ಮೂಲ ಕಾಗದಪತ್ರಗಳನ್ನು ತೆಗೆದುಕೊಂಡು ೮ ರಿಂದ ೧೫ ದಿನಗಳ ಒಳಗೆ ನಮ್ಮ ನ್ಯಾಯವಾದಿಗಳಿಗೆ ತಿಳಿಸಬೇಕು ಮತ್ತು ಕಾಗದ ಪತ್ರಗಳನ್ನು ದೃಢೀಕರಿಸಬೇಕು ಎಂದು ಬರೆದು ಅದರಲ್ಲಿ ನಿಮ್ಮ ನ್ಯಾಯವಾದಿಗಳ ಸಂಪರ್ಕ ಮಾಹಿತಿಯನ್ನು ನೀಡಬೇಕು. ಈ ವಿಷಯದಲ್ಲಿ ಯಾರೂ ದೂರು ಸಲ್ಲಿಸದಿದ್ದರೆ ಅಥವಾ ಯಾರ ತಕರಾರು ಇಲ್ಲದಿದ್ದರೆ, ಆಗ ಆ ಫ್ಲ್ಯಾಟ್ ಖರೀದಿಸಬೇಕು. ಈ ಫ್ಲ್ಯಾಟ್‌ನ ಅತಿಕ್ರಮಣ ರಹಿತ (ನಾನ್ ಎಂಕಂಬರನ್ಸ್) ಪ್ರಮಾಣಪತ್ರವನ್ನು ಸಂಬಂಧಿಸಿದ ಕಾರ್ಯಾಲಯದಿಂದ ಪಡೆದುಕೊಳ್ಳಬೇಕು.

ಉ. ಸ್ಥಳದ ಬಿಲ್ಡರ್ ಎಲ್ಲ ರೀತಿಯ ತೆರಿಗೆಯನ್ನು ತುಂಬಿ ಆ ಸ್ಥಳವನ್ನು ನಿರಾಕ್ಷೇಪಣಗೊಳಿಸಿರುವ ಕಾಗದಪತ್ರಗಳನ್ನು ಪರಿಶೀಲಿಸಬೇಕು.

ಊ. ಆಸ್ತಿ ದಾಖಲೆ ಪತ್ರದಲ್ಲಿರುವ ಸಾಮೂಹಿಕ ಕ್ಷೇತ್ರದಲ್ಲಿ ನಮೂದಿಸಿರುವ ಹೆಸರುಗಳು (ಮಾರಾಟ ಮಾಡುವವರು) ಸಹೋದರರದ್ದಾಗಿದ್ದರೆ ಅವರೆಲ್ಲರೂ ಹಕ್ಕುದಾರರಾಗಿರುವುದರಿಂದ ಜಮೀನಿಯ ಖರೀದಿ ಖಾತೆಯ ಮೇಲೆ ಎಲ್ಲರ ಹಸ್ತಾಕ್ಷರ ಇರುವುದನ್ನು ದೃಢಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಖರೀದಿ ಖಾತೆಯೊಂದಿಗೆ ಸಂಬಂಧಿಸಿದ ಸಂಬಂಧಿಕರ ನಿರಾಪೇಕ್ಷಣ ಪತ್ರವಿರಬೇಕು. ಇಂತಹ ಪತ್ರಗಳು ನೊಂದಣೀಕೃತಗೊಂಡಿರಬೇಕು.

ಎ. ಸದ್ಯದ ಸ್ಥಿತಿಯಲ್ಲಿ ಬಿಲ್ಡರ್‌ನ ಕಂಪನಿ ಯಾವ ವಿಧದ್ದಾಗಿದೆ (ಪ್ರೊಪ್ರಾಯಟರ, ಪಾರ್ಟನರ್‌ಶಿಪ್, ಕಂಪನಿ ಅಥವಾ ಇತರ) ಎನ್ನುವುದನ್ನು ನೋಡಿ ಅದರ ನೊಂದಣಿಪತ್ರವನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ಕರಾರುಪತ್ರದಲ್ಲಿ ಉಲ್ಲೇಖಿಸಬೇಕು.

ಏ. ಘೋಷಣಾಪತ್ರ (ಡೀಡ ಆಫ್ ಡಿಕ್ಲೆರೆಷನ್) ಬಹಳ ಮಹತ್ವದ್ದಾಗಿದೆ. ಅದರಲ್ಲಿ ಒಟ್ಟು ಕ್ಷೇತ್ರಫಲ, ನಿರ್ಮಾಣದ ಕ್ಷೇತ್ರಫಲ, ಸಾಮೂಹಿಕ ಆಸ್ತಿಪಾಸ್ತಿಯ ವಿವರ, ಎಲ್ಲರಿಗೂ ಸಮಾನ ಅಧಿಕಾರ ವಿರುವ ಬಗ್ಗೆ ವಿವರ, ಎಫ್.ಎಸ್.ಐ. ಅಥವಾ ಟಿ.ಡಿ.ಆರ್. ಅಧಿಕಾರವು ಸೊಸೈಟಿಯ ಹೆಸರು ಇರುವ ನೋಂದಣಿ ಇರುತ್ತದೆ. ಹಾಗಾಗಿ ಘೋಷಣಾಪತ್ರವನ್ನು (ಡೀಡ ಆಫ್ ಡಿಕ್ಲರೇಷನ್) ಪಡೆದುಕೊಳ್ಳಬೇಕು.

ಓ. ಬಿಲ್ಡರ್ ಮೌಖಿಕವಾಗಿ ಅಥವಾ ಪತ್ರಿಕಾಪ್ರಕಟಣೆಯ ಮಾಧ್ಯಮದಿಂದ ಸೌಲಭ್ಯಗಳ ಕುರಿತಾದ ಆಶ್ವಾಸನೆಗಳು ಅವರು ನೀಡಿರುವ ಘೋಷಣಾಪತ್ರದಲ್ಲಿ ಇರುವುದನ್ನು ದೃಢಪಡಿಸಿಕೊಳ್ಳಬೇಕು.

೪. ಫ್ಲಾಟ್ಸ್ ಖರೀದಿಸುವಾಗ ಏನೆಲ್ಲ ವಿಷಯಗಳನ್ನು ಪರಿಶೀಲಿಸಬೇಕು ?

ಅ. ಗೃಹನಿರ್ಮಾಣ ಯೋಜನೆಯು ನಿವಾಸಿ ಝೋನ್‌ನಲ್ಲಿ ನೋಂದಣೀಕೃತವಾಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. (ಗ್ರೀನ್ ಝೋನ್‌ನಲ್ಲಿರಬಾರದು.)

ಆ. ಯಾವ ಸ್ಥಾನದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆಯೊ, ಆ ಸ್ಥಾನವು ಕಟ್ಟಡ ನಿರ್ಮಾಣ ಮಾಡಲು ಕಾನೂನು ಪ್ರಕಾರ ಅಧಿಕೃತವಾಗಿದೆಯೇ. ಪ್ರಸ್ತುತ  ಈ ಭೂಮಿಯ ಮೇಲೆ ಯಾವುದೇ ತರಹದ ಹಕ್ಕು, ಖಟ್ಲೆ ಅಥವಾ ಇತರ ಕಾನೂನಿಗೆ ಸಂಬಂಧಿಸಿದ ವಿವಾದವಿಲ್ಲ ಹಾಗೂ ವಾಸಿಸಲು ಹೋದಾಗ ಯಾರಿಂದಲೂ ವಿರೋಧವಾಗಲಿಕ್ಕಿಲ್ಲ, ಎಂಬುದನ್ನು ಇತರ ಫ್ಲಾಟ್ ಹೊಂದಿರುವವರು ಮತ್ತು ಸರಕಾರಿ ಕಾರ್ಯಾಲಯದಿಂದ ಖಚಿತಪಡಿಸಿಕೊಳ್ಳಬೇಕು.

ಇ. ನಾವು ಯಾವ ವ್ಯಕ್ತಿಯಿಂದ ಫ್ಲ್ಯಾಟ್ ಖರೀದಿ ಮಾಡು ತ್ತಿದ್ದೇವೆಯೊ, ಅದು ಅವರ ಮಾಲಿಕತ್ವದಲ್ಲಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.

ಈ. ಫ್ಲ್ಯಾಟನ್ನು ಅಡವಿಟ್ಟು ಅದರ ಮೇಲೆ ಯಾವುದೇ ಪ್ರಕಾರದ ಸಾಲವನ್ನು ತೆಗೆದುಕೊಂಡಿಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಈ ಫ್ಲ್ಯಾಟ್ ಬ್ಯಾಂಕಿನಲ್ಲಿ ಅಡಮಾನ ವಿದ್ದರೆ, ಆ ಬ್ಯಾಂಕಿನಿಂದ ಈ ಫ್ಲ್ಯಾಟನ್ನು ಮಾರಾಟ ಮಾಡಲು ‘ನಿರಾಪೇಕ್ಷಣಾಪತ್ರ (NOC) ಇದೆಯೆ ಎಂದು ಎಂದು ನೋಡಿಕೊಳ್ಳಬೇಕು.

ಉ. ಈ ಹಿಂದೆ ಈ ಸ್ಥಳವನ್ನು ಇತರ ಯಾರಿಗೂ ಮಾರಾಟ ಮಾಡಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಮಗೆ ತೋರಿಸಿದ ಫ್ಲ್ಯಾಟನ್ನೆ ನಮಗೆ ಮಾರಾಟ ಮಾಡುತ್ತಿದ್ದಾರೆ, ಆ ಸ್ಥಳಕ್ಕೆ ಸಂಬಂಧಿಸಿ ಯಾವುದೇ ವಿವಾದವಿಲ್ಲ, ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಊ. ಸಂಬಂಧಪಟ್ಟ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ಬಾಕಿ ವಸೂಲಿ ಅಥವಾ ಅಡಮಾನವಿಲ್ಲವೆಂಬುದನ್ನು ಸಿದ್ಧಪಡಿಸುವ ಒಂದು ಸಣ್ಣ ಪ್ರಮಾಣಪತ್ರವನ್ನು ತೆಗೆದುಕೊಳ್ಳಬೇಕು. (ಅದರಲ್ಲಿ ಕೆಲವು ಸಮಯದಿಂದ ನಡೆದಿರುವ ಎಲ್ಲ ವ್ಯವಹಾರಗಳಿಗೆ ಸಂಬಂಧಿಸಿದ ವಿವರಣೆಗಳಿರುತ್ತವೆ.)

ಎ. ನಿರ್ಮಾಣ ಕಾರ್ಯದ ಗುತ್ತಿಗೆದಾರನು ಸ್ಥಳದ ಮಾಲೀಕನಿಂದ ಸ್ಥಳದ ವಿಕಾಸದ (Development) ಅಧಿಕಾರಪತ್ರವನ್ನು (Power of Attorney) ದಾಖಲಿಸಿಕೊಂಡಿದ್ದಾರೆ ಎಂಬುದನ್ನು ನೋಡಿಕೊಳ್ಳಬೇಕು. ಸ್ಥಳದ ಪ್ರಾಪರ್ಟಿ ಕಾರ್ಡ್, ವಿದ್ಯುತ್, ಗ್ಯಾಸ್ ಇತ್ಯಾದಿ ಬಿಲ್ ಮತ್ತು ಸೊಸೈಟಿಯ ‘ನಿರಪೇಕ್ಷಣಾಪತ್ರ (NOC)’ ಇತ್ಯಾದಿ ಎಲ್ಲ ಕಾಗದಪತ್ರಗಳನ್ನು ಪರಿಶೀಲಿಸಿಕೊಳ್ಳಬೇಕು. ಕಾಗದ ಪತ್ರಗಳು ಸಿಗದಿದ್ದರೆ ಅದರ (Power of Attorney) ಕೊಟ್ಟಿದ್ದಾರೆಯೆ ಎಂಬುದನ್ನು ನೋಡಬೇಕು. (ಆಸ್ತಿಯ ಮಾರಾಟ ಅಥವಾ ಖರೀದಿ ಮಾಡುವಾಗ ಸ್ಥಳದ ಮಾಲಕರ ವತಿಯಿಂದ ಅಧಿಕೃತವಿದೆಯೆಂಬುದನ್ನು ಸಿದ್ಧಪಡಿಸಲು ಇದು ಆವಶ್ಯಕವಾಗಿದೆ), ಸ್ಥಳದ NIL Encumbrance ಹಾಗೂ ಕ್ಷೇತ್ರ ವಿಕಾಸ ಪ್ರಾಧಿಕರಣ, ನೀರು ಸರಬರಾಜು ಹಾಗೂ ಮಲನಿಃಸ್ಸಾರಣ ಮಂಡಳಗಳು, ವಿದ್ಯುತ್ ಮಂಡಳಗಳು ಮತ್ತು ಮಹಾನಗರಪಾಲಿಕೆ ಇತ್ಯಾದಿಗಳಿಂದ ಮನ್ನಣೆ ಮತ್ತು ನಿರಪೇಕ್ಷಣಾ ಪತ್ರ ಇರುವುದು ಆವಶ್ಯಕವಾಗಿದೆ.

ಐ. ಒಂದು ವೇಳೆ ನಿರ್ಮಾಣ ಕಾರ್ಯದ ಪ್ರಕಲ್ಪವು ಸ್ಥಿರ ಸಂಪತ್ತು ನಿಯಮಾವಳಿ ಪ್ರಾಧಿಕರಣ (Real Estate Regulatory Authority) ಅಂತರ್ಗತ ಬರುತ್ತಿದ್ದರೆ, ನಿರ್ಮಾಣ ಕಾರ್ಯದ ಗುತ್ತಿಗೆದಾರನು ಹಾಗೆ ದಾಖಲೆ ಮಾಡಿರುವುದರ ಕಾಗದಪತ್ರವನ್ನು ಪರಿಶೀಲಿಸಬೇಕು.

೫. ಫ್ಲ್ಯಾಟ್ ಗೃಹನಿರ್ಮಾಣ ಸಂಸ್ಥೆಯದ್ದಾಗಿದ್ದರೆ ಏನು ಮಾಡಬೇಕು ?

ಅ. ಮಾರಾಟ ಮಾಡುವ ವ್ಯಕ್ತಿ ಸೊಸೈಟಿಯ ಸದಸ್ಯನಾಗಿದ್ದಾನೆ ಎಂಬುದನ್ನು ಖಚಿಪಡಿಸಿಕೊಳ್ಳಲು ಪ್ರಮಾಣಪತ್ರ ನೋಡಬೇಕು.

ಆ. ಒಟ್ಟು ಫ್ಲ್ಯಾಟ್‌ಗಳಲ್ಲಿ ಕನಿಷ್ಟ ಶೇ. ೬೦ ರಷ್ಟು ಫ್ಲ್ಯಾಟ್ಸ್‌ಗಳ ಮಾರಾಟ ಆದನಂತರ ಎಲ್ಲ ಸದಸ್ಯರ ಸಭೆ ಕರೆಯಬೇಕು ಮತ್ತು ಸೊಸೈಟಿ, ಕಂಪನಿ ಅಥವಾ ಅಪಾರ್ಟ್‌ಮೆಂಟ್ ಅಸೋಶಿಯೇಶನ್ ಇವುಗಳಲ್ಲಿ ಯಾವುದು ಬಹುಮತ ಹೊಂದಿದೆಯೋ, ಅದನ್ನು ಬಿಲ್ಡರ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ಇ. ಸೊಸೈಟಿ, ಕಂಪನಿ ಅಥವಾ ಅಪಾರ್ಟ್‌ಮೆಂಟ್ ಅಸೋಶಿಯೇಶನ್ ಸ್ಥಾಪನೆ ಮಾಡುವ ಮೊದಲು ಅದರ ಎಲ್ಲ ನಿಯಮಗಳನ್ನು ಫ್ಲಾಟ್‌ನ ಎಲ್ಲ ಸದಸ್ಯರಿಗೆ ಓದಿ ತೋರಿಸಬೇಕು ಮತ್ತು ಅದನ್ನು ಸಭೆಯಲ್ಲಿ ಸಮ್ಮತಿಸಿಕೊಳ್ಳಬೇಕು.

ಈ. ಸದಸ್ಯರಿಂದ ತೆಗೆದುಕೊಂಡಿರುವ ವನ್‌ಟೈಮ್ ಮೈಂಟೆನೆನ್ಸ್ ಚಾರ್ಜ್ ಅಥವಾ ಕಾರ್ಪಸ್ ಫಂಡ್‌ಅನ್ನು ಸೊಸೈಟಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಜಮೆ ಮಾಡಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಉ. ಮಾರಾಟ ಮಾಡುವವರಿಂದ ಫ್ಲ್ಯಾಟ್ ವರ್ಗಾವಣೆ ಆಗಿದೆ ಎಂಬ ಅಧಿಕೃತ ಪತ್ರ (ಅಲೋಟ್‌ಮೆಂಟ್ ಲೆಟರ್) ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

ಊ. ಫ್ಲ್ಯಾಟ್ ಮಾರಾಟ ಮಾಡಿರುವ ವ್ಯಕ್ತಿಯಲ್ಲಿ ಗೃಹನಿರ್ಮಾಣ ಸಂಸ್ಥೆಯು ನೀಡಿರುವ ಶೇರ್ ಸರ್ಟಿಫಿಕೇಟ್‌ಗಳನ್ನು ನೋಡಬೇಕು.

ಎ. ಸಂಸ್ಥೆಯ ಯಾವುದೇ ರೀತಿಯ ಬಿಲ್ ಬಾಕಿ ಇಲ್ಲ ಎಂಬುದನ್ನು ಕಾಗದಪತ್ರದ ಮೂಲಕ ಖಚಿತಪಡಿಸಿಕೊಳ್ಳಬೇಕು.

ಐ. ಮೂಲ ‘ಡೀಡ್ ಆಫ್ ಕನ್ವೆಯನ್ಸ್ ದಸ್ತ್ (ಗೃಹನಿರ್ಮಾಣ ಸಂಸ್ಥೆಗೆ ಅನ್ವಯವಾಗುತ್ತದೆ) ಪರಿಶೀಲಿಸಬೇಕು.

ಒ. ಮೂಲ ಮಾಲೀಕನು ಸಾಲ ತೆಗೆದುಕೊಂಡಿದ್ದರೆ, ಬ್ಯಾಂಕಿನ ಅನುಮತಿ ಇಲ್ಲದೇ ಖರೀದಿ ಅಥವಾ ಹಸ್ತಾಂತರ ಮಾಡಬಾರದು.

ಔ. ಸೊಸೈಟಿ ಖರೀದಿ ಮಾಡಿದ ಭೂಮಿಯ ಒರಿಜಿನಲ್ ಕಾಗದಪತ್ರವನ್ನು ನೋಡಬೇಕು.

ಅಂ. ಕೃಷಿಯೇತರ (NA) ಸಮ್ಮತಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

ಕ. ಸೊಸೈಟಿಯ ‘No Dues’ ಪ್ರಮಾಣಪತ್ರವನ್ನು ನೋಡಬೇಕು.

ಖ. ಇತ್ತೀಚೆಗಿನ ೩ ತಿಂಗಳ ಆಸ್ತಿ ಮಾಲೀಕತ್ವ ಹಕ್ಕು ಅಥವಾ ಪಿಆರ್ ಕಾರ್ಡ್‌ನಲ್ಲಿನ ನೋಂದಣಿಯನ್ನು ನೋಡಬೇಕು.

ಗ. ಮೂಲ ಮಾಲೀಕನು ಆ ಫ್ಲ್ಯಾಟ್‌ನ ಮೇಲೆ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಅದನ್ನು ಸಂಪೂರ್ಣ ಮರುಪಾವತಿ ಮಾಡಿದ್ದರೆ, ಆ ಮಾಲೀಕನಲ್ಲಿ ಬ್ಯಾಂಕಿನ ‘No Dues’ ಪ್ರಮಾಣಪತ್ರ ಮತ್ತು ‘ಹಕ್ಕನ್ನು ತ್ಯಜಿಸುವ ಪ್ರಮಾಣಪತ್ರವಿರುವುದನ್ನು ಖಚಿತ ಪಡಿಸಬೇಕು.

ಘ. ವ್ಯವಹಾರ ಮಾಡಿರುವ ಆಸ್ತಿಯು ಸಂಯುಕ್ತ ಆಸ್ತಿ ಆಗಿದ್ದರೆ ಹಾಗೂ ಮಾಲೀಕರಲ್ಲಿ ಯಾರಾದರೂ ನಿಧನರಾಗಿದ್ದರೆ, ವಾರಸ್ಸು ಹಕ್ಕು ಪ್ರಮಾಣಪತ್ರ ದೊರೆತ ನಂತರವೇ ವ್ಯವಹಾರವನ್ನು ಮಾಡಬೇಕು.

ಚ. ಒಂದುವೇಳೆ ಬಿಲ್ಡರ್‌ನು ಸೊಸೈಟಿಯ ಮೂಲಕ ಹಸ್ತಾಂತರ ಮಾಡುವುದಿಲ್ಲ ಎಂದಾದರೆ ಇತರ ಯಾವ ಪರ್ಯಾಯ ವ್ಯವಸ್ಥೆಯಲ್ಲಿ ಅವನು ಹಸ್ತಾಂತರಿಸುತ್ತಾನೆ, ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಆ ಪದ್ಧತಿ ಯೋಗ್ಯವಿದೆಯೆ ಎಂಬುದನ್ನು ವಕೀಲರಿಂದ ಖಾತ್ರಿಪಡಿಸಿಕೊಳ್ಳಬೇಕು.

೬. ಕಟ್ಟಡಕಾಮಗಾರಿ ನಕಾಶೆಯ ಕುರಿತು ಏನೆಲ್ಲ ಕಾಳಜಿ ವಹಿಸಬೇಕು ?

ಅ. (*) ನಮ್ಮ ಸ್ಥಳವು ಗ್ರಾಮಪಂಚಾಯತ ಅಥವಾ ನಗರ ಪಾಲಿಕೆಯ ಕ್ಷೇತ್ರದಲ್ಲಿದ್ದರೂ ಕಟ್ಟಡಕಾಮಗಾರಿಗೆ ಅನುಮತಿ ಪಡೆಯಲು ಆ ಕಾಮಗಾರಿಯ ಸಂಕಲ್ಪಿತ ನಕಾಶೆಯನ್ನು ಪ್ರಸ್ತುತ ಪಡಿಸಬೇಕಾಗುತ್ತದೆ. ಈ ನಕಾಶೆಯನ್ನು ಸಂಬಂಧಿತ ವಿಭಾಗದ ಕಡೆಗೆ ಮಾನ್ಯತೆಗಾಗಿ ಪ್ರಸ್ತುತಪಡಿಸುವಾಗ ಅದರ ಮೇಲೆ ಸಂಬಂಧಿತ ವಿಭಾಗಗಳ ಕಡೆಗೆ ಚಾರ್ಟರ್ಡ್ ಅಭಿಯಂತರು ಅಥವಾ ಆರ್ಕಿಟೆಕ್ಟ್ ಎಂದು ನೋಂದಣಿಕೃತವಿರುವ ವಾಸ್ತುಶಿಲ್ಪ ಅಭಿಯಂತರ (ಸಿವಿಲ್ ಇಂಜಿನೀಯರರ) ಅಥವಾ ಗೃಹಶಿಲ್ಪಕಾರರ (ಆರ್ಕಿಟೆಕ್ಟ್) ಹಸ್ತಾಕ್ಷರವು ಇರಬೇಕಾಗುತ್ತದೆ, ಅಂದರೆ ಮಾತ್ರ ಆ ನಕಾಶೆಗೆ ಸಮ್ಮತಿ ಸಿಗುತ್ತದೆ, ಇಲ್ಲದಿದ್ದರೆ ಇಲ್ಲ.

ಆ. (*) ಬಹುತೇಕ ಬಾರಿ ನಕಾಶೆಯ ಮೇಲೆ ಕಟ್ಟಡಕಾಮಗಾರಿ ವೃತ್ತಿಪರರ ಹಸ್ತಾಕ್ಷರವಿರುತ್ತದೆ; ಆದರೆ ಅದು ವೃತ್ತಿಪರ ವಾಸ್ತುಶಿಲ್ಪ ಅಭಿಯಂತರನೇ (ಸಿವಿಲ್ ಇಂಜಿನೀಯರ್) ಇರುತ್ತಾರೆ, ಎಂದಿಲ್ಲ. ಆದ್ದರಿಂದ ಸ್ಥಳದ ಮಾಲಿಕತ್ವ ಹಕ್ಕು ಮತ್ತು ಸಂಕಲ್ಪಿತ ನಕಾಶೆಯನ್ನು ತಜ್ಞರಿಂದ ಪರಿಶೀಲಿಸಿಕೊಳ್ಳಬೇಕು.

ಇ. (*) ನಗರಪಾಲಿಕೆಯ ಅಥವಾ ಗ್ರಾಮಪಂಚಾಯತಿಯ ನಿಯಮಕ್ಕನುಸಾರ ಆ ಸ್ಥಳದಲ್ಲಿ ಕಾಮಗಾರಿಯ ನಕಾಶೆಯು ಹೊಂದುತ್ತದೆಯೇ ಎಂದು ಧೃಡಪಡಿಸಿಕೊಳ್ಳಬೇಕು. ಕಟ್ಟಡ ಕಾಮಗಾರಿಯ ಕ್ಷೇತ್ರಫಲವು ನಿಯಮಕ್ಕನುಸಾರ ಹೊಂದುತ್ತದೆಯೇ (ಮಾನ್ಯ ಎಫ್.ಎಸ್.ಐ.) ಎಂದು ಖಚಿತಪಡಿಸಿಕೊಳ್ಳಬೇಕು.

ಈ. (*) ಮಾನ್ಯತೆ ಪಡೆದ ನಕಾಶೆಯ ಮೇಲೆ ವಾಸ್ತುಶಿಲ್ಪ ಅಭಿಯಂತರ ಅಥವಾ ಆರ್ಕಿಟೆಕ್ಟ್ ಇವರ ಹಸ್ತಾಕ್ಷರವಿರುವ ಬಗ್ಗೆ ದೃಢಿಕರಿಸಬೇಕು.

* ಟಿಪ್ಪಣಿ – ಎಲ್ಲ ಕಾಗದಪತ್ರಗಳನ್ನು ಪರಿಚಯವಿರುವ ತಜ್ಞ ವಾಸ್ತುಶಿಲ್ಪ ಅಭಿಯಂತರ ಮತ್ತು ನ್ಯಾಯವಾದಿಗಳಿಗೆ ತೋರಿಸಬೇಕು.

೭. ಕಟ್ಟಡಕಾಮಗಾರಿಯ ಇತರ ವಿಷಯಗಳ ಕುರಿತು ಯಾವ ಮಾಹಿತಿಗಳನ್ನು ಪಡೆಯಬೇಕು ?

ಅ. ಕಟ್ಟಡಕಾಮಗಾರಿ ಒಪ್ಪಿಗೆಯಾದ ನಕಾಶೆಯಂತೆ ಇದೆಯೇ, ಎಂದು ನೋಡಬೇಕು.

ಆ. ಯೋಜನೆಗಳ ಅಂತರ್ಗತ ಫ್ಲಾಟ್‌ನ ಕಟ್ಟಡಕಾಮಗಾರಿಯನ್ನು ಮಾಡುವ ಮೊದಲು ಅಥವಾ ನಡೆದಿರುವಾಗ ನಮಗೆ ಆ ಕಟ್ಟಡದ ಬಿಲ್ಡರ್‌ನೊಂದಿಗೆ ಅಥವಾ ಗುತ್ತಿಗೆದಾರರೊಂದಿಗೆ ಆ ತಾಲೂಕಿನ ಉಪನೋಂದಣಾಧಿಕಾರಿ ಬಳಿ ನೋಂದಣಿಕೃತ ಲಿಖಿತಕರಾರನ್ನು ಮಾಡಬೇಕಾಗುತ್ತದೆ. ಇದರಿಂದ ಯಾವುದೇ ತಕರಾರು ಆದಾಗ ನಮಗೆ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅವಕಾಶ ಇರುತ್ತದೆ. (ಕೆಲವು ಬಿಲ್ಡರ್‌ರು ಲಿಖಿತ ಸ್ವರೂಪದ ಕರಾರು ಮಾಡಲು ಒಪ್ಪಿಕೊಳ್ಳುವುದಿಲ್ಲ.) ಈ ಒಪ್ಪಂದವನ್ನು ಮಾಡಿಕೊಳ್ಳುವಾಗ ಅದರಲ್ಲಿ ಮುಂದಿನ ಅಂಶಗಳಿರುವುದು ಆವಶ್ಯಕವಾಗಿರುತ್ತದೆ.

ಇ. ಕಟ್ಟಡಕಾಮಗಾರಿ ವೃತ್ತಿಪರನು ಕಟ್ಟಡದ ಕಾಮಗಾರಿಯ ಕುರಿತು ಯಾವ ಬೆಲೆಯನ್ನು ಹೇಳುವನೋ, ಆ ಬೆಲೆಯಲ್ಲಿ ಕಟ್ಟಡಕಾಮಗಾರಿ ಕ್ಷೇತ್ರವನ್ನು ಯಾವ ಪದ್ಧತಿಯಲ್ಲಿ ಅಳೆಯಲಾಗುವುದು, (ಕಾರ್ಪೆಟ್ ಎರಿಯಾ, ಬಿಲ್ಟಪ್ ಎರಿಯಾ. ಸುಪರ್ ಬಿಲ್ಟಪ್ ಎರಿಯಾ ಇವುಗಳ ಪೈಕಿ ಯಾವುದಿದೆ) ಎಂಬ ಉಲ್ಲೇಖವಿರುವುದು ಆವಶ್ಯಕವಾಗಿದೆ. ನಿರ್ಧರಿಸಿದ ದರವು ವಸ್ತು ಮತ್ತು ಸೇವಾಶುಲ್ಕಗಳೊಂದಿಗೆ (ಜಿಎಸ್ ಟಿ) ಇರಬೇಕು ಮತ್ತು ಒಪ್ಪಂದದಲ್ಲಿ ಆ ರೀತಿ ನೋಂದಣಿ ಸಹಿತ ಇರಬೇಕು.

೮. ಕರಾರುಪತ್ರಗಳನ್ನು ಮಾಡುವಾಗ ಮುಂದಿನ ಕಾಗದಪತ್ರಗಳು ಮತ್ತು ದಾಖಲೆಪತ್ರಗಳು ಇರುವುದು ಆವಶ್ಯಕವಾಗಿದೆ.

ಕೆಲವು ಕಟ್ಟಡಕಾಮಗಾರಿ ವೃತ್ತಿಪರರು ಫ್ಲಾಟ್ ಮಾರಾಟವಾಗಬೇಕೆಂದು ಬಾಯಿಮಾತಿನಲ್ಲಿ ಆಶ್ವಾಸನೆಯನ್ನು ನೀಡಲು ಪ್ರಯತ್ನಿಸುತ್ತಾರೆ. ಲಿಖಿತ ಕರಾರಿನಲ್ಲಿ ನಮೂದಿಸಲು ಮುಂದೂಡುತ್ತಾರೆ. ಬಾಯಿಮಾತಿನ ಮೇಲೆ ವಿಶ್ವಾಸವಿಡಬಾರದು ಅಥವಾ ಅದಕ್ಕೆ ಬಲಿಯಾಗಬಾರದು ಆ ಎಲ್ಲ ಅಂಶಗಳನ್ನು ಕರಾರುಪತ್ರದಲ್ಲಿ ತೆಗೆದುಕೊಳ್ಳುವುದು ಮಹತ್ವದ್ದಾಗಿದೆ. ಕೆಲವೊಮ್ಮೆ ಕಟ್ಟಡಕಾಮಗಾರಿಯಲ್ಲಿ ಏನಾದರೂ ಬದಲಾವಣೆಯಾದರೆ ಅದರ ಅಂದಾಜು ಪತ್ರವನ್ನು ಕಟ್ಟಡಕಾಮಗಾರಿ ವೃತ್ತಿಪರರಿಂದ ಪಡೆಯಬೇಕು ಮತ್ತು ಅದರ ನಂತರವೇ ಆ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಈ ಬಗ್ಗೆ ಬಾಯಿಮಾತಿನಲ್ಲಿ ಹೇಳದೇ ಅದನ್ನು ಕಟ್ಟಡಕಾಮಗಾರಿ ವೃತ್ತಿಪರರಿಂದ ಲಿಖಿತ ಸ್ವರೂಪದಲ್ಲಿ ಪಡೆಯಬೇಕು ಮತ್ತು ನಮ್ಮ ಪರಿಚಯದ ವಾಸ್ತುಶಿಲ್ಪ ಅಭಿಯಂತರಿಗೆ ಮತ್ತು ನ್ಯಾಯವಾದಿ ಗಳಿಗೆ ಅದನ್ನು ತೋರಿಸಬೇಕು.

ಅ. ಯೋಜನೆಯ (ಪ್ರಾಜೆಕ್ಟ್‌ನ) ಹೆಸರು, ಯೋಜನೆಯಲ್ಲಿ ಯಾವ ಮಹಡಿಯ ಮೇಲೆ ಮತ್ತು ಯಾವ ದಿಕ್ಕಿಗೆ ಫ್ಲಾಟ್ ಇದೆ, ಅದರ ವಿವರ, ಫ್ಲಾಟ್‌ನ ಕ್ಷೇತ್ರ (ಕಾರ್ಪೆಟ್, ಬಿಲ್ಟಪ್, ಸುಪರ್ ಬಿಲ್ಟಪ್ ಇವುಗಳಿಗನುಸಾರ), ಒಪ್ಪಿಗೆಯಾದ ನಕಾಶೆಯ ಛಾಯಾಂಕಿತ ಪ್ರತಿಯ ಮೇಲೆ ನಾವು ತೆಗೆದುಕೊಳ್ಳುತ್ತಿರುವ ಫ್ಲಾಟ್‌ನ ಮಹಡಿಯ ‘ಡಿಮೊಕ್ರೇಶನ್ ಮಾಡುವುದು ಮತ್ತು ಬಿಲ್ಡರನು ಆ ಫ್ಲಾಟ್‌ಗೆ ನೀಡಿದ ಕ್ರಮಾಂಕವನ್ನು ಆ ಫ್ಲಾಟ್‌ಯ ಪಾರ್ಕಿಂಗ್ ಜಾಗಕ್ಕೆ ನೀಡಿ ದೃಢೀಕರಿಸುವುದು.

ಆ. ಬಿಲ್ಡರ್ ನೀಡುತ್ತಿರುವ ಗುಣಾತ್ಮಕ ಸುಖ-ಸೌಲಭ್ಯಗಳಿರುವ ತಖ್ತೆಯನ್ನು (Specification) ಕರಾರು ಪತ್ರಕ್ಕೆ ಜೋಡಿಸಬೇಕು.

ಇ. ನಮಗೆ ಪಾರ್ಕಿಂಗ್‌ಗಾಗಿ ವಿಭಜನೆ ಮಾಡಿ ನೀಡಿದ ಕ್ಷೇತ್ರವು ನಕಾಶೆಯ ಮೇಲೆ ರೇಖಾಂಕಿತ ಮಾಡಿ ಅದರ ಮೇಲೆ ಬಿಲ್ಡರ್‌ನ ಮತ್ತು ನಮ್ಮ ಹಸ್ತಾಕ್ಷರ ಮಾಡಬೇಕು.   ಈ. ಬಿಲ್ಡರ್‌ನು ಫ್ಲಾಟ್‌ನ ನೀರು ಮತ್ತು ವಿದ್ಯುತ್ ಜೋಡಣೆ ಯೊಂದಿಗೆ, ಮೀಟರನೊಂದಿಗೆ ಚಾಲು ಮಾಡಿಕೊಡುವುದು ಮತ್ತು ಅದಕ್ಕಾಗಿ ಮುಂಗಡವಾಗಿ ಕೊಟ್ಟ ಹಣ, ಸಮ್ಮತಿ ಪಡೆದುಕೊಳ್ಳಲು ಬೇಕಾಗುವ ಖರ್ಚನ್ನು ಖರೀದಿ ಮಾಡುವವರು ಭರಿಸುವರು.

ಉ. ಕಟ್ಟಡ ಕಾಮಗಾರಿಯ ಒಪ್ಪಂದಕ್ಕಾಗಿ ಯಾರನ್ನು ಸಾಕ್ಷಿದಾರರನ್ನಾಗಿ ಮಾಡಬೇಕು, ಎಂಬ ಬಗ್ಗೆ ಸಲಹೆಯನ್ನು ನ್ಯಾಯವಾದಿಗಳಿಂದ ಪಡೆಯಬೇಕು. ಕಟ್ಟಡಕಾಮಗಾರಿ ವೃತ್ತಿಪರನು ಕರಾರುಪತ್ರವನ್ನು ನೀಡಿದ ನಂತರ ಅದನ್ನು ನ್ಯಾಯವಾದಿಗಳಿಂದ ಪರಿಶೀಲಿಸಿಕೊಂಡು ನಂತರವೇ ಅಂತಿಮ ಕರಾರು ಮಾಡಿಕೊಳ್ಳಬೇಕು. ಯಾವುದೇ ಮೋಸಕ್ಕೊಳಗಾಗಬಾರದೆಂದು, ಸಾಧ್ಯವಿದ್ದರೆ, ಕರಾರಿನ ಮಾತುಗಳು ಅಥವಾ ಕರಾರು ಮಾಡುವಾಗ ನಮ್ಮ ಪರಿಚಯವಿರುವ ವಾಸ್ತುಶಿಲ್ಪ ಅಭಿಯಂತರನ್ನು ಜೊತೆಗೆ ಕರೆದುಕೊಂಡು ಹೋಗಬೇಕು.

ಊ. ಫ್ಲಾಟ್‌ಯ ಕಾಮಗಾರಿ ನಡೆದಿರುವಾಗ ಕಾಮಗಾರಿಯ ಪ್ರತಿಯೊಂದು ಹಂತದಲ್ಲಿ ನಮಗೆ ಸ್ವಲ್ಪ ಮೊತ್ತವನ್ನು ಆ ಬಿಲ್ಡರ್‌ಗೆ ಕೊಡಬೇಕಾಗುತ್ತದೆ. ಆ ಎಲ್ಲ ಮೊತ್ತವನ್ನು ಕೇವಲ ಧನಾದೇಶದ ಮೂಲಕ (ಚೆಕ್) ಕೊಡಬೇಕು, ಹಾಗೆಯೇ ಅದರ ದೃಢ ರಸೀದಿಯನ್ನು ಅದೇ ವೇಳೆಗೆ ಪಡೆಯಬೇಕು. ಇದರಿಂದ ಅದರ ನೋಂದಣಿ ಉಳಿಯುವುದು. ನಗದು ಹಣವನ್ನು ಕೊಡಬಾರದು. (ಈ ಮೊತ್ತವು ನಿರ್ಧರಿಸಿದ ಕಾಮಗಾರಿಯ ದರಕ್ಕನುಸಾರ ನಿಶ್ಚಯಿಸಿದ ಕ್ಷೇತ್ರಕ್ಕೆ ಗುಣಿಸಿ ಬರುವಂತೆ ಇರುತ್ತದೆ.) ಈ ಮೊತ್ತವನ್ನು ಕೊಡುವಾಗ ಇಬ್ಬರ ಸಾಮಾನ್ಯ ಪರಿಚಯದಲ್ಲಿನ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ನೀಡಬೇಕು. ಕಾಮಗಾರಿಯ ಮೊತ್ತವನ್ನು ನೀಡುವ ಹಂತಗಳು ಕೆಳಗಿನಂತಿರುತ್ತದೆ.

ಫ್ಲಾಟ್‌ಯ ದರ ಮತ್ತು ರಶೀದಿಯ ಹಂತಗಳು ಯಾವ ಮಹಡಿಯವರೆಗಿದೆ, ಅದಕ್ಕನುಸಾರ ನಿರ್ಧರಿಸಲಾಗುತ್ತದೆ. ಒಂದು ವೇಳೆ ಕಟ್ಟಡಕಾಮಗಾರಿ ಯೋಜನೆಯು ಸ್ಥಿರಾಸ್ತಿ ನಿಯಾಮಕ ಪ್ರಾಧಿಕರಣ (Real-Estate Regulatory Authority) ಅಂತರ್ಗತ ನಿಶ್ಚಿತವಿದ್ದಲ್ಲಿ ಅದಕ್ಕನುಸಾರ ರಸೀದಿಯನ್ನು ನೀಡಬೇಕು. ಯಾವ ಸ್ಥಳದಲ್ಲಿ ಮೇಲಿನ ಕಾಯದೆಯು ಅನ್ವಯಿಸುವುದಿಲ್ಲವೋ, ಅಲ್ಲಿ ಮುಂದೆ ನಮೂದಿಸಲಾದ ಉದಾಹರಣೆಗನುಸಾರ ರಶೀದಿಯನ್ನು ಕೊಡಬೇಕು. ಪ್ರತಿಯೊಂದು ಹಂತದಲ್ಲಿ ಇದೇ ರೀತಿ ಕೊಡಬೇಕಾದ ಮೊತ್ತದ ಉಲ್ಲೇಖವು ಲಿಖಿತ ನೋಂದಣಿಕೃತ ಕರಾರಿನಲ್ಲಿ ಆಗುವುದು ಆವಶ್ಯಕವಾಗಿದೆ.

ಫ್ಲಾಟ್ ಎರಡನೇ ಮಹಡಿಯಲ್ಲಿದೆ ಎಂದು ಗ್ರಹಿಸಿಕೊಂಡು ಪಾವತಿಯ ಹಂತಗಳು ಹೇಗೆ ಇಡಬೇಕು ಎಂಬುದಕ್ಕೆ ಉದಾಹರಣೆ.

ಈ ಪದ್ಧತಿಯಿಂದ ವ್ಯವಹಾರ ಮಾಡುವುದು ಆದರ್ಶ ಪದ್ಧತಿಯಾಗಿದೆ. ಇದರಲ್ಲಿ ತಾರತಮ್ಯದಿಂದ ಸ್ವಲ್ಪ ಬದಲಾಗಬಹುದು. ಒಮ್ಮೆಲೆ ಭಾರಿ ಮೊತ್ತದ ವಹಿವಾಟುಗಳಿಂದ ಹಣ ಸಿಲುಕಿಕೊಳ್ಳುವ ಅಥವಾ ವಂಚನೆಗೆ ಕಾರಣವಾಗಬಹುದು.

೯. ಕಾಮಗಾರಿಯ ಗುಣಮಟ್ಟ ಮತ್ತು ಪೂರೈಸುವಿಕೆ ಇತ್ಯಾದಿಗಳ ಬಗ್ಗೆ ಏನು ಮಾಡಬೇಕು ?

ಯೋಜನೆಯ ನಿರ್ಮಾಣದ ಸಮಯದಲ್ಲಿ ಬಿಲ್ಡರ್ ಬಳಸುವ ವಸ್ತುಗಳನ್ನು ಮತ್ತು ಅವನ ಕೆಲಸ ಮಾಡುವ ಪದ್ಧತಿಯನ್ನು ಪರಿಣಿತ ಸಿವಿಲ್ ಎಂಜಿನಿಯರ್‌ಗೆ ತೋರಿಸಿ ಧೃಢಕರಿಸಿಕೊಳ್ಳಬೇಕು. ಅದರಲ್ಲಿ ಯಾವುದೇ ದೋಷಗಳು ಕಂಡುಬಂದರೆ, ಬಿಲ್ಡರ್ ಜೊತೆಗೆ ಮಾತನಾಡಬೇಕು.

೧೦. ಫ್ಲಾಟ್‌ಅನ್ನು ಸ್ವಾಧೀನ ಪಡಿಸಿಕೊಳ್ಳುವಾಗ ಏನು ಮಾಡಬೇಕು ?

ಫ್ಲಾಟ್‌ಅನ್ನು ಸ್ವಾಧೀನಪಡಿಸಿಕೊಳ್ಳಲು ಬಿಲ್ಡರ್ ನಮಗೆ ತಿಳಿಸಿದ ನಂತರ, ನಮ್ಮ ಮಾಹಿತಿಯುಳ್ಳ ತಜ್ಞ ಸಿವಿಲ್ ಎಂಜಿನಿಯರ್ ಮತ್ತು ನ್ಯಾಯವಾದಿಗಳಿಂದ ಪ್ರತ್ಯಕ್ಷವಾಗಿ ಫ್ಲ್ಯಾಟ್‌ಗಳು ಮತ್ತು ಕಾಗದಪತ್ರಗಳನ್ನು ಪರಿಶೀಲಿಸಬೇಕು. ನಿರ್ಮಾಣ ಕಾರ್ಯ ಪೂರ್ಣವಾದ ನಂತರ ಕರಾರು ಪತ್ರಕ್ಕನುಸಾರ ಸ್ಲ್ಯಾಬ್-ಗೋಡೆಗಳಲ್ಲಿ ಬಿರುಕು ಇಲ್ಲವಲ್ಲ, ನಿರ್ಮಾಣ ಕಾರ್ಯದಲ್ಲಿ ಲೀಕೇಜ್ ಇಲ್ಲವಲ್ಲ, ನೀರಿನ ಹರಿವು ಯೋಗ್ಯವಾಗಿದೆಯೇ, ಬಾಗಿಲು, ಕಿಟಕಿಗಳು ವ್ಯವಸ್ಥಿತವಾಗಿದೆಯಲ್ಲವೇ, ನೆಲಹಾಸು, ಸ್ಕರ್ಟಿಂಗ್ ಟೊಳ್ಳು ಇಲ್ಲವಲ್ಲ, ಗಿಲಾಯಿ ಒಂದೇ ಲೆವೆಲ್‌ನಲ್ಲಿದೆಯೇ ?, ನೀರು-ವಿದ್ಯುತ್ ಯೋಗ್ಯವಾಗಿದೆಯೇ, ಎಂಬುದನ್ನು ಪ್ರತ್ಯಕ್ಷ ಪರಿಶೀಲನೆ ಮಾಡಿ ಸಮಾಧಾನಕರವಾಗಿದೆಯಲ್ಲವೇ ಎಂಬುದು ಧೃಡಪಡಿಸಿ ಒಪ್ಪಿಗೆ ಆದನಂತರವೇ ಖರೀದಿಯ ಪತ್ರ / ಕನ್ವೆಯನ್ಸ್ ಡೀಡ್ ಮಾಡಬೇಕು. ಎಲ್ಲಾ ವಹಿವಾಟು ಖಾತೆಗಳು, ರಶೀದಿಗಳು, ದಾಖಲೆಗಳನ್ನು ಪೂರ್ಣಗೊಳಿಸಿ ಮತ್ತು ಬಿಲ್ಡರ್‌ನಿಂದ ಪೊಸೆಶನ್ ಪ್ರಮಾಣಪತ್ರವನ್ನು ಪಡೆಯಬೇಕು.

ನಿರ್ಮಾಣಕಾರ್ಯ ಪೂರ್ಣಗೊಂಡ ನಂತರ, ಅದರಲ್ಲಿ ಬದಲಾವಣೆಗಳೊಂದಿಗೆ ಪರಿಷ್ಕೃತ ನಕ್ಷೆಯನ್ನು ತಯಾರಿಸಿ ಅದಕ್ಕನುಸಾರ ಕಂಪ್ಲಿಶನ್ ಪ್ರಮಾಣಪತ್ರವನ್ನು ಪಡೆಯಬೇಕು. ಬಿಲ್ಡರ್‌ನಿಂದ ಖರೀದಿಪತ್ರ ಮತ್ತು ಕಂಪ್ಲೀಶನ್ ಪ್ರಮಾಣ ಪತ್ರವನ್ನು ಒಟ್ಟಿಗೆ ತೆಗೆದುಕೊಂಡ ನಂತರವೇ ಫ್ಲಾಟ್ ಅನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಫ್ಲಾಟ್ ಖರೀದಿಸುವಾಗ ಆದಷ್ಟು ಸಿದ್ಧವಾಗಿದ್ದ ಫ್ಲ್ಯಾಟ್‌ಗೆ ಆದ್ಯತೆ ನೀಡಬೇಕು. – ಶ್ರೀ. ಮಧುಸೂದನ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೧೦.೨೦೨೦)

ಮನೆ ಅಥವಾ ಸ್ಥಳದ ಖರೀದಿ ಅಥವಾಮನೆಯನ್ನು ಬಾಡಿಗೆಗೆ ಪಡೆಯುವ ಪ್ರಕ್ರಿಯೆಯಲ್ಲಿ ವಂಚನೆ ಮಾಡುವ ಅಥವಾ ಆ ರೀತಿ ಮಾಡುತ್ತಿರುವ ಅನುಮಾನಸ್ಪದ ವ್ಯಕ್ತಿಯ ಮಾಹಿತಿ ತಿಳಿಸಿ !

೧. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಫ್ಲ್ಯಾಟ್‌ಗಳಿಗೆ ಹಣವನ್ನು ವಿಧಿಸುವುದು

೨. ಕಾನೂನುಬದ್ಧವಾಗಿ ಕಡ್ಡಾಯವಾಗಿರುವ ಕಾಗದಪತ್ರಗಳನ್ನು ನೀಡದಿರುವುದು ಅಥವಾ ಅದರ ಬಗ್ಗೆ ಸಂದಿಗ್ಧದಲ್ಲಿ ಇರಿಸುವುದು

೩. ಸಾಧಕರಿಗೆ ಮಾರಾಟಕ್ಕಾಗಿ ತೋರಿಸಲಾಗಿರುವ ಫ್ಲಾಟ್ಗಳನ್ನು ಕಾನೂನುಬದ್ಧವಾಗಿ ಸಲ್ಲಿಸುವ ಕ್ರಮ ಪೂರ್ಣಗೊಳಿಸದಿರುವುದು.

೪. ವಿವಿಧ ಸೌಲಭ್ಯಗಳ ಮೌಖಿಕ ಆಮಿಷವನ್ನು ತೋರಿಸುವ ಮೂಲಕ ಹೆಚ್ಚುವರಿ ಶುಲ್ಕ ವಿಧಿಸುವುದು

೫. ಕಟ್ಟಡಕಾಮಗಾರಿ ಮಾಡುವಾಗ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ, ಹಂತಗಳಲ್ಲಿ ಹಣವನ್ನು ತೆಗೆದುಕೊಳ್ಳದೆ ದೊಡ್ಡ ಮೊತ್ತವನ್ನು ಮುಂಚಿತವಾಗಿ ತೆಗೆದುಕೊಳ್ಳುವುದು ಹಾಗೂ ಮನೆಯ ಮಾಲೀಕತ್ವವನ್ನು ಬದಲಾಯಿಸುವ ಮೊದಲು ಎಲ್ಲಾ ಹಣವನ್ನು ತೆಗೆದುಕೊಳ್ಳುವುದು.

ಹೀಗೆ ವಿವಿಧ ರೀತಿಯಲ್ಲಿ ಸಾಧಕರನ್ನು ಮೋಸ ಮಾಡಲಾಗುತ್ತಿದೆ. ಅಂತಹ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮೋಸದ ವಿಧಾನಗಳು ನಡೆದಿದ್ದರೆ ಅಥವಾ ಯಾರಾದರೂ ಹಾಗೆ ಮಾಡಲು ಪ್ರಯತ್ನಿಸಿದರೆ, ಸಾಧಕರು ಅವರ ವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಲಿಖಿತವಾಗಿ ತಿಳಿಸಬೇಕು. ಆ ಮಾಹಿತಿಯ ಆಧಾರದ ಮೇಲೆ, ಇತರ ಸಾಧಕರು ಮೋಸಕ್ಕೊಳಗಾಗದಂತೆ ಪ್ರಯತ್ನಗಳನ್ನು ಮಾಡಬಹುದು.

ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ್ – 7058885610

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ್, ‘ಸನಾತನ ಆಶ್ರಮ, 24/B, ರಾಮನಾಥಿ, ಬಂದಿವಡೆ, ಫೋಂಡಾ, ಗೋವಾ. ಪಿನ್ – 403401

ವಿ ಅಂಚೆ : [email protected]

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕ ವಿಶ್ವಸ್ಥರು, ಸನಾತನ ಸಂಸ್ಥೆ.

ವಾಚಕರಲ್ಲಿ ವಿನಂತಿ !

ಸಾಧಕರು ಮತ್ತು ವಾಚಕರು ಈ ಲೇಖನವನ್ನು ಸಂಗ್ರಹದಲ್ಲಿ ಇಡಬೇಕು.